ADVERTISEMENT

PV Web Exclusive| ಹೆಚ್ಚು ನಗದು ಇಟ್ಟುಕೊಳ್ಳುವಂತಿಲ್ಲ; ವೆಚ್ಚಕ್ಕೆ ಮಿತಿ ಇಲ್ಲ!

ಗಣೇಶ-ಚಂದನಶಿವ
Published 6 ಅಕ್ಟೋಬರ್ 2020, 8:27 IST
Last Updated 6 ಅಕ್ಟೋಬರ್ 2020, 8:27 IST
ಚುನಾವಣಾ ಆಯೋಗದ ಲೋಗೊ
ಚುನಾವಣಾ ಆಯೋಗದ ಲೋಗೊ   

ರಾಜ್ಯದ ನಾಲ್ಕು ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡುವ ವೆಚ್ಚಕ್ಕೆ ಚುನಾವಣಾ ಆಯೋಗ ಯಾವುದೇ ಮಿತಿ ನಿಗದಿ ಮಾಡಿಲ್ಲ. ಆದರೆ, ಅಭ್ಯರ್ಥಿ ₹50 ಸಾವಿರಕ್ಕಿಂತ ಹೆಚ್ಚಿನ ನಗದು ಇಟ್ಟುಕೊಳ್ಳುವಂತಿಲ್ಲ ಎಂಬ ಕಟ್ಟಳೆ ವಿಧಿಸಿದೆ!

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ವೆಚ್ಚದ ಮಿತಿ ಇದೆ. ವಿಧಾನ ಪರಿಷತ್‌ನ ಈ ಚುನಾವಣೆಗೆ ವೆಚ್ಚದ ಮಿತಿ ಇಲ್ಲದಿದ್ದರೂ ಇತರೆ ಚುನಾವಣೆಗಳಂತೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಬಳಿ ₹50 ಸಾವಿರಕ್ಕಿಂತ ಹೆಚ್ಚು ನಗದು ಇಟ್ಟುಕೊಳ್ಳುವಂತಿಲ್ಲ. ನಾಮಪತ್ರ ಸಲ್ಲಿಸಲು ಮೆರವಣಿಗೆ ನಡೆಸುವಂತಿಲ್ಲ. ನಾಮಪತ್ರ ಸಲ್ಲಿಸುವಾಗ ಎರಡು ವಾಹನಗಳನ್ನು ಮಾತ್ರ ಬಳಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಚುನಾವಣಾ ಅಕ್ರಮ ತಡೆಗೆ ತಂಡಗಳನ್ನೂ ನೇಮಿಸಲಾಗಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ₹70 ಲಕ್ಷ ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿ ₹28 ಲಕ್ಷದ ವರೆಗೆ ವೆಚ್ಚಮಾಡಲು ಚುನಾವಣಾ ಆಯೋಗ ಅವಕಾಶ ನೀಡಿತ್ತು. ಆದರೆ, ಅಭ್ಯರ್ಥಿಗಳು ಈ ಮಿತಿ ತಲುಪಲೇ ಇಲ್ಲ. ಅಂದರೆ, ಅವರು ಇಷ್ಟು ವೆಚ್ಚ ಮಾಡಲೇ ಇಲ್ಲ ಎಂಬುದು ಅವರು ಆಯೋಗಕ್ಕೆ ಸಲ್ಲಿಸಿರುವ ವೆಚ್ಚದ ವಿವರಗಳು ಹೇಳುತ್ತವೆ.

ADVERTISEMENT

2013ರ ವಿಧಾನಸಭಾ ಚುನಾವಣೆಯ ಅಂಕಿ ಅಂಶಗಳ ಮೇಲೆ ಕಣ್ಣಾಡಿಸಿದರೆ, ಆ ಚುನಾವಣೆಯಲ್ಲಿ ಅಭ್ಯರ್ಥಿಯ ವೆಚ್ಚದ ಮಿತಿ ₹16 ಲಕ್ಷ ಇತ್ತು. ಆದರೆ, ಆ ಚುನಾವಣೆಯಲ್ಲಿ ವಿಜೇತರು ಮಾಡಿದ ಸರಾಸರಿ ವೆಚ್ಚ ಆಯೋಗ ನಿಗದಿ ಪಡಿಸಿದ್ದ ಮಿತಿ ಪೈಕಿಶೇ 50ಕ್ಕಿಂತ ಕಡಿಮೆಆಗಿತ್ತು!

ನಂತರ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 28 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. 2018ರ ಈ ಚುನಾವಣೆಯಲ್ಲಿಯೂ ಬಹುತೇಕ ಅಭ್ಯರ್ಥಿಗಳು ಈ ‘ವೆಚ್ಚದ ಮಿತಿ ಮೀರಲಿಲ್ಲ’ ಎಂಬುದು ಚುನಾವಣಾ ಆಯೋಗದ ವೆಬ್‌ಸೈಟ್‌ ಜಾಲಾಡಿದಾಗ ಸಿಗುವ ಮಾಹಿತಿ.

ಚುನಾವಣಾ ಅಕ್ರಮ ಹಾಗೂ ‘ಕಪ್ಪು ಹಣ’ದ ಚಲಾವಣೆ ತಡೆಯಲುವಿಧಾನಸಭಾ ಚುನಾವಣೆಯಲ್ಲಿ ₹20 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ಹಾಗೂ ಲೋಕಸಭಾ ಚುನಾವಣೆಯಲ್ಲಿ ₹10 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ಚೆಕ್‌ ಅಥವಾ ಇತರೆ ಆನ್‌ಲೈನ್‌ ಕ್ರಮಗಳ ಮೂಲಕವೇ ಪಾವತಿಸುವಂತೆ ಆಯೋಗ ಷರತ್ತು ವಿಧಿಸಿತ್ತು. (ಈಗಲೂ ಅಂತಹ ಷರತ್ತುಗಳಿವೆ) ಆದರೂ, ಚುನಾವಣಾ ವೆಚ್ಚ ಎಂಬ ರಾಮ–ಕೃಷ್ಣರ ಲೆಕ್ಕದ ಆಟ ನಡೆದೇ ಇತ್ತು ಎಂಬುದು ಎಲ್ಲರೂ ಹೇಳುವ ಮಾತು.

ಇನ್ನು ಕರ್ನಾಟಕದ ಈಶಾನ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಸೀಮಿತವಾಗಿ ಹೇಳುವುದಾದರೆ ಇದು ಇಡೀ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. 26 ಸಾವಿರಕ್ಕಿಂತ ಹೆಚ್ಚು ಶಿಕ್ಷಕ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಅಭ್ಯರ್ಥಿಗಳು ಮತದಾರರು ಇರುವೆಡೆ ತೆರಳಲು ಅಥವಾ ತಾಲ್ಲೂಕು/ಜಿಲ್ಲಾವಾರು ಅವರನ್ನು ಒಂದೆಡೆ ಸೇರಿಸಿ ಮತಯಾಚಿಸಲು ಬಹಳಷ್ಟು ‘ಬೆವರು ಹರಿಸಬೇಕಾಗುತ್ತದೆ’. ‘ಇಲ್ಲಿ ಪ್ರಜ್ಞಾವಂತ ಮತದಾರರು’ ಇರುವುದರಿಂದ ‘ವೆಚ್ಚದ ಮಿತಿ/ಚುನಾವಣಾ ಅಕ್ರಮ’ ಎಂಬಂತಹ ಚರ್ಚೆ ‘ನಗಣ್ಯ’ ಎನ್ನುವುದುಹಿರಿಯ ರಾಜಕಾರಣಿಯೊಬ್ಬರು ಹೇಳುವ ಮಾತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.