ಪ್ರತಿವರ್ಷ ಜೂನ್ ತಿಂಗಳು ಬಂತೆಂದರೆ ಸಾಕು, ಶಾಲೆಗಳಲ್ಲಿ ಮಕ್ಕಳ ಕಲರವ ತುಂಬಿ ತುಳುಕುತ್ತಿತ್ತು. ಈ ವರ್ಷ, ಅಂತಹ ಸಂಭ್ರಮವನ್ನು ಕೋವಿಡ್–19 ಕಸಿದುಕೊಂಡಿದ್ದು, ಆಗಸ್ಟ್ ತಿಂಗಳು ಕಳೆದರೂ ಶಾಲೆಗಳು ಆರಂಭವಾಗಿಲ್ಲ. ಆದರೂ ಮಕ್ಕಳನ್ನು ನಿರಂತರವಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ‘ವಿದ್ಯಾಗಮ’ ಎಂಬ ಕಾರ್ಯಕ್ರಮವನ್ನೇನೋ ಆರಂಭಿಸಿದೆ. ಜತೆಗೆ ಕಾರ್ಯಕ್ರಮದ ಚಟುವಟಿಕೆಗಳನ್ನು ಯಾವ ರೀತಿ ನಡೆಸಬೇಕು ಎಂಬ ವಿಷಯವಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಸುದೀರ್ಘವಾದ ಮಾರ್ಗದರ್ಶಿಯನ್ನೂ ನೀಡಿದೆ.
ರಾಜ್ಯದಾದ್ಯಂತ ಎಲ್ಲೆಡೆ ಈ ಕಾರ್ಯಕ್ರಮ ನಡೆಯುತ್ತಿದೆ. ಇದರ ಅನುಷ್ಠಾನ ಹಂತದ ಅಧಿಕಾರಿಗಳು ಹಾಗೂ ಶಿಕ್ಷಕರು ನೀಡುತ್ತಿರುವ ವರದಿಗಳಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂಬ ಭಾವನೆ ಸರ್ಕಾರಕ್ಕೆ ಬಂದಿರಬಹುದು. ಆದರೆ, ವಾಸ್ತವ ಸ್ಥಿತಿ ಬೇರೆಯೇ ಇದೆ ಎಂಬುದು ಅನುಷ್ಠಾನ ಹಂತದಲ್ಲಿರುವ ಶಿಕ್ಷಕರಿಗೆ ಗೊತ್ತಿದೆ. ವಾಸ್ತವ ಸಂಗತಿಯನ್ನು ಆಧರಿಸಿದ ವರದಿಯನ್ನು ಸಲ್ಲಿಸಿ ಸಚಿವರು, ಹಿರಿಯ ಅಧಿಕಾರಿಗಳ ಅವಕೃಪೆಗೆ ಏಕೆ ಒಳಗಾಗಬೇಕು ಎಂದು ಅವರು ಅರೆಬರೆ ಯಶಸ್ವಿ ವರದಿಗಳನ್ನು ಮಾತ್ರ ಕಳುಹಿಸುತ್ತಿದ್ದಾರೆ. ಹಾಗಾಗಿ ಕಾರ್ಯಕ್ರಮದ ಅನುಷ್ಠಾನದಲ್ಲಿ ಆಗುತ್ತಿರುವ ತೊಂದರೆಗಳು, ವೈಫಲ್ಯಗಳು ಬಿಂಬಿತವಾಗುತ್ತಿಲ್ಲ.
ಯಾವುದೇ ಕಾರ್ಯಕ್ರಮ ಅಥವಾ ಯೋಜನೆಯನ್ನು ರೂಪಿಸುವ ಮೊದಲು, ಕೆಳಹಂತದಲ್ಲಿ ಅವುಗಳನ್ನು ಅನುಷ್ಠಾನ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿ (ಇಲ್ಲಿ ಶಿಕ್ಷಕರು) ಅಭಿಪ್ರಾಯವನ್ನು ಕಾರ್ಯಕ್ರಮ ರೂಪಿಸುವವರು ಆಲಿಸಲು ಮನಸ್ಸು ಮಾಡುವುದಿಲ್ಲ. ಹೀಗಾಗಿ ಸಮಸ್ಯೆಗಳು, ತೊಂದರೆಗಳು ಅರಿವಿಗೆ ಬರುವುದಿಲ್ಲ. ಅದು ಎಷ್ಟು ಒಳ್ಳೆಯ ಕಾರ್ಯಕ್ರಮವೇ ಆಗಿದ್ದರೂ ಅದರ ಅನುಷ್ಠಾನಕ್ಕೆ ಇರುವ ಅಡೆತಡೆಗಳೇನು? ಅವುಗಳನ್ನು ಹೇಗೆ ಸರಿಪಡಿಸಬೇಕು? ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸರ್ಕಾರದ ಕಡೆಯಿಂದ ಹಣಕಾಸಿನ ನೆರವು ಸೇರಿ ಏನೇನು ಸೌಲಭ್ಯಗಳನ್ನು ಒದಗಿಸಬೇಕು ಎಂಬುದನ್ನು ತಿಳಿದುಕೊಳ್ಳದೇ ರೂಪಿಸಿದ ಯೋಜನೆಗಳು ಕಾಗದದ ಮೇಲೆ ಯಶಸ್ವಿಯಾಗಿರುತ್ತವೆ ಅಷ್ಟೆ. ಇಂತಹ ಅನುಭವ ಸರ್ಕಾರಕ್ಕೆ ಹಲವು ಬಾರಿ ಆಗಿದ್ದರೂ ಹೊಸ ಯೋಜನೆ ಜಾರಿಗೊಳಿಸುವ ಸಂದರ್ಭದಲ್ಲಿ ಆ ತಪ್ಪನ್ನು ಸರಿಪಡಿಸಿಕೊಳ್ಳಲು ಯತ್ನಿಸುವುದಿಲ್ಲ. ಈ ‘ವಿದ್ಯಾಗಮ’ಕಾರ್ಯಕ್ರಮ ಕೂಡ ಅಂತಹದ್ದೇ ಆಗಿದೆ.
ಕಾರ್ಯಕ್ರಮ ಅನುಷ್ಠಾನಕ್ಕಾಗಿ ಹಳ್ಳಿ ಹಳ್ಳಿ ತಿರುಗುತ್ತಿರುವ ಶಿಕ್ಷಕರ ಪಡಿಪಾಟಿಲು ಹೇಳತೀರದು. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಒಂಟಿ ಮನೆಗಳು ಹೆಚ್ಚು. ಒಂದು ಮನೆಯಲ್ಲಿ ಒಂದೇ ಮಗುವಿದ್ದರೂ ಕಾಡು–ಮೇಡು ಅಲೆದು ಶಿಕ್ಷಕರು ಹತ್ತಾರು ಕಿ.ಮೀ ಕ್ರಮಿಸಿ ಮಕ್ಕಳಿಗೆ ಕಲಿಸಲು ಯತ್ನಿಸುತ್ತಿರುವುದು ಮೆಚ್ಚತಕ್ಕ ವಿಷಯ. ಆದರೆ, ಇದನ್ನು ಎಷ್ಟು ದಿನ ನಿರ್ವಹಿಸಲು ಸಾಧ್ಯವಾಗುತ್ತದೆ? ಎಷ್ಟೋ ವಿದ್ಯಾರ್ಥಿಗಳ ಮನೆಗಳಲ್ಲಿ ಲ್ಯಾಪ್‌ಟಾಪ್, ಕಂಪ್ಯೂಟರ್, ಸ್ಮಾರ್ಟ್ ಫೋನ್‌ಗಳ ಸೌಲಭ್ಯವಿಲ್ಲ. ಅಂತಹವರನ್ನು ಶಿಕ್ಷಕರು ಖುದ್ದಾಗಿ ಸಂಪರ್ಕಿಸಿ ಬೋಧಿಸಿ, ಹೋಂವರ್ಕ್ ಕೊಟ್ಟು, ಅವನ್ನು ಮಾಡಲು ಸೂಚಿಸಬೇಕು. ನಂತರ ಅದನ್ನು ಪಡೆದುಕೊಂಡು ಪರಿಶೀಲಿಸಿ, ಸರಿ–ತಪ್ಪು ತಿಳಿಸಲು ಮುಂದಿನ ವಾರ ಆ ಊರಿಗೆ ಹೋಗುವವರೆಗೆ ಕಾಯಬೇಕು.
ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನದ ವಿಚಾರದಲ್ಲಿ ದೊಡ್ಡ ನಗರಗಳು ಅಥವಾ ಪಟ್ಟಣ ಪ್ರದೇಶಗಳಲ್ಲಿ ಸಮಸ್ಯೆ ಅಷ್ಟಾಗಿ ಕಾಣದಿರಬಹುದು ಅಥವಾ ಕೆಲವೆಡೆ ಯಶಸ್ವಿಯೂ ಆಗಿರಬಹುದು. ಇಲ್ಲಿನ ವಿದ್ಯಾರ್ಥಿಗಳಿಗೆ ಒಂದಿಷ್ಟು ಸೌಲಭ್ಯಗಳ ಅನುಕೂಲವಿರುವುದರಿಂದ ಅದು ಸಾಧ್ಯ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಆ ರೀತಿ ಇಲ್ಲವಲ್ಲ. ಸ್ಮಾರ್ಟ್ ಫೋನ್ ಇದ್ದರೂ ನೆಟ್‌ವರ್ಕ್ ತೊಂದರೆ ಇರುತ್ತದೆ. ಬೆಂಗಳೂರಿನಂತಹ ಬೃಹತ್ ನಗರದಲ್ಲಿಯೇ ನೆಟ್‌ವರ್ಕ್‌ಸಮಸ್ಯೆ ಬಹಳ ಕಡೆ ಇದೆ. ಇನ್ನು ಹಳ್ಳಿಗಳಲ್ಲಿ ಉತ್ತಮವಾಗಿರುತ್ತದೆಯೇ? ಫೋನ್ ಮೂಲಕ ಮಕ್ಕಳ ಪೋಷಕರಿಗೆ ಮಾಹಿತಿ ನೀಡುವುದರಿಂದ ಹಿಡಿದು ಜೆರಾಕ್ಸ್ ಪ್ರತಿ ತೆಗೆದುಕೊಳ್ಳುವುದಕ್ಕೂ ಶಿಕ್ಷಕರು ಪರದಾಡಬೇಕಾದ ಸ್ಥಿತಿ ಇರುವುದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಗೊತ್ತಿಲ್ಲದ ಸಂಗತಿಯಲ್ಲ. ಸರ್ಕಾರ ಶಾಲೆಗಳಿಗೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಇನ್ನು ಪರಿಕರಗಳನ್ನು ಎಲ್ಲಿಂದ ಖರೀದಿಸಿ ಅವುಗಳನ್ನು ಮಕ್ಕಳಿಗೆ ಕೊಡುವುದು? ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಸಾರಿಗೆ ಇನ್ನೂ ಆರಂಭವಾಗಿಲ್ಲ. ಆದರೆ, ಶಿಕ್ಷಕರು ಮಾತ್ರ ಹಳ್ಳಿಗಳು, ಜನವಸತಿ ಪ್ರದೇಶಗಳಿಗೆ ಹೋಗಿ ಬರಬೇಕು. ಅಲ್ಲಿ, ಶಾಲಾ ಕಟ್ಟಡವಿದ್ದರೂ ಕಾಲ್ಪನಿಕ ಕಲಿಕಾ ಕೋಣೆಗಳಲ್ಲಿ ಮಕ್ಕಳನ್ನು ಕೂರಿಸಿ ಕಾರ್ಯಕ್ರಮ ಅನುಷ್ಠಾನ ಮಾಡಬೇಕು.
ಸ್ವಂತ ವಾಹನದಲ್ಲೋ ನಡೆದುಕೊಂಡೋ ಗ್ರಾಮೀಣ ಪ್ರದೇಶಗಳಿಗೆ ಹೋಗುವ ಶಿಕ್ಷಕರನ್ನು ಕೊರೊನಾ ಭೀತಿಯಿಂದಾಗಿ ಎಷ್ಟೋ ಹಳ್ಳಿಗಳಲ್ಲಿ ಅವರನ್ನು ಊರಿಗೆ ಬಿಟ್ಟುಕೊಳ್ಳದ ಪರಿಸ್ಥಿತಿ ಇದೆ. ಇನ್ನು ಮನೆಯ ಜಗುಲಿ ಮೇಲೆ ಕುಳಿತು, ಊರ ಮಕ್ಕಳನ್ನು ಕರೆಸಿಕೊಂಡು ಪಾಠ ಹೇಳುವುದು ಸಾಧ್ಯವೇ? ಪರಿಣಾಮವಾಗಿ ಶಿಕ್ಷಕರು ಊರ ಹೊರಗೆ ಮರದ ಕೆಳಗೆ, ಹೊಲದಲ್ಲಿ, ಇಲ್ಲಾ ಚರಂಡಿ ಕಟ್ಟೆ ಮೇಲೆ ಮಕ್ಕಳನ್ನು ಕೂರಿಸಿ ಒಂದಿಷ್ಟು ಪಾಠ–ಪ್ರವಚನ ಮಾಡುತ್ತಿದ್ದಾರೆ. ಸುರಕ್ಷಿತವಲ್ಲದ ಸ್ಥಳದಲ್ಲಿ ಹೇಳುವ ಶಿಕ್ಷಕರಿಗೆ ಪಾಠ ಕಲಿಸುವುದಕ್ಕಿಂತ ಮಕ್ಕಳ ಮೇಲೇ ನಿಗಾ ಇರಿಸಬೇಕಾದ ಒತ್ತಡವಿದೆ. ಏಕೆಂದರೆ ಹಾವು–ಚೇಳು ಕಚ್ಚಿದರೆ ಗತಿ ಏನು ಎಂಬ ದಿಗಿಲು ಅವರದ್ದು. ಇದಾವುದರ ಅರಿವೇ ಇಲ್ಲದಂತೆ ಇಲಾಖೆ ’ವಿದ್ಯಾಗಮ‘ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಸೂಚಿಸಿದೆ. ಇದಲ್ಲದೇ ಇಂತಹ ಕಾಲ್ಪನಿಕ ಕಲಿಕಾ ಕೋಣೆಗಳಲ್ಲಿ ಮಕ್ಕಳಿಗೆ ಬೋಧಿಸುತ್ತಿರುವ ಫೋಟೊ ತೆಗೆದು ಇಲಾಖೆಗೆ ಕಳುಹಿಸಬೇಕಾಗಿದೆ!
ಇದಕ್ಕಿಂತ ಮಕ್ಕಳನ್ನು ಶಾಲೆಗೇ ಕರೆಯಿಸಿ ಅಲ್ಲಿಯೇ ಪಾಠ ಹೇಳಿಕೊಡುವಂತೆ ಮಾಡಿದ್ದರೆ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು. ಯಾವ ಹೆದರಿಕೆ, ಆತಂಕವಿಲ್ಲದೇ ಶಿಕ್ಷಕರೂ ಶಾಲೆಯ ಆವರಣದಲ್ಲಿನ ಬಯಲು ರಂಗಮಂದಿರ, ಆಟದ ಮೈದಾನದಲ್ಲಿ ಮರಗಳ ಕೆಳಗೆ, ಮಕ್ಕಳ ನಡುವೆ ಪರಸ್ಪರ ಅಂತರ ಕಾಯ್ದುಕೊಂಡು ಕಲಿಸಬಹುದಿತ್ತು. ಜತೆಗೆ ಶಾಲೆಗಳಲ್ಲಿಯಾದರೆ ಬೇರೆ ಬೇರೆ ಅವಧಿಯಲ್ಲಿ ಬೇರೆ ಬೇರೆ ತರಗತಿ ವಿದ್ಯಾರ್ಥಿಗಳನ್ನು ಕರೆಸಲು ಅವಕಾಶವಿದೆ. ಆದರೆ, ಸರ್ಕಾರ ಶಾಲಾ ಆವರಣಕ್ಕೆ ಮಕ್ಕಳನ್ನು ಕರೆಸಿಕೊಳ್ಳಲು ಅನುಮತಿ ನೀಡಿಲ್ಲ. ಇದೇ ಶಿಕ್ಷಕರಿಗೆ ದೊಡ್ಡ ಚಿಂತೆ.
ಅಲ್ಲದೇ, ಶಾಲಾ ಅನುದಾನವನ್ನೂ ನೀಡಿಲ್ಲ ಎಂಬ ಆರೋಪವಿದೆ. ಇನ್ನು ಅವರದ್ದೇ ಮೊಬೈಲ್ ಫೋನ್ ಬಳಸಿಕೊಂಡು ಪೋಷಕರಿಗೆ ಕರೆ ಮಾಡಿ, ಮಾಹಿತಿ ನೀಡಿ, ಮಕ್ಕಳನ್ನು ಅವರನ್ನು ಕರೆಸಿಕೊಳ್ಳುವುದು ಆಗದ ಮಾತು. ರೈತಾಪಿ ವರ್ಗದವರನ್ನು ಬೆಳಿಗ್ಗೆ 9ರ ಒಳಗೇ ಹಿಡಿಯಬೇಕು. ಇಲ್ಲವಾದಲ್ಲಿ ಅವರು ಹೊಲಕ್ಕೋ, ಕೂಲಿಗೋ ಹೋಗಿರುತ್ತಾರೆ. ನಂತರ ಅವರನ್ನು ಸಂಪರ್ಕಿಸಿ, ಮಕ್ಕಳನ್ನು ಕರೆಸಿಕೊಳ್ಳುವುದು ಆಗದ ಮಾತು. ಅಲ್ಲದೇ, ಆ ದಿನ ಗ್ರಾಮದಲ್ಲಿ ಎಲ್ಲಿ ಸೇರಬೇಕು ಎಂಬುದನ್ನೂ ಖಚಿತವಾಗಿ ತಿಳಿಸಲು ಆಗುವುದಿಲ್ಲ. ಏಕೆಂದರೆ, ಅಲ್ಲಿ ವಿರೋಧ ವ್ಯಕ್ತವಾಗಿ ಊರಿನಿಂದ ಹೊರಗೆ ಹೋಗಿ ಮಕ್ಕಳಿಗೆ ಅಭ್ಯಾಸ ಮಾಡಿಸಬೇಕಾಗುತ್ತದೆ. ನೆರೆಹೊರೆ ಗುಂಪುಗಳ ಮಕ್ಕಳಿಗೆ ಬೋಧನೆ ಮಾಡಲು ಊರಿನಲ್ಲಿ ಶಿಕ್ಷಕರು ಅಲೆದಾಡುವ ಸ್ಥಿತಿಯನ್ನು ಸರ್ಕಾರ ತಂದೊಡ್ಡಿದೆ. ಶಿಕ್ಷಕರ ಮನವಿಗೆ ಪೋಷಕರಿಂದ ಸಕಾರಾತ್ಮಕ ಸ್ಪಂದನೆ ಸಿಗುವುದೂ ಕಷ್ಟ. ‘ಶಾಲೆ ಆರಂಭವಾಗಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ನೆಂಟರ ಮನೆಗೆ ಕಳುಹಿಸಿದ್ದೇವೆ. ಈಗ ಕರೆಸಲಾಗದು, ಶಾಲೆ ಆರಂಭವಾದರೆ ಮಕ್ಕಳನ್ನು ಕಳುಹಿಸುತ್ತೇವೆ’ ಎನ್ನುತ್ತಾರೆ.
‘ಈಗಂತೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಈ ಶಾಲೆಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಲು ಸಾಕಷ್ಟು ಅವಕಾಶವಿದೆ. ಆದರೂ ಸರ್ಕಾರ ಮಾತ್ರ ಶಾಲೆಗಳಲ್ಲಿ ಕಾರ್ಯಕ್ರಮ ಜಾರಿಗೊಳಿಸಲು ವಿರೋಧ ಮಾಡುತ್ತಿದೆ. ಬದಲಿಗೆ ಕಾಲ್ಪನಿಕ ತರಗತಿಗಳಲ್ಲಿ ಮಕ್ಕಳಿಗೆ ಬೋಧಿಸಿ, ಒಂದಿಷ್ಟು ಹೋಂವರ್ಕ್ ಕೊಡಿ ಎಂದು ಏಕೆ ಹೇಳುತ್ತಿದೆಯೋ ಅರ್ಥವಾಗದು. ರಸ್ತೆ ಬದಿ, ಹೊಲ, ದೇವಾಲಯದ ಆವರಣ, ಸಮುದಾಯ ಭವನದ ಮುಂಭಾಗ ಮಕ್ಕಳನ್ನು ಕೂರಿಸಿ ಅದನ್ನು ಶಾಲಾ ವಾತಾವರಣವನ್ನಾಗಿ ಬದಲಿಸಿ, ಬೋಧಿಸಿ ಎಂದರೆ ಹೇಗೆಸಾಧ್ಯವಾಗುತ್ತದೆ? ಹಾಗಾಗಿಯೇ ಬಹುತೇಕರು ಕಾಟಾಚಾರಕ್ಕೆ ಕಾರ್ಯಕ್ರಮ ಅನುಷ್ಠಾನದ ವರದಿಯನ್ನು ಕಳುಹಿಸಿ ಕೈತೊಳೆದುಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಶಿಕ್ಷಕರು.
ಮಕ್ಕಳನ್ನು ಶಾಲೆಗೇ ಕರೆಸಿಕೊಳ್ಳುವುದಾದರೆ 1ರಿಂದ 7ನೇ ತರಗತಿವರೆಗೆ ಪ್ರತಿನಿತ್ಯವೂ ಒಂದೊಂದು ತರಗತಿ ಮಕ್ಕಳನ್ನು ಕರೆಸಿಕೊಂಡು ಪಾಠಮಾಡುವ ಮೂಲಕ ಏಳೂ ದಿನಗಳನ್ನೂ ಬಳಸಿಕೊಳ್ಳಲು ಅವಕಾಶವಿದೆ. ಮಕ್ಕಳನ್ನು ಶಾಲೆಗೆ ಕರೆಸುವುದಾದರೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಈ ಕಾರ್ಯಕ್ರಮ ಅನುಷ್ಠಾನ ಮಾಡಬಹುದು. ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.