ADVERTISEMENT

'ಇನ್ನೊಂದು ವರ್ಷ ಹಣದ ವಿಚಾರದಲ್ಲಿ ಹುಷಾರಾಗಿರಿ' ಪುರುಷೋತ್ತಮ ಬಿಳಿಮಲೆ ಕಿವಿಮಾತು

ಡಾ.ಪುರುಷೋತ್ತಮ ಬಿಳಿಮಲೆ
Published 16 ಆಗಸ್ಟ್ 2019, 6:53 IST
Last Updated 16 ಆಗಸ್ಟ್ 2019, 6:53 IST
ಪುರುಷೋತ್ತಮ ಬಿಳಿಮಲೆ
ಪುರುಷೋತ್ತಮ ಬಿಳಿಮಲೆ   

ದೇಶದ ಆರ್ಥಿಕ ಪರಿಸ್ಥಿತಿಯ ಇಣುಕು ನೋಟ ನೀಡುವ ಬಹಿರಂಗ ಪತ್ರವೊಂದನ್ನು ನವದೆಹಲಿಯ ಜವಹರಲಾಲ್ ನೆಹರು ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಪುರುಷೋತ್ತಮ ಬಿಳಿಮಲೆ ಫೇಸ್‌ಬುಕ್‌ ನಲ್ಲಿ ಬರೆದಿದ್ದಾರೆ. ಅದರ ಪೂರ್ಣಪಾಠ ಇಲ್ಲಿದೆ.

ಮುಂದಿನ ಒಂದು ವರ್ಷ ಜಾಗ್ರತೆಯಾಗಿರೋಣ

ಫೇಸ್ ಬುಕ್ ನಲ್ಲಿರುವ ನನ್ನ ಅನೇಕ ಗೆಳೆಯರು ಆರ್ಥಿಕವಾಗಿ ದುರ್ಬಲರೆಂಬುದನ್ನು ನಾನು ಬಲ್ಲೆ. ಇಂಥ ಗೆಳೆಯರ/ಗೆಳತಿಯರ ಸಾಮಾಜಿಕ ಕಳಕಳಿ ಮಾತ್ರ ಅತ್ಯುನ್ನತ ಮಟ್ಟದ್ದು. ಮಾನವನ ಘನತೆಗೆ ಕುಂದು ತರುವ ಯಾವುದೇ ವಿಷಯಗಳ ಮೇಲೆ ಅವರೆಲ್ಲ ತುಂಬ ದಿಟ್ಟವಾಗಿ , ಎಷ್ಟೋಬಾರಿ ಮುಗ್ಧವಾಗಿ ಬರೆಯುತ್ತಿದ್ದಾರೆ. ಅಂಥ ಗೆಳೆಯರ ಬಗ್ಗೆ ಹೆಮ್ಮೆಪಡುತ್ತಾ ಈ ಕೆಳಗಿನ ಟಿಪ್ಪಣಿ-

ADVERTISEMENT

ಮುಂದಿನ ಕನಿಷ್ಠ ಒಂದು ವರುಷಗಳ ಕಾಲ ಬಡ ಭಾರತೀಯರು ತುಂಬ ಕಷ್ಟಗಳನ್ನು ಇದಿರಿಸಬೇಕಾಗಿದೆ. ಮಧ್ಯಮ ವರ್ಗದವರು ಕೂಡಾ ಈ ಆರ್ಥಿಕ ಸಂಕಷ್ಟಗಳಿಗೆ ಬಲಿಯಾಗಬೇಕಾದ ಎಲ್ಲ ಲಕ್ಷಣಗಳಿವೆ. ಹಾಗಾಗಿ ನಾವು ಅನೇಕ ವಿಷಯಗಳಲ್ಲಿ ಮುಖ್ಯವಾಗಿ ನಮ್ಮ ಹಣಕಾಸಿನ ವಿಷಯಗಳಲ್ಲಿ ತುಂಬ ಎಚ್ಚರಿಕೆಯನ್ನು ವಹಿಸಬೇಕಾಗಿದೆ.

1. ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಹದಗೆಟ್ಟಿದ್ದು, ಅದು ಸುಧಾರಿಸಿಕೊಳ್ಳಲು ಬಹಳ ಸಮಯ ಬೇಕು. ಕೇಂದ್ರ ಸರಕಾರಕ್ಕೆ ಈ ಕುರಿತು ಸರಿಯಾಗಿ ಮಾರ್ಗದರ್ಶನ ಮಾಡಬಲ್ಲ ಆರ್ಥಿಕ ತಜ್ಞರಾರೂ ಇದ್ದಂತಿಲ್ಲ. ಇದ್ದವರು ಬಿಟ್ಟು ಹೋಗಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಹಣ ಹರಿದು ಬರುತ್ತಿಲ್ಲ, ಸಾಲ ತೆಗೆದುಕೊಂಡವರು ಹಣ ಹಿಂದಿರುಗಿಸುತ್ತಿಲ್ಲ ( ಈ ಒತ್ತಡ ತಾಳಲಾರದೆ, ಬ್ಯಾಂಕುಗಳಲ್ಲಿ ಕೆಲಸ ಮಾಡುವ ಕೆಲವು ಅಧಿಕಾರಿಗಳು ಸ್ವಯಂ ನಿವೃತ್ತಿ ಪಡೆಯುತ್ತಿದ್ದಾರೆ). ಹೀಗಾಗಿ ಬ್ಯಾಂಕುಗಳನ್ನು ಹೆಚ್ಚು ನಾವು ನೆಚ್ಚಿಕೊಳ್ಳುವಂತಿಲ್ಲ.

2. ಕಟ್ಟಿರುವ ಮನೆಗಳು ಮಾರಾಟವಾಗದೆ ಹಾಗೇ ಉಳಿಯುತ್ತಿವೆ ( ನೋಯ್ಡಾ, ಫರಿದಾಬಾದ್ ಮತ್ತು ಗುರುಗ್ರಾಮದಲ್ಲಿ ಪರಿಸ್ಥಿತಿ ವಿಷಮಿಸಿದೆ. ಅರ್ಧ ಕಟ್ಟಿ ಉಳಿದ ಮನೆಗಳನ್ನು ಸರಕಾರವೇ ಪೂರ್ಣಗೊಳಿಸಲು ಸುಪ್ರಿಂ ಕೋರ್ಟು ಆದೇಶ ನೀಡಿದೆ. (ಸರಕಾರ ಹೇಗೆ ಈ ಕೆಲಸವನ್ನು ಪೂರ್ಣಗೊಳಿಸುವುದೋ ಯಾರಿಗೂ ತಿಳಿಯದು)

3. ಹೊಸ ಮನೆಗಳು/ಕಟ್ಟಡಗಳು ನಿರೀಕ್ಷಿತ ವೇಗದಲ್ಲಿ ಮೇಲೇಳದೇ ಇರುವುದರಿಂದ ಸ್ಟೀಲ್, ಸಿಮೆಂಟ್, ಮತ್ತಿತರ ಸಾಮಗ್ರಿಗಳಿಗೆ ಬೇಡಿಕೆ ಇಲ್ಲವಾಗಿದೆ.

4. ಅಟೋಮೋಬಾಯಿಲ್ ಸೆಕ್ಟರ್ ಈಗಾಗಲೇ 350000 ಉದ್ಯೋಗಿಗಳನ್ನು ಕಳಕೊಂಡಿದೆ. ಮಾರುತಿ 16% ನಷ್ಟವನ್ನು ತೋರಿಸಿದೆಯಲ್ಲದೆ, ಶೇಕಡಾ 50 ಉತ್ಪಾದನೆಯನ್ನು ಕಡಿತಗೊಳಿಸಿದೆ. ಟಾಟಾ ಮೋಟಾರ್ಸ ನವರು ಪೂನಾ ಮತ್ತು ಜಮಶೆದ್ ಪುರ್ ನ ತನ್ನ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಿದ್ದು, 8000 ಕೋಟಿ ರೂಪಾಯಿಗಳ ನಷ್ಟವನ್ನು ಡಿಕ್ಲೇರ್ ಮಾಡಿದೆ. ಮೊದಲ ಬಾರಿಗೆ ದ್ವಿಚಕ್ರ ವಾಹನಗಳ ಮಾರಾಟ ಕುಸಿದಿದೆ. ಪತಂಜಲಿ ಕೂಡಾ ತನ್ನ ಜಾಹೀರಾತುಗಳಿಗೆ ಕಡಿವಾಣ ಹಾಕಿದೆ. 2018ರಲ್ಲಿ ಅದು ತನ್ನ ಆದಾಯದಲ್ಲಿ 10% ಕಡಿತ ತೋರಿಸಿದೆ.

5. ಖಾಸಗಿಯವರು ಉತ್ಪಾದನೆ ಸ್ಥಗಿತಗೊಳಿಸಿದಾಗ, ಸಹಜವಾಗಿ ಸರಕಾರದ ಆದಾಯ ಇನ್ನಷ್ಟು ಕಡಿಮೆಯಾಗುತ್ತದೆ. ಲಾರಿಗಳನ್ನು ಬಾಡಿಗೆಗೆ ಕೊಳ್ಳುವವರಲ್ಲಿ ಈಗಾಗಲೇ ಶೇಕಡಾ 15 ಕಡಿತವುಂಟಾಗಿ, ಲಾರಿ ಚಾಲಕರು ಉದ್ಯೋಗವಿಲ್ಲದೆ ಅಳುತ್ತಿದ್ದಾರೆ. ಓಡಾಡುವವರಿಲ್ಲದೆ ವಿಮಾನಗಳು ನಿರಂತರ ನಷ್ಟ ಅನುಭವಿಸುತ್ತಿದ್ದು ಪ್ರಯಾಣಿಕರಲ್ಲಿ 25% ಕಡಿತ ಉಂಟಾಗಿದೆ. ಈ ವಿತ್ತೀಯ ಕೊರತೆಯನ್ನು ತುಂಬಿಕೊಳ್ಳಲು ಸರಕಾರ ಇನ್ನಷ್ಟು ತೆರಿಗೆಗಳನ್ನು ನಮ್ಮ ಮೇಲೆ ಹೇರುತ್ತದೆ.

6. ಜನರ ಕೊಳ್ಳುವ ಶಕ್ತಿಯು ಈಗಾಗಲೇ 20% ಕಡಿಮೆಯಾಗಿದೆ.

7. ಕೆಲವು ಆಯ್ದ ಜಾಗಗಳನ್ನು ಹೊರತು ಪಡಿಸಿದರೆ, ಉಳಿದೆಡೆಗಳಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಭಾರತದ ಅರ್ಥವ್ಯವಸ್ಥೆಗೆ ಮಾರಕ ಹೊಡೆತ ನೀಡಿದ ಡಿಮೋನಿಟೈಸೇಶನ್ ನಿಂದಾಗಿ ಸಣ್ಣ ಉದ್ಯಮಿಗಳೆಲ್ಲಾ ಬೀದಿ ಪಾಲಾಗಿದ್ದಾರೆ. ಇದು ಪರೋಕ್ಷವಾಗಿ ದೊಡ್ಡ ಉದ್ಯಮಗಳ ಮೇಲೂ ಪರಿಣಾಮ ಬೀರಿದೆ.

8. ಭಾರತ ಸರಕಾರವು 2020ರಲ್ಲಿ ಐದು ಟ್ರಿಲಿಯನ್ ಅರ್ಥವ್ಯಸ್ಥೆಯನ್ನು ಹೊಂದುವುದಾಗಿ ಘೋಷಿಸಿದೆ. ಇದು ಸಾಧ್ಯವಾಗಬೇಕಾದರೆ, ಭಾರತವು 14-15% ಅಭಿವೃದ್ಧಿಯನ್ನು ಸಾಧಿಸಬೇಕು. ಈಗ ಇರುವಂತೆ ಸರಕಾರ 7% ಅಭಿವೃದ್ಧಿಯನ್ನು ಘೋಷಿಸುತ್ತಿದ್ದರೂ ವಾಸ್ತವವಾಗಿ ಅದಿನ್ನೂ 4% ಆಗಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಹೀಗಾಗಿ 14-15 % ಅಭಿವೃದ್ಧಿ ಮರೀಚಿಕೆಯೇ ಸರಿ.

9. ಅಂಕಿ ಅಂಶಗಳನ್ನು ಬೇಕಾದಂತೆ ತಿದ್ದುವ ಪರಿಪಾಠ ಬೆಳೆಯುತ್ತಿದ್ದು, ಸರಕಾರ ಹೇಳಿದ್ದನ್ನು ಯಾರೂ ನಂಬುತ್ತಿಲ್ಲವಾದ್ದರಿಂದ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ವ್ಯತ್ಯಯ ಕಾಣಲಾರಂಭಿಸಿದೆ.

10. ಮಳೆ ಇಲ್ಲದೆ/ ಹೆಚ್ಚು ಮಳೆಬಂದು, ರೈತರು ಆತ್ಮಹತ್ಯೆ ಮಾಡಿಕೊಳ್ಳಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಆರ್ಥಿಕ ಕುಸಿತದ ಸಮಸ್ಯೆಯು ಭಾರತಕ್ಕೆ ಮಾತ್ರ ಸೀಮಿತವಾಗಿರದೆ, ಜಾಗತಿಕವಾಗಿದೆ. ಆಳುವವರು ಈ ಆರ್ಥಿಕ ವಿಫಲತೆಯನ್ನು ಜನರೆದುರು ತೆರೆದಿಡದೆ, ಅದನ್ನು ಮುಚ್ಚಿ ಹಾಕಲು ಬಗೆ ಬಗೆಯ ತಂತ್ರಗಳನ್ನು ಹೆಣೆಯುತ್ತಿರುವುದನ್ನು ನಾವು ದಿನನಿತ್ಯ ಕಾಣುತ್ತಿದ್ದೇವೆ. ಹಿಂದೂ’ಗಳೆಲ್ಲರೂ ಒಂದಾದ ಆನಂತರವೂ ಮೇಲೆ ಹೇಳಿದ ಭಾರತದ ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ

ಹೀಗಾಗಿ ಕನಿಷ್ಠ ಮುಂದಿನ ಒಂದು ವರ್ಷಗಳವರೆಗೆ ದಯವಿಟ್ಟು ತಮ್ಮ ಹಣ ಕಾಸಿನ ವಿಚಾರದಲ್ಲಿ ಜಾಗ್ರತೆಯಾಗಿರಿ. ಶ್ರೀಮಂತರು ಸಹಾಯ ಮಾಡುವುದಿಲ್ಲ. ಮಾಡದಿರುವುದರಿಂದಲೇ ಅವರು ಶ್ರೀಮಂತರಾದದ್ದು. ಕಷ್ಟಕಾಲದಲ್ಲಿ ನೆರವಿಗೆ ಬರುವವರೂ ಕಡಿಮೆ, ಮತ್ತು ಅವರೂ ಕಷ್ಟದಲ್ಲಿರುತ್ತಾರೆ ಎಂಬುದನ್ನು ಮರೆಯದಿರೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.