ಹೊಸಪೇಟೆ (ವಿಜಯನಗರ): ಕೋವಿಡ್‌ನಿಂದ ರಾಜ್ಯದ ಒಂಬತ್ತು ಮೃಗಾಲಯಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ.
ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ, ಮೈಸೂರು, ಬನ್ನೇರುಘಟ್ಟ, ಗದಗ, ಬೆಳಗಾವಿ, ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ ಒಟ್ಟು ಒಂಬತ್ತು ಮೃಗಾಲಯಗಳಿವೆ. ಆದಾಯ ಗಳಿಕೆಯಲ್ಲಿ ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯಗಳು ಮುಂಚೂಣಿಯಲ್ಲಿವೆ. ಮಿಕ್ಕುಳಿದ ಮೃಗಾಲಯಗಳು ಈಗಷ್ಟೇ ಪ್ರಚಾರಕ್ಕೆ ಬರುತ್ತಿದ್ದು, ಇನ್ನಷ್ಟೇ ಆದಾಯ ತಂದುಕೊಡಬೇಕಿದೆ.
ಮೈಸೂರು, ಬನ್ನೇರುಘಟ್ಟ ಮೃಗಾಲಯಗಳಿಗೆ ಬರುವ ಆದಾಯದಿಂದ ಇತರೆ ಮೃಗಾಲಯಗಳ ನಿರ್ವಹಣೆ ಕೂಡ ಮಾಡಲಾಗುತ್ತಿದೆ. ಆದರೆ, ಕೋವಿಡ್‌ನಿಂದ ಮೃಗಾಲಯಗಳು ಬಂದ್ ಆಗಿರುವುದರಿಂದ ಅವುಗಳ ಆದಾಯಕ್ಕೆ ಹೊಡೆತ ಬಿದ್ದಿದೆ. ಪ್ರವಾಸಿಗರಿಂದ ಶುಲ್ಕದ ರೂಪದಲ್ಲಿ ಬರುವ ಆದಾಯವೇ ಮೃಗಾಲಯಗಳ ಪ್ರಮುಖ ಆದಾಯದ ಮೂಲ. ಸದ್ಯ ಅದು ನಿಂತು ಹೋಗಿದೆ. ಕಳೆದವರ್ಷವೂ ಇದೇ ಸಮಸ್ಯೆ ಸೃಷ್ಟಿಯಾಗಿತ್ತು. ಡಿಸೆಂಬರ್, ಜನವರಿಯಲ್ಲಿ ಚೇತರಿಕೆ ಹಂತದಲ್ಲಿದ್ದ ಮೃಗಾಲಯಗಳಿಗೆ ಪುನಃ ಬೀಗ ಬಿದ್ದಿದೆ. ಮೃಗಾಲಯಗಳ ನಿರ್ವಹಣೆ, ಹೊರಗುತ್ತಿಗೆ ಮೇಲೆ ನೇಮಿಸಿಕೊಂಡ ಸಿಬ್ಬಂದಿಗೆ ವೇತನ ಪಾವತಿಸಲು ಆಗುತ್ತಿಲ್ಲ.
‘ಆರಂಭದ ದಿನದಿಂದಲೂ ವಾಜಪೇಯಿ ಉದ್ಯಾನದಲ್ಲಿ ಹೊರಗುತ್ತಿಗೆ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಕಳೆದ ವರ್ಷದಿಂದ ಸಕಾಲಕ್ಕೆ ವೇತನ ನೀಡುತ್ತಿಲ್ಲ. ಈಗ ಪುನಃ ಮೂರು ತಿಂಗಳ ಸಂಬಳ ಉಳಿಸಿಕೊಂಡಿದ್ದಾರೆ. ಲಾಕ್‌ಡೌನ್ ಇರುವುದರಿಂದ ಯಾರೂ ಸಾಲ ನೀಡುತ್ತಿಲ್ಲ. ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮೃಗಾಲಯದ ಸಿಬ್ಬಂದಿ ಗೋಳು ತೋಡಿಕೊಂಡರು.
‘ಕಾಯಂ ನೌಕರಿ ಇರುವವರಿಗೆ ಪ್ರತಿ ತಿಂಗಳು ಸಂಬಳ ಆಗುತ್ತಿದೆ. ನಮಗೆ ಕೊಡುವುದೇ ಎಂಟು ಸಾವಿರ ವೇತನ. ಅದು ಕೂಡ ಸಮಯಕ್ಕೆ ಸಿಗದಿದ್ದರೆ ಮನೆ ನಡೆಸಲು ಕಷ್ಟ ಆಗುವುದಿಲ್ಲವೇ?’ ಎಂದು ಪ್ರಶ್ನಿಸಿದರು. ಇತರೆ ಉದ್ಯಾನಗಳ ಸಿಬ್ಬಂದಿಯ ಪರಿಸ್ಥಿತಿಯೂ ಹೀಗೆಯೇ ಇದೆ.
ಆರ್ಥಿಕ ನೆರವಿಗೆ ಮೊರೆ: ಮೃಗಾಲಯಗಳನ್ನು ಸಂಕಷ್ಟದಿಂದ ಪಾರು ಮಾಡುವುದಕ್ಕಾಗಿ ರಾಜ್ಯ ಮೃಗಾಲಯ ಪ್ರಾಧಿಕಾರವು ಮುಂದಾಗಿದೆ. ಪ್ರಾಣಿಪ್ರಿಯರು, ಉದ್ಯಮಿಗಳು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಮೃಗಾಲಯಗಳಿಗೆ ಆರ್ಥಿಕ ನೆರವು ನೀಡಬೇಕೆಂದು ಕೋರಿದೆ.
‘ಕೋವಿಡ್‌ನಿಂದ ಮೃಗಾಲಯಗಳ ನಿರ್ವಹಣೆ ಬಹಳ ಕಷ್ಟವಾಗುತ್ತಿದೆ. ಮೈಸೂರು, ಬನ್ನೇರುಘಟ್ಟ ಮೃಗಾಲಯದ ಹೆಸರಿನಲ್ಲಿರುವ ಎಫ್.ಡಿ. ಹಣದಿಂದ ಅವುಗಳ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಇತರೆ ಮೃಗಾಲಯಗಳ ನಿರ್ವಹಣೆಗೆ ಹಣವಿಲ್ಲ. ಪ್ರಾಣಿಪ್ರಿಯರು, ಉದ್ಯಮಿಗಳು ಮುಂದೆ ಬಂದು ಪ್ರಾಣಿಗಳನ್ನು ದತ್ತು ಪಡೆಯಬೇಕು. ಸಾಧ್ಯವಾದರೆ ಮೃಗಾಲಯಗಳಿಗೆ ಆರ್ಥಿಕ ನೆರವು ನೀಡಿ, ಅವುಗಳನ್ನು ಉಳಿಸುವ ಕೆಲಸ ಮಾಡಬೇಕು’ ಎಂದು ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.