ADVERTISEMENT

ಇನ್ಫೊಸಿಸ್ ಪ್ರತಿಷ್ಠಾನದ ಸಹಯೋಗದಲ್ಲಿ ಇದೇ 12ರಿಂದ ಒಂದು ವಾರ ಬೊಂಬೆ ಹಬ್ಬ

ಇನ್ಫೊಸಿಸ್ ಪ್ರತಿಷ್ಠಾನದ ಸಹಯೋಗದಲ್ಲಿ ಭಾರತೀಯ ವಿದ್ಯಾಭವನ ಆಯೋಜನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 16:45 IST
Last Updated 9 ಮಾರ್ಚ್ 2023, 16:45 IST
ಇನ್ಫೊಸಿಸ್ ಪ್ರತಿಷ್ಠಾನದ ನಿರ್ದೇಶಕಿ ಶೃತಿ ಖುರಾನ ಮಾತನಾಡಿದರು. ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ ಮತ್ತು ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ರಾವ್ ಇದ್ದಾರೆ. –ಪ್ರಜಾವಾಣಿ ಚಿತ್ರ
ಇನ್ಫೊಸಿಸ್ ಪ್ರತಿಷ್ಠಾನದ ನಿರ್ದೇಶಕಿ ಶೃತಿ ಖುರಾನ ಮಾತನಾಡಿದರು. ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ ಮತ್ತು ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ರಾವ್ ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ಇನ್ಫೊಸಿಸ್ ಪ್ರತಿಷ್ಠಾನದ ಸಹಯೋಗದಲ್ಲಿ ಭಾರತೀಯ ವಿದ್ಯಾಭವನವು ಇದೇ 12ರಿಂದ 18ರವರೆಗೆ ‘ಬೊಂಬೆಯ ಭಾವಾಭಿವ್ಯಕ್ತಿಯಲ್ಲಿ ನವರಸಗಳು’ ಶೀರ್ಷಿಕೆಯಡಿ ಬೊಂಬೆ ಹಬ್ಬ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮಕ್ಕೆ ‘ಪ್ರಜಾವಾಣಿ’ ಮಾಧ್ಯಮ ಸಹಯೋಗವಿದ್ದು, ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಇ.ಎಸ್.ವಿ. ಸಭಾಂಗಣದಲ್ಲಿ ನಡೆಯಲಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್, ‘ಒಂದು ವಾರ ನಡೆಯುವ ಬೊಂಬೆ ಹಬ್ಬದಲ್ಲಿ ಪ್ರತಿದಿನ ವಿದ್ವಾಂಸರಿಂದ ಸಂಗೀತ, ಸಾಹಿತ್ಯ, ನೃತ್ಯ, ಚಿತ್ರಕಲೆ, ಶಿಲ್ಪಕಲೆ, ನಾಟಕ ಮತ್ತು ಸಿನಿಮಾಗಳಲ್ಲಿ ನವರಸಗಳ ಅಭಿವ್ಯಕ್ತಿ ಕುರಿತು ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ಬೊಂಬೆಗಳನ್ನು ಕುರಿತು ವಿಶ್ವವಿಖ್ಯಾತ ಸಿನಿಮಾಗಳೂ ಪ್ರದರ್ಶನಗೊಳ್ಳಲಿವೆ’ ಎಂದು ತಿಳಿಸಿದರು.

ADVERTISEMENT

‘12ರಂದು ಬೆಳಿಗ್ಗೆ 10.30ಕ್ಕೆ ಬೊಂಬೆ ಉತ್ಸವವನ್ನು ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 11.30ಕ್ಕೆ ಧಾತು ಪಪೆಟ್ ಥಿಯೇಟರ್ ‘ಬೊಂಬೆಗಳ ಕಾವ್ಯಾಭಿವ್ಯಕ್ತಿ’ಯನ್ನು ಪ್ರಸ್ತುತಪಡಿಸಲಿದೆ. ಸಂಜೆ 5ಕ್ಕೆ ಸುಚಿತ್ರ ಫಿಲ್ಮ್ ಸೊಸೈಟಿ ಬೊಂಬೆಗಳನ್ನು ಕುರಿತ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಿದೆ. 13ರಂದು ಸಂಜೆ 5.30ಕ್ಕೆ ಚೂಡಾಮಣಿ ನಂದಗೋಪಾಲ್ ಅವರಿಂದ ‘ಚಿತ್ರಕಲೆ ಮತ್ತು ಶಿಲ್ಪಗಳಲ್ಲಿ ನವರಸಗಳ ಅಭಿವ್ಯಕ್ತಿ’ ವಿಷಯದ ಮೇಲೆ ಉಪನ್ಯಾಸ, ಸಂಜೆ 6ಕ್ಕೆ ‘ಲಂಕಾ ದಹನ’ ಬೊಂಬೆಯಾಟ ನಡೆಯಲಿದೆ. 14ರಂದು ಸಂಜೆ 5.30ಕ್ಕೆ ಲಲಿತಾ ಶ್ರೀನಿವಾಸನ್ ಅವರಿಂದ ‘ಸಾಂಪ್ರದಾಯಿಕ ನೃತ್ಯಗಳಲ್ಲಿ ನವರಸಗಳ ಅಭಿವ್ಯಕ್ತಿ’ ವಿಷಯದ ಮೇಲೆ ಉಪನ್ಯಾಸ, ಸಂಜೆ 6ಕ್ಕೆ ವೀರಾಭಿಮನ್ಯು ಸೂತ್ರದ ಬೊಂಬೆ ರಂಗಪ್ರಸ್ತುತಿ ನಡೆಯಲಿವೆ’ ಎಂದು ತಿಳಿಸಿದರು.

‘15ರಂದು ಸಂಜೆ 5.30ಕ್ಕೆ ಎಚ್.ಎಸ್. ವೆಂಕಟೇಶಮೂರ್ತಿ ಅವರಿಂದ ‘ಸಾಹಿತ್ಯದಲ್ಲಿ ನವರಸಗಳ ಅಭಿವ್ಯಕ್ತಿ’ ವಿಷಯದ ಮೇಲೆ ಉಪನ್ಯಾಸ, ಸಂಜೆ 6ಕ್ಕೆ ‘ಇಂದ್ರಜಿತು ಕಾಳಗ’ ತೊಗಲು ಬೊಂಬೆಯಾಟ, 16ರಂದು ಸಂಜೆ 5.30ಕ್ಕೆ ಟಿ.ಎಸ್. ಸತ್ಯವತಿ ಅವರಿಂದ ‘ಶಾಸ್ತ್ರೀಯ ಸಂಗೀತದಲ್ಲಿ ನವರಸಗಳ ಅಭಿವ್ಯಕ್ತಿ’ ಎಂಬ ವಿಷಯದ ಮೇಲೆ ಉಪನ್ಯಾಸ, ಸಂಜೆ 6ಕ್ಕೆ ‘ಗಿರಿಜಾ ಕಲ್ಯಾಣ’ ಸೂತ್ರದ ಬೊಂಬೆಯಾಟ ನಡೆಯಲಿದೆ’ ಎಂದರು.

‘17ರಂದು ಸಂಜೆ 5.30ಕ್ಕೆ ಬಿ.ವಿ. ರಾಜಾರಾಂ ಅವರಿಂದ ‘ರಂಗ ಪ್ರಯೋಗಗಳಲ್ಲಿ ನವರಸಗಳ ಅಭಿವ್ಯಕ್ತಿ’ ವಿಷಯದ ಮೇಲೆ ಉಪನ್ಯಾಸ, ಸಂಜೆ 6ಕ್ಕೆ ‘ಬೊಂಬೆ ವಿಭಾವ’ ಬೊಂಬೆ ರಂಗ ಪ್ರಸ್ತುತಿ, 18ರಂದು ಸಂಜೆ 5.30ಕ್ಕೆ ಟಿ.ಎಸ್. ನಾಗಾಭರಣ ಅವರು ‘ಸಿನಿಮಾಗಳಲ್ಲಿ ನವರಸಗಳ ಅಭಿವ್ಯಕ್ತಿ’ ವಿಷಯದ ಮೇಲೆ ಉಪನ್ಯಾಸ ಹಾಗೂ ಸಂಜೆ 6ಕ್ಕೆ ‘ದೇವಿ ಮಹಾತ್ಮೆ’ ಯಕ್ಷಬೊಂಬೆಯಾಟ ನಡೆಯಲಿದೆ’ ಎಂದು ಹೇಳಿದರು.

ಪ್ರತಿದಿನ ಬೊಂಬೆ ಪ್ರದರ್ಶನ

‘ಪ್ರತಿದಿನ ಎಂ.ಆರ್. ಶ್ರೀನಿವಾಸ್, ರಂಗಪುತ್ಥಳಿ ಕಲಾವಿದರಿಂದ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಬೊಂಬೆ ಪ್ರದರ್ಶನ, ಕಲಾವಿದ ಜಿ.ಎಸ್.ಬಿ. ಅಗ್ನಿಹೋತ್ರಿ ನಿರ್ದೇಶನದಲ್ಲಿ ‘ಕಲಾಶಿಬಿರ’ ಹಾಗೂ ಎನ್. ಶ್ರೀದೇವಿ ಅವರಿಂದ ಬೊಂಬೆ ಅಂಚೆಚೀಟಿಗಳ ಪ್ರದರ್ಶನ ನಡೆಯಲಿದೆ. ಬೆಳಿಗ್ಗೆ 11ರಿಂದ ಸಂಜೆ 6 ಗಂಟೆಯವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಇರಲಿದೆ’ ಎಂದು ಇನ್ಫೊಸಿಸ್ ಪ್ರತಿಷ್ಠಾನದ ನಿರ್ದೇಶಕಿ ಶೃತಿ ಖುರಾನ ಹೇಳಿದರು.

12 ಕಲಾವಿದರಿಂದ ಚಿತ್ರಕಲಾ ಶಿಬಿರ

‘ಕಲಾಶಿಬಿರಕ್ಕೆ 12 ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ನಿರ್ಮಲಾ ಕುಮಾರಿ ಸಿ.ಎಸ್., ಜಯಂತ್ ಬಿ. ಹುಬ್ಳಿ, ಅಶೋಕ್ ಭಂಡಾರೆ, ವಿಮಲನಾಥನ್ ಎಸ್.ಎ., ಎಂ.ಎನ್. ಮೂರ್ತಿ, ಅಶೋಕ್ ಬಿ.ಎಸ್., ಸುನಿಲ್ ಮಿಶ್ರಾ, ಮೈಸೂರಿನ ಮಾಧವಿ ಎಂ.ಎಲ್, ಬೆಳಗಾವಿಯ ಅರುಣ್ ಕಡಾಪುರೆ, ಚಿತ್ರದುರ್ಗದ ರಾಜೀವ್ ಎಂ.ವೈ., ತುಮಕೂರಿನ ಅರುಣಾ ಜಿ. ಹಾಗೂ ಉತ್ತರ ಕನ್ನಡದ ಹರ್ಷ ಗಾಂವ್ಕರ್ ಅವರು ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸುವ ಕಲಾವಿದರಾಗಿದ್ದಾರೆ’ ಎಂದು ಕಲಾಶಿಬಿರದ ನಿರ್ದೇಶಕ ಗಣಪತಿ ಅಗ್ನಿಹೋತ್ರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.