ADVERTISEMENT

ಮದ್ಯದ ಮೇಲೆ ವಿಶೇಷ ಕೋವಿಡ್ ಸೆಸ್ ಹಾಕಿ: ಚಲನಚಿತ್ರ ನಿರ್ದೇಶಕ ಭಗವಾನ್ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಮೇ 2020, 13:51 IST
Last Updated 2 ಮೇ 2020, 13:51 IST
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರಾಜಾಜಿನಗರ ಕ್ಷೇತ್ರದ ಸಾರ್ವಜನಿಕರಿಂದ ವಿಡಿಯೋ ಸಂವಾದ ನಡೆಸಿದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರಾಜಾಜಿನಗರ ಕ್ಷೇತ್ರದ ಸಾರ್ವಜನಿಕರಿಂದ ವಿಡಿಯೋ ಸಂವಾದ ನಡೆಸಿದರು.   

ಬೆಂಗಳೂರು: ಇಡೀ ದೇಶದಲ್ಲಿ ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯ ನಿಷೇಧದಿಂದ ಸಮಾಜದಲ್ಲಿ ಶಾಂತಿ ಲಭಿಸಿದೆ. ಆದರೆ ಮದ್ಯ ಮಾರಾಟ ಪುನರಾರಂಭಿಸುವ ಅನಿವಾರ್ಯತೆ ಸೃಷ್ಟಿಯಾದರೆ ಮದ್ಯಕ್ಕೆ ವಿಶೇಷ ಕೋವಿಡ್ ಸೆಸ್ ವಿಧಿಸಿ ಸರ್ಕಾರದ ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂಬ ಸಲಹೆಯನ್ನು ದೊರೆ ಭಗವಾನ್ ಖ್ಯಾತಿಯ ಪ್ರಸಿದ್ಧ ಹಾಗೂ ಹಿರಿಯ ಚಲನಚಿತ್ರ ನಿರ್ದೇಶಕ ಭಗವಾನ್ ಸರ್ಕಾರಕ್ಕೆ ನೀಡಿದ್ದಾರೆ.

ರಾಜಾಜಿನಗರ ಕ್ಷೇತ್ರದಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತಂತೆ ಅಭಿಪ್ರಾಯ ಪಡೆಯಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕ್ಷೇತ್ರದ ಸಾರ್ವಜನಿಕರಿಂದ ವಿಡಿಯೋ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದಾಗ ಕರೆ ಮಾಡಿದ ರಾಜಾಜಿನಗರ ನಿವಾಸಿ ಆದ ಭಗವಾನ್, ದೇಶದಲ್ಲಿ ಇನ್ನು ಮುಂದೆ ಆರೋಗ್ಯಕರ ಪರಿಸರ ಹೆಚ್ಚಾಗಿ ರೂಢಿಸಲು ಕ್ರಮ ಕೈಗೊಳ್ಳಬೇಕು. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಜನರಿಗೆ ದಂಡ ವಿಧಿಸುವುದು ಕಾಯ್ದೆಯಾಗಬೇಕು ಎಂದರು.

ಸಚಿವರು ಪ್ರಾಸ್ತಾವಿಕವಾಗಿ ಮಾತನಾಡಿ, ಪಡಿತರ ಕಿಟ್, ಆಹಾರದ ಪಾಕೆಟ್, ರೋಗಿಗಳಿಗೆ ಅಗತ್ಯ ಔಷಧಿಗಳ ಪೂರೈಕೆಯಾಗುತ್ತಿದ್ದು, ಆ ಪೂರೈಕೆ ಇನ್ನೂ ಸುಲಲಿತವಾಗಲು ಸಲಹೆ ಸೂಚನೆಗಳನ್ನು ಯಾಚಿಸಿದರು. ಸಮಾಜ ಸೇವಕರು, ಹಿರಿಯ ನಾಗರಿಕರು, ವೈದ್ಯರು, ಇಂಜನಿಯರ್, ಮಹಿಳೆಯರು, ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ರಾಜಸ್ಥಾನದ ಓರ್ವ ಕಾರ್ಮಿಕ ಸೇರಿದಂತೆ 38 ಮಂದಿ ಇಂದಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಸೇರಿದಂತೆ ಆರೋಗ್ಯಕರ ವಾತಾವರಣ ಹೆಚ್ಚಿಸುವ ಕುರಿತಂತೆ ಹಲವಾರು ಸಲಹೆ ಸೂಚನೆ ನೀಡಿದರು.

ADVERTISEMENT

ಇನ್ನೊಬ್ಬ ಹಿರಿಯ ಚಲನಚಿತ್ರ ನಿರ್ದೇಶಕ ಭಾರ್ಗವ, ನಮ್ಮ ಜನರಲ್ಲಿ ಇನ್ನೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುರು ರೂಢಿಯಾಗಿಲ್ಲ, ಈ ಕುರಿತು ಸಾರ್ವಜನಿಕ ಸ್ಥಳಗಳಲ್ಲಿ ಬೋರ್ಡ್ ಹಾಕುವುದು ಸೇರಿದಂತೆ ಜಾಗೃತಿ ಮೂಡಿಸಲು ನಾನಾ ಕ್ರಮಗಳನ್ನು ರೂಢಿಸಿಕೊಳ್ಳಬೇಕು ಎಂದರು.

ಕ್ಷೇತ್ರದಲ್ಲಿ ಆಹಾರ, ಪಡಿತರ ಕಿಟ್, ಹಾಲು ಪೂರೈಕೆ ತುಂಬಾ ಚೆನ್ನಾಗಿ ನಡೆಯುತ್ತಿದ್ದು, ತಮ್ಮ ಕಾರ್ಯಕರ್ತರು ಮನೆ ಮನೆಗೆ ತಲುಪಿಸುವಲ್ಲಿ ಸಮರ್ಪಣಾ ಮನೋಭಾವದಿಂದ ದುಡಿಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ಕೈಗೊಂಡಿರುವ ಕ್ರಮಗಳು ಚೆನ್ನಾಗಿದ್ದು, ಅವರ ಕ್ರಮಗಳು ಇಡೀ ವಿಶ್ವದಾದ್ಯಂತ ಶ್ಲಾಘನೆಗೊಳಗಾಗಿವೆ ಎಂದು ಅಮೆರಿಕದಲ್ಲಿರುವ ತಮ್ಮ ಪುತ್ರನೊಬ್ಬ ಹೇಳಿದ್ದಾನೆಂಬುದನ್ನು ಹಿರಿಯ ನಾಗರಿಕರೊಬ್ಬರು ಹೇಳಿದರು.

ಫಿಜಿಯೋಥೆರಪಿ ವೈದ್ಯೆ ಸುಪ್ರಿಯಾ ಹರೀಶ್, ರೋಗಿಗಳಿಗೆ ಫಿಜಿಯೋಥೆರಪಿ ಕೈಗೊಳ್ಳುವುದು ತೀರಾ ಅಗತ್ಯವಾಗಿದೆ. ಆದರೆ ಇದರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತೀರಾ ಕಷ್ಟವಾಗುವುದರಿಂದ ಈ ಕುರಿತಂತೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಫಿಜಿಯೋಥೆರಪಿ ಆರಂಭಿಸಲು ಅವಕಾಶ ನೀಡಬೇಕೆಂದರು.

ಕೈಗಾರಿಕೋದ್ಯಮಿ ಶ್ರೀವಾಣಿ, ಲಾಕ್‌ಡೌನ್‌ನಿಂದ ಮೇಲ್ವರ್ಗದವರಾದ ಪೀಣ್ಯ ಭಾಗದ ಕೈಗಾರಿಕೋದ್ಯಮಿಗಳಿಗೆ ಆರು ತಿಂಗಳು ತೆರಿಗೆ ಮಾಫಿ ಮಾಡುವುದು ಸೇರಿದಂತೆ ವಿವಿಧ ಸೌಲಭ್ಯಗಳನ್ನು ವಿಸ್ತರಿಸುವುದರ ಅಗತ್ಯವಿದೆ ಎಂದರು.

ಪೀಣ್ಯದ ಕೈಗಾರಿಕಾ ಪ್ರದೇಶದ ಇಂದಿನ ಪರಿಸ್ಥಿತಿ ಕುರಿತಂತೆ ಅಧ್ಯಯನ ಮಾಡಿ ವರದಿ ನೀಡಲು ಮುಖ್ಯಮಂತ್ರಿ ಸಮಿತಿ ರಚಿಸಿದ್ದಾರೆ. ವರದಿ ಅನ್ವಯ ಕೈಗೊಂಡು ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳುವುದಾಗಿ ಸುರೇಶ್ ಕುಮಾರ್ ತಿಳಿಸಿದರು.

ರಾಜಾಜಿನಗರ ವ್ಯಾಪ್ತಿಯ ಸಾರ್ವಜನಿಕ ಆಸ್ಪತ್ರೆಗಳಿಗೆ ಕೋವಿಡ್ ನಿರ್ವಹಣೆಗೆ ಒಂದು ಅಂಬುಲೆನ್ಸ್ ಅಗತ್ಯವನ್ನು ಓರ್ವ ವೈದ್ಯರು ನೀಡಿದಾಗ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಸಚಿವರಿಂದ ಭರವಸೆ. ಮತ್ತೊಬ್ಬ ವೈದ್ಯರು, ಈ ಲಾಕ್ ಡೌನ್ ಸಂದರ್ಭದಲ್ಲಿ ನಾಗರಿಕರ ಮಾನಸಿಕ ಆರೋಗ್ಯದ ರಕ್ಷಣೆಗೆ ಮುಂದಾಗಬೇಕೆಂದು ಕೋರಿದಾಗ, ಬೆಂಗಳೂರಿನ ನಿಮ್ಹಾನ್ಸ್ ಈ ಬಗ್ಗೆ ವಿಶಿಷ್ಟ ಸಾಧನೆಗೆ ಇಡೀ ದೇಶದ ಗಮನ ಸೆಳೆದಿರುವುದನ್ನು ಸಚಿವರು ಅವರ ಗಮನಕ್ಕೆ ತಂದರು.

ಮಹಿಳೆಯೊಬ್ಬರು ಪೀಣ್ಯದ ಆಚೆ ಬೆಂಗಳೂರು ಗ್ರಾಮಾಂತರ ಭಾಗದ 10 ಕುಟುಂಬಗಳಿಗೆ ಪಡಿತರ ಹಾಗೂ ಆಹಾರ ಪೂರೈಕೆಯಾಗುತ್ತಿಲ್ಲ ಎಂದಾಗ ಅಲ್ಲಿನ ನಿವಾಸಿಗಳ ಪಟ್ಟಿ ನೀಡಿದರೆ ಆ ಭಾಗದ ಅಧಿಕಾರಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾ ಪಟ್ಟಿ ಪ್ರಕಟ ಮಾಡುವುದು, ಪಠ್ಯ ಪುಸ್ತಕಗಳಲ್ಲಿ ಕೋವಿಡ್ ಸೃಷ್ಟಿಸಿರುವ ಸಾಮಾಜಿಕ ಪರಿಸ್ಥಿಯ ಕುರಿತಾದ ಪಠ್ಯಗಳನ್ನು ಅಳವಡಿಸಿಕೊಳ್ಳುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಾರ್ವಜನಿಕರು ಸಚಿವರ ಗಮನಕ್ಕೆತಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.