ರಾಜ್ಯದಲ್ಲಿ 2020ರ ಅಂತ್ಯದಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ರಾಜ್ಯದ ಹಲವೆಡೆ ಸಾಫ್ಟ್‌ವೇರ್ ಎಂಜಿನಿಯರ್, ವೈದ್ಯರು, ವಕೀಲರು, ಪಿಎಚ್.ಡಿ ಪದವೀಧರರು,ಯುವ ಶಿಕ್ಷಕರು, ಉಪನ್ಯಾಸಕರು, ಸ್ನಾತಕೋತ್ತರ ಪದವೀಧರರು... ಹೀಗೆ ಉತ್ತಮ ಶೈಕ್ಷಣಿಕ ಹಿನ್ನೆಯುಳ್ಳವರು ಪಂಚಾಯ್ತಿಗೆ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಕೆಲವೆಡೆ ಯುವತಿಯರು ಕೂಡ ಚುನಾವಣಾ ಕಣಕ್ಕೆ ಧುಮುಕಿ ಗೆದ್ದಿದ್ದು ವಿಶೇಷ. 5 ವರ್ಷಗಳ ಹಿಂದಿನ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಇಂತಹ ದೃಶ್ಯ ನೋಡಲು ಸಿಕ್ಕಿರಲಿಲ್ಲ. ರಾಜಕೀಯವೆಂದರೆ ಭ್ರಷ್ಟಾಚಾರ, ಜಾತಿ, ಹಣಬಲ, ತೋಳ್ಬಲಗಳ ನಡುವೆ ಕಲುಷಿತವಾಗಿರುವಾಗ ವಿದ್ಯಾವಂತ ಯುವಜನರು ರಾಜಕೀಯದತ್ತ ಮನಸ್ಸು ಮಾಡಿ, ಗ್ರಾಮೀಣ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಹೊಸ ಬದಲಾವಣೆ ತರುತ್ತೇವೆ ಎಂದು ಹೊರಟಿರುವುದು ಆಶಾದಾಯಕ ಬೆಳವಣಿಗೆಯಾಗಿ ಕಂಡುಬರುತ್ತಿದೆ...
ಕೇರಳದಲ್ಲಿ 21 ವರ್ಷ ವಯಸ್ಸಿನ ಬಿಎಸ್ಸಿ 2ನೇ ವರ್ಷದ ವಿದ್ಯಾರ್ಥಿನಿ ಆರ್ಯ ರಾಜೇಂದ್ರನ್ ತಿರುವನಂತಪುರಂನ ಮೇಯರ್ ಆಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ದೇಶದ ಅತಿ ಕಿರಿಯ ವಯಸ್ಸಿನ ಮೇಯರ್ ಎಂಬ ಗೌರವಕ್ಕೆ ಪಾತ್ರರಾಗಿದ್ದು 2020ನೇ ವರ್ಷದ ಡಿಸೆಂಬರ್ ಅಂತ್ಯದಲ್ಲಿ ಕೇಳಿಬಂದ ಸುದ್ದಿ. ರಾಜಕೀಯದಲ್ಲಿ ಆಸಕ್ತಿಯಿರುವ ಯುವಜನತೆಗಂತೂ ಉತ್ಸಾಹ ತುಂಬಿದ ವಿಚಾರವೂ ಹೌದು.
ಸಿಪಿಎಂ ಅಭ್ಯರ್ಥಿ ಆರ್ಯ ಅವರು, ಅಲ್ಲಿನ ಮುದವನ್ಮುಗಲ್ ವಾರ್ಡ್‌ನಿಂದ ಯುಡಿಎಫ್ ಅಭ್ಯರ್ಥಿ ವಿರುದ್ಧ (2,872 ಮತಗಳ ಅಂತರ) ಗೆಲುವು ಸಾಧಿಸುತ್ತಾರೆ. ಅವರೇನು ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ಕಾಲೇಜು ವಿದ್ಯಾರ್ಥಿ ವಿಭಾಗ ಎಸ್‌ಎಫ್‌ಐನ ರಾಜ್ಯ ಪದಾಧಿಕಾರಿಯಾಗಿ ಕೆಲಸ ಮಾಡಿದ ಅನುಭವ ಅಷ್ಟೆ. ಆದರೂ ಈಗ ರಾಜ್ಯ ರಾಜಧಾನಿಯ ಮೇಯರ್ ಪಟ್ಟಕ್ಕೇರಿ ದೇಶವ್ಯಾಪಿ ಸುದ್ದಿಯಾಗಿದ್ದಾರೆ.
ಈ ಸುದ್ದಿಯ ಜತೆಯಲ್ಲಿಯೇ ನಮ್ಮ ರಾಜ್ಯದಲ್ಲಿ 2020ರ ಅಂತ್ಯದಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯತ್ತ ಒಮ್ಮೆ ನೋಡೋಣ. ವರ್ಷಾಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಯುವ ಸಮುದಾಯ ಹಾಗೂ ಉತ್ತಮ ಶೈಕ್ಷಣಿಕ ಹಿನ್ನೆಲೆಯುಳ್ಳ ಯುವ ಜನರು ಸ್ಫರ್ಧಿಸಿ ಆಯ್ಕೆಯಾಗಿದ್ದಾರೆ.
ಹಲವೆಡೆ ಯುವ ಶಿಕ್ಷಕರು, ಉಪನ್ಯಾಸಕರು, ಸ್ನಾತಕೋತ್ತರ ಪದವೀಧರರು, ಸಾಫ್ಟ್‌ವೇರ್ ಎಂಜಿನಿಯರ್, ವೈದ್ಯರು, ವಕೀಲರು, ಪಿಎಚ್.ಡಿ ಪದವೀಧರರು... ಹೀಗೆ ಉತ್ತಮ ಶೈಕ್ಷಣಿಕ ಹಿನ್ನೆಯುಳ್ಳವರು ಪಂಚಾಯ್ತಿಗೆ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ವಿಶೇಷವಾಗಿ ಸ್ನಾತಕೋತ್ತರ ಪದವೀಧರ ಯುವತಿಯರು, ಪದವಿ ಕೊನೆ ವರ್ಷದಲ್ಲಿ ಓದುತ್ತಿರುವ ಯುವತಿ ಕೂಡ ಚುನಾವಣಾ ಕಣಕ್ಕೆ ಧುಮುಕಿದ್ದು ವಿಶೇಷವಾಗಿತ್ತು. ಬಹಳಷ್ಟು ಕಡೆಗಳಲ್ಲಿ ಹೊಸ ಮುಖಗಳು ಸ್ಪರ್ಧಿಸಿ ಗೆಲುವು ಕಂಡಿದ್ದಾರೆ.5 ವರ್ಷಗಳ ಹಿಂದೆಲ್ಲ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಇಂತಹ ದೃಶ್ಯವೊಂದು ನೋಡಲು ಸಿಕ್ಕಿರಲಿಲ್ಲ. ಹೀಗಾಗಿ ಇದೊಂದು ಮಹತ್ವದ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕೊರೊನಾದಿಂದಾಗಿ ಲಾಕ್‌ಡೌನ್ ಆಗಿದ್ದು ಕೂಡ ಯುವಜನತೆ ಹಳ್ಳಿಗಳತ್ತ ಮುಖಮಾಡಲು ಪ್ರಮುಖ ಕಾರಣ. ಲಾಕ್‌ಡೌನ್ ಸಂದರ್ಭದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ದಿನಗೂಲಿ ಕೆಲಸ ಮಾಡಲು ವಿದ್ಯಾವಂತ ಯುವನಜರು ಹಲವೆಡೆ ಪಾಲ್ಗೊಂಡಿದ್ದು ಸುದ್ದಿಯಾಗಿತ್ತು. ಅದಾದ ಬಳಿಕ ಯುವಜನರು ಚುನಾವಣೆಯತ್ತ ಮುಖ ಮಾಡಿದ್ದು,ಗ್ರಾಮೀಣ ಕ್ಷೇತ್ರ ಬಲಪಡಿಸುವತ್ತ ವಿದ್ಯಾವಂತ ಯುವಜನತೆ ಯೋಚನೆ ಮಾಡುತ್ತಿರುವುದು ಕೂಡ ಮಹತ್ವದ ಸಂಗತಿಯೇ...
ರಾಜ್ಯದ ವಿವಿಧೆಡೆ ಈ ಬಾರಿ ಗ್ರಾಮ ಪಂಚಾಯ್ತಿಗೆ ಆಯ್ಕೆಯಾದ ಒಂದಿಷ್ಟು ಯುವಜನತೆಯ ಉದಾಹರಣೆಗಳನ್ನು ನೋಡೋಣ:
* ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸಿ.ಎ. ಕೆರೆ ವ್ಯಾಪ್ತಿಯ ಕಾಡಕೊತ್ತನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ಪರ್ಧಿಸಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ವಿ.ಚಂದ್ರಕಲಾ ಆಯ್ಕೆ.
* ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಮುಡಗೇರಿ ಗ್ರಾಮ ಪಂಚಾಯ್ತಿಯ ಸಾನ್ ಮುಡಗೇರಿ ಕ್ಷೇತ್ರದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಯುವತಿ ಮೆಲಿಂಡಾ ಡಿಸೋಜಾ ಯುವತಿ ಆಯ್ಕೆ.
* ದಕ್ಷಿಣ ಕನ್ನಡದ ಮಂಗಳೂರು ತಾಲ್ಲೂಕಿನ ಮುಡಿಪುವಿನಲ್ಲಿ ಡೇರೆಯಲ್ಲಿ ಬದುಕು ಸಾಗಿಸಿ, ಉನ್ನತ ಶ್ರೇಣಿಯಲ್ಲಿ ಬಿಎಸ್ಸಿ ಪದವಿ ಪಡೆದ ಯುವತಿ ಮಮತಾ, ಪಾವೂರು ಗ್ರಾ.ಪಂ.ಗೆ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
* ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಎನ್.ದೇವರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಿಎಚ್.ಡಿ.ಪದವೀಧರ ಡಾ.ಕಾಟಲಿಂಗಯ್ಯ ಮತ್ತು ಚನ್ನಮ್ಮನಾಗತಿಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಸ್ನಾತಕೋತ್ತರ ಪದವೀಧರ ಬಿ.ಆನಂದಕುಮಾರ ಆಯ್ಕೆ.
* ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಮಕರಬ್ಬಿ ಗ್ರಾಮ ಪಂಚಾಯ್ತಿ ಗೆ ಹಿರೆಬನ್ನಿಮಟ್ಟಿ ಕ್ಷೇತ್ರದಿಂದ ಯುವ ವಕೀಲ ಫಕ್ಕೀರೇಶ ಗಳಗನಾಥ ಆಯ್ಕೆ.
* ಹೂವಿನಹಡಗಲಿಯ ದೇವಗೊಂಡನಹಳ್ಳಿಯಲ್ಲಿ ಸ್ಪರ್ಧಿಸಿದ್ದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ ನಂದಿಹಳ್ಳಿ ಮಹೇಂದ್ರ, ಸಿವಿಲ್ ಎಂಜಿನಿಯರ್, ಖಾಸಗಿ ಕಂಪನಿ ಉದ್ಯೋಗಿ ಎಚ್.ಸವಿತಾ ಆಯ್ಕೆ.
* ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ಖಾಸಗಿ ಕಾಲೇಜಿನ ಉಪನ್ಯಾಸಕ ಸಿ.ಕುಮಾರ್ ಆಯ್ಕೆ. ಇದೇ ತಾಲ್ಲೂಕಿನ ಹಲಗಾಪುರ ಗ್ರಾ.ಪಂ. ಸದಸ್ಯರಾಗಿ ವಕೀಲ ಕೆ.ಎಚ್. ಪಂಪಾಪತಿ ಆಯ್ಕೆ.
* ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲ್ಲೂಕಿನ ಕುಂಚೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಲಿಂಗದೇವರಕೊಪ್ಪ ಗ್ರಾಮದ ಬಿ.ಇ., ಎಂ.ಟೆಕ್. ಓದಿರುವ, ವೃತ್ತಿಯಲ್ಲಿ ಉಪನ್ಯಾಸಕರಾಗಿರುವ 28ರ ಯುವಕ ಕಿರಣಕುಮಾರ ಬಸವರಾಜ ಬತ್ತೇರ ಆಯ್ಕೆ.
* ಕಣವಿಶಿದ್ಗೇರಿ ಗ್ರಾಮ ಪಂಚಾಯ್ತಿಗೆ 27 ವರ್ಷದ ವಕೀಲ ಫಕ್ಕೀರಪ್ಪ ಪದ್ಮಪ್ಪ ತುಮ್ಮಿನಕಟ್ಟಿ ಆಯ್ಕೆ .
* ಕುಮಾರಪಟ್ಟಣದ ಖಾಸಗಿ ಕ್ಲಿನಿಕ್ ನಡೆಸುವ ಡಾ.ಮಹಾಂತೇಶ್ ಗುಡ್ಡಪ್ಪ ಹುಚ್ಚಣ್ಣವರ ಮಾಕನೂರ ಗ್ರಾಮ ಪಂಚಾಯ್ತಿ 4ನೇ ವಾರ್ಡ್‌ನಿಂದ ಆಯ್ಕೆ.
ಯುವಜನತೆಯ ಕನಸುಗಳೇನು?
ಗ್ರಾಮವನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಸಬಲಗೊಳಿಸಿ, ಮಾದರಿ ಗ್ರಾಮ ನಿರ್ಮಾಣ ಮಾಡಬೇಕೆಂಬ ಕನಸಿನೊಂದಿಗೆ ಗ್ರಾಮ ಪಂಚಾಯ್ತಿ ಅಖಾಡಕ್ಕೆ ಇಳಿದಿದ್ದಾಗಿ ಈ ಯುವ ಸಮುದಾಯ ಹೇಳುತ್ತದೆ.
ಹಲವೆಡೆ ತಾಲ್ಲೂಕು ಪಂಚಾಯ್ತಿ ಸದಸ್ಯರಾದವು ಗ್ರಾಮ ಪಂಚಾಯ್ತಿ ಸದಸ್ಯರಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ತಾಲ್ಲುಕು ಪಂಚಾಯ್ತಿಗೆ ಅನುದಾನ ಕಡಿಮೆ, ಗ್ರಾಮ ಪಂಚಾಯ್ತಿಯಲ್ಲಿ ಅನುದಾನದಲ್ಲಿ ಊರಿನ ಅಭಿವೃದ್ಧಿ ಮಾಡಲು ಸಾಧ್ಯ ಎನ್ನುತ್ತಾರೆ ಅವರಲ್ಲಿ ಹಲವರು.
‘ಮಾದರಿ ಗ್ರಾಮವಾಗಿ ಪರಿವರ್ತಿಸಬೇಕು ಎನ್ನುವ ಕನಸಿದೆ’ ಎನ್ನುತ್ತಾರೆ ಉಪನ್ಯಾಸಕ ಕಿರಣಕುಮಾರ. ‘ಗ್ರಾಮೀಣರ ಧ್ವನಿಯಾಗಿ ಕೆಲಸ ಮಾಡಬೇಕು ಎಂಬ ಬಯಕೆಯಿಂದ ಗ್ರಾಮ ಪಂಚಾಯ್ತಿಗೆ ಸ್ಪರ್ಧಿಸಿ, ಜನರ ಬಯಕೆಯಂತೆ ಆಯ್ಕೆಯಾಗಿದ್ದೇನೆ’ ಎನ್ನುತ್ತಾರೆ ವಕೀಲ ಫಕ್ಕೀರಪ್ಪ.
ಗ್ರಾಮಗಳಲ್ಲಿ ಉತ್ತಮ ರಸ್ತೆಗಳಿಲ್ಲ, ಬೀದಿ ದೀಪಗಳಿಲ್ಲ, ಚರಂಡಿ ಇಲ್ಲ, ಶುದ್ಧ ಕುಡಿಯುವ ನೀರು ಸಿಗುವುದಿಲ್ಲ, ವಾಚನಾಲಯ ಇಲ್ಲ... ಹೀಗೆ ಇಲ್ಲಗಳ ಸಂತೆಯೇ ಗ್ರಾಮೀಣ ಭಾಗದ ಪರಿಸ್ಥಿತಿ. ಇವುಗಳನ್ನು ತುಸು ಮಟ್ಟಿಗಾದರೂ ಬದಲಾಯಿಸಬೇಕು ಎನ್ನುವ ಹಂಬಲ ಈ ಯುವಕರದ್ದು.
ಪಂಚಾಯ್ತಿ ವ್ಯವಸ್ಥೆಗೆ ಪ್ರಾಧಾನ್ಯ ದೊರೆತಿದೆ...
ಗ್ರಾಮೀಣಾಭಿವೃದ್ಧಿ ಹಾಗೂ ಮತ್ತು ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳುವುದು ಹೀಗೆ– ಗ್ರಾಮ ಪಂಚಾಯ್ತಿಗಳಿಗೆ ಹಿಂದೆಂದಿಗಿಂತಲೂ ಹೆಚ್ಚು ಅಧಿಕಾರ ದೊರೆತಿದೆ. ಪಂಚಾಯ್ತಿ ವ್ಯವಸ್ಥೆಗೆ ಪ್ರಾಧಾನ್ಯ ದೊರೆತಿದೆ. ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಅಂದಾಜು ₹10ರಿಂದ 12 ಕೋಟಿ ಅನುದಾನ ಒಟ್ಟಾರೆಯಾಗಿ ಸಿಗುತ್ತದೆ.
ಜತೆಗೆ ಗ್ರಾಮ ಪಂಚಾಯ್ತಿಗೆ ಸ್ಪರ್ಧಿಸುವುದೆಂದರೆ ಯಾವುದೇ ಪ್ರಮುಖ ರಾಜಕಿಯ ಪಕ್ಷಗಳಿಗೆ ದುಂಬಾಲು ಬೀಳುವ ಅಗತ್ಯವಿಲ್ಲ, ಜಾತಿ, ಹಣಬಲ ಬೇಕಿಲ್ಲ. ರಾಜಕೀಯವಾಗಿ ಮೊದಲ ಮೆಟ್ಟಿಲು ಇದು. ಅಧಿಕಾರ, ನಾಯಕತ್ವ, ಒಂದಿಷ್ಟು ಪ್ರಸಿದ್ಧಿ ಪಡೆಯಲು ಇದೊಂದು ವೇದಿಕೆ. ಜತೆಗೆ ಪ್ರಜ್ಞಾವಂತರಿಗೆ ತಾವೂ ಅಧಿಕಾರಯುತವಾಗಿ ಗ್ರಾಮೀಣ ಭಾಗದ ಕೆಲಸ ಮಾಡಬೇಕು ಎನ್ನುವ ಹಂಬಲ...ಮಾಧ್ಯಮ, ಪತ್ರಿಕೆ, ಸಾಮಾಜಿಕ ಜಾಲತಾಣಗಳಿಂದ ದೊರೆವ ಮಾಹಿತಿ, ಜಾಗೃತಿ ಇವೆಲ್ಲ ಸೇರಿ ಓದಿದ ಯುವಜನರು ಈ ಬಾರಿ ಗ್ರಾಮ ಪಂಚಾಯ್ತಿಯತ್ತ ಆಕರ್ಷಿತರಾಗಿದ್ದಾರೆ.
ಹುಬ್ಬಳ್ಳಿಯ ಆಮ್ ಆದ್ಮಿ ಪಕ್ಷದ ಮುಖಂಡ ವಿಕಾಸ ಸೊಪ್ಪಿನ ಅವರು–‘ಕೇವಲ ವಿದ್ಯಾಭ್ಯಾಸ, ನೌಕರಿ, ಮನೆ ಎಂದು ಕುಳಿತುಕೊಳ್ಳುವ ಬದಲು ನಾವೂ ಕೂಡ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎನ್ನುವುದು ಈಗಿನ ಯುವಜನತೆಯ ಹಂಬಲ. ಹೀಗಾಗಿ ಬಹಳಷ್ಟು ಯುವಜನರು ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿ ಜಯಶಾಲಿಗಳಾಗಿದ್ದಾರೆ. ಇದೊಂದು ಮಹತ್ವದ ಬೆಳವಣಿಗೆ’ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.