ADVERTISEMENT

ಪುಷ್ಪಾ ಅಮರನಾಥ್‌ಗೆ ಮಹಿಳಾ ಕಾಂಗ್ರೆಸ್‌ ‘ಹಸ್ತ’

ಕೆಪಿಸಿಸಿ ಮಹಿಳಾ ಘಟಕ; ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 20:15 IST
Last Updated 19 ನವೆಂಬರ್ 2018, 20:15 IST
   

ಬೆಂಗಳೂರು: ‘ಮಹಿಳಾ ಕಾಂಗ್ರೆಸ್‌ ನಡೆಸೋದು ಅಷ್ಟೊಂದು ಸುಲಭ ಅಲ್ಲ. ಮಹಿಳೆ ಅಂದರೆ ಸಂಘರ್ಷ. ಅಧಿಕಾರ ಇರುವುದು ಚಲಾಯಿಸಲಿಕ್ಕಲ್ಲ. ಅದೊಂದು ಅವಕಾಶ’.

– ಹೀಗೆಂದು ಕಿವಿಮಾತು ಹೇಳಿದ ಕೆಪಿಸಿಸಿ ಮಹಿಳಾ ಘಟಕದ ನಿಕಟಪೂರ್ವ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ ತಮ್ಮ ಸ್ಥಾನವನ್ನು ಪುಷ್ಪಾ ಅಮರನಾಥ್‌ ಅವರಿಗೆ ಸೋಮವಾರ ಹಸ್ತಾಂತರಿಸಿದರು.

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ 101ನೇ ಜನ್ಮದಿನದಂದೇ ಕೆಪಿಸಿಸಿ ಮಹಿಳಾ ಘಟಕದ ಸಾರಥ್ಯ ಪಡೆದ ಪುಷ್ಪಾ, ‘ಅಧಿಕಾರವನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ. ಎಲ್ಲರ ಸಹಕಾರ ಮುಖ್ಯ’ ಎಂದು ಭಾವುಕರಾಗಿ ಹೇಳಿದರು.

ADVERTISEMENT

ಇದಕ್ಕೂ ಮುನ್ನ ಹೆಬ್ಬಾಳ್ಕರಅವರು ಪುಷ್ಪಾ ಅವರ ಕೈ ಹಿಡಿದು ಸಭೆಯತ್ತ ತೋರಿ ಒಗ್ಗಟ್ಟು ಪ್ರದರ್ಶಿಸಿದರು.

ಮಹಿಳೆಯರ ಸಾಮರ್ಥ್ಯ ಬಿಂಬಿಸುವ, ಸ್ಫೂರ್ತಿ ತುಂಬುವ ಆಶಯದ ಮಾತುಗಳು, ಇಂದಿರಾ ಗಾಂಧಿ ಕುರಿತ ಸಾಕ್ಷ್ಯಚಿತ್ರ ವೇದಿಕೆಯಲ್ಲಿದ್ದ ಪರದೆಯಲ್ಲಿ ಬಿತ್ತರವಾಯಿತು. ಮಹಿಳೆಯರನ್ನು ಕಡೆಗಣಿಸಿದರೆ ಪಕ್ಷಕ್ಕಾಗುವ ಹೊಡೆತ, ಪಕ್ಷದ ವ್ಯವಸ್ಥೆಯ ಮೇಲಾಗುವ ಪರಿಣಾಮಗಳನ್ನೂ ನಾಯಕರು ವಿಶ್ಲೇಷಿಸಿದರು.

‘ಪರಸ್ಪರ ಕಾಲೆಳೆಯುವಿಕೆ ಬೇಡ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವಲ್ಲಿ ಮಹಿಳಾ ಕಾಂಗ್ರೆಸ್‌ನ ಜವಾಬ್ದಾರಿ ದೊಡ್ಡದು’ ಎಂದು ಕಿವಿಮಾತು ಹೇಳಿದರು.

ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್‌ ವಿಡಿಯೊ ಸಂದೇಶದ ಮೂಲಕ ಶುಭ ಹಾರೈಸಿದರು.

ಪಕ್ಷ ಸಂಘಟನೆಗೆ ಸಂಬಂಧಿಸಿ ‘ಪ್ರಾಜೆಕ್ಟ್‌ ಶಕ್ತಿ’ ಯೋಜನೆ ಪರಿಚಯಿಸಲಾಯಿತು. ಹೊಸ ಯೋಜನೆ ‘ಪ್ರಿಯದರ್ಶಿನಿ’ಯನ್ನು ಬಿಡುಗಡೆ ಮಾಡಲಾಯಿತು.

‘ಎಲ್ಲರೂ ನಮ್ಮ ಹೆಣ್ಣು ಮಕ್ಕಳೇ...’

‘ಎಲ್ಲರೂ ನಮ್ಮ ಹೆಣ್ಣು ಮಕ್ಕಳೇ. ಆದರೆ ಪುಷ್ಪಾ ನನ್ನ ಊರಿನವಳು. ನಮ್ಮ ತವರುಮನೆಯವಳು’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು. ‘ಅಂದ್ರೆ ನಾವೆಲ್ಲಾ ದತ್ತು ಮಕ್ಕಳಾ?’ ಎಂದು ಅವರ ಸುತ್ತಲೂ ಇದ್ದ ಮಹಿಳಾ ಕಾರ್ಯಕರ್ತರು ಪ್ರಶ್ನಿಸಿದರು. ‘ಹಾಗಲ್ಲ. ಎಲ್ಲರೂ ನಮ್ಮ ಹೆಣ್ಣು ಮಕ್ಕಳೇ’ ಎಂದು ಮುಂದೆ ಏನು ಹೇಳಬೇಕೆಂದು ತೋಚದ ಸಿದ್ದರಾಮಯ್ಯ, ‘ನೀವೆಲ್ಲಾ ಸಹಜೀವಿಗಳು. ಸಹಬಾಳ್ವೆ ನಮ್ಮ ಸಂವಿಧಾನದ ತತ್ವ. ಅದರ ಪ್ರಕಾರ ನಡೆಯುವವರು ನಾವು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.