ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್‌ಗಳು ಸಾಕಷ್ಟು ಸಂಖ್ಯೆಯಲ್ಲಿದ್ದರೂ ₹15 ಸಾವಿರ ಕೋಟಿ ಕಾಮಗಾರಿಯ ಗುಣ ನಿಯಂತ್ರಣ ಪರಿಶೀಲಿಸುವ ಮುಖ್ಯ ಎಂಜಿನಿಯರ್ ಹೊಣೆಯನ್ನು ಸೂಪರಿಂಟೆಂಡಿಂಗ್ ಶ್ರೇಣಿಯ ಎಂಜಿನಿಯರ್‌ಗೆ ವಹಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮಂಗಳೂರು ವೃತ್ತದ ಸೂಪರಿಂಟೆಂಡಿಂಗ್ ಎಂಜಿನಿಯರ್ ಬಿ.ಟಿ.ಕಾಂತರಾಜ್ ಅವರನ್ನು ಗುಣ ನಿಯಂತ್ರಣ ವಲಯದ ಮುಖ್ಯ ಎಂಜಿನಿಯರ್ ಹುದ್ದೆಗೆ ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ. ಆಪ್ತ ಅಧಿಕಾರಿ ಎಂಬ ಕಾರಣಕ್ಕೆ ಸಚಿವ ಎಚ್.ಡಿ.ರೇವಣ್ಣ ಅವರು ದೊಡ್ಡ ಹೊಣೆ ನೀಡಿದ್ದಾರೆ ಎಂಬ ಆಕ್ಷೇಪಗಳೂ ವ್ಯಕ್ತವಾಗಿವೆ.
ಬೆಂಗಳೂರಿನಲ್ಲೇ ಇಲಾಖೆಯ ಹತ್ತು ಸೂಪರಿಂಟೆಂಡಿಂಗ್ ಎಂಜಿನಿಯರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಗುಣ ನಿಯಂತ್ರಣ ವಿಭಾಗ
ದಲ್ಲೇ ಇಬ್ಬರು ಸೂಪರಿಂಟೆಂಡಿಂಗ್ ಎಂಜಿನಿಯರ್‌ಗಳಿದ್ದಾರೆ. ಅವರೆಲ್ಲರನ್ನು ಬಿಟ್ಟು 400 ಕಿ.ಮೀ.ದೂರ
ದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಪ್ರಭಾರ ನೀಡಲಾಗಿದೆ. ಇದು ಸಹ ಅಧಿಕಾರಿಗಳ ತಕರಾರಿಗೆ ಮತ್ತೊಂದು ಕಾರಣ.
‘ಗುಣ ನಿಯಂತ್ರಣ ವಲಯವು ಸಂಪರ್ಕ ಮತ್ತು ಕಟ್ಟಡಗಳು ದಕ್ಷಿಣ ವಲಯ, ಸಂಪರ್ಕ ಮತ್ತು ಕಟ್ಟಡಗಳು ಉತ್ತರ ವಲಯ ಹಾಗೂ ಸಂಪರ್ಕ ಮತ್ತು ಕಟ್ಟಡಗಳು ಈಶಾನ್ಯ ವಲಯಗಳ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಸುತ್ತದೆ. ಈ ವಲಯಗಳಲ್ಲಿ ವರ್ಷಕ್ಕೆ ₹15 ಸಾವಿರ ಕೋಟಿಯ ಕಾಮಗಾರಿ ನಡೆಯುತ್ತದೆ. ನಿಯೋಜನೆ ಮೇಲೆ ಬಂದ ಅಧಿಕಾರಿಗೆ ಈ ಹೊಣೆ ನಿಭಾಯಿಸಲು ಸಾಧ್ಯವೇ’ ಎಂಬುದು ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಶ್ನೆ.
ಮಂಗಳೂರು ವೃತ್ತದ ವ್ಯಾಪ್ತಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಮಡಿಕೇರಿ ವ್ಯಾಪ್ತಿಯಲ್ಲಿ ವರ್ಷಕ್ಕೆ ಸರಾಸರಿ ₹2 ಸಾವಿರ ಕೋಟಿಯ ಕಾಮಗಾರಿ ನಡೆಯುತ್ತದೆ. ಈ ಕಾಮಗಾರಿಯ ಮೇಲ್ವಿಚಾರಣೆ ವಹಿಸುವ ಅಧಿಕಾರಿಯೇ ಇನ್ನು ಮುಂದೆ ಈ ಕಾಮಗಾರಿಗಳ ಗುಣಮಟ್ಟ
ಪರಿಶೀಲನೆಯನ್ನೂ ನಡೆಸಲಿದ್ದಾರೆ.
ಈ ಮೂರು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಾಗಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕನಿಷ್ಠ ಒಂದು ವರ್ಷವಾದರೂ ಬೇಕು. ಈ ಹೊತ್ತಿನಲ್ಲೇ ಅಲ್ಲಿನ ಅಧಿಕಾರಿಗೆ ಹೆಚ್ಚುವರಿ ಹೊಣೆ ವಹಿಸಿರುವುದೂ ಏಕೆ ಎಂಬ ಪ್ರಶ್ನೆಯೂ ಮೂಡಿದೆ.
ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್‌ಗಳು ಹಾಗೂ ನೌಕರರು ಸೇರಿದಂತೆ ಸಾವಿರಕ್ಕೂ ಅಧಿಕ ಮಂದಿಯನ್ನು ವರ್ಗಾವಣೆ ಮಾಡಲಾಗಿದೆ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ವರ್ಗಾವಣೆ ಮಾಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದರು.
ತಿಂಗಳ ಹಿಂದೆ ವರ್ಗಾವಣೆ ಮಾಡಿದ್ದ ನಾಲ್ವರು ಮುಖ್ಯ ಎಂಜಿನಿಯರ್‌ಗಳಿಗೆ ಸ್ಥಳ ನಿಯುಕ್ತಿ ಮಾಡಿಲ್ಲ. ಬಿ.ಆರ್.ಅನಿಲ್ ಕುಮಾರ್ ಅವರು ಲೋಕಾಯುಕ್ತದಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿದ್ದರು. ಇನ್ನೊಂದೆಡೆ, ಅಧೀನ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ ಎಂದೂ ಹಿರಿಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳ ನಿರೀಕ್ಷೆಯಲ್ಲಿರುವ ಮುಖ್ಯ ಎಂಜಿನಿಯರ್‌ಗಳು
l ಬಿ.ಆರ್.ಅನಿಲ್ ಕುಮಾರ್
l ಮಸೂದ್ ಷರೀಫ್
l ಲಕ್ಷ್ಮಣ ರಾವ್ ಪೇಶ್ವೆ
l ಬಾಲಕೃಷ್ಣ
ಮುಖ್ಯ ಎಂಜಿನಿಯರ್ ಹುದ್ದೆಯಲ್ಲಿ ಸೂಪರಿಂಟೆಂಡಿಂಗ್ ಎಂಜಿನಿಯರ್‌ಗಳು
*ರವೀಂದ್ರ, ಸಣ್ಣ ನೀರಾವರಿ ಇಲಾಖೆಯ ದಕ್ಷಿಣ ವಲಯ ಬೆಂಗಳೂರು
*ಎಸ್.ಎಂ.ರಾಜು, ಸಣ್ಣ ನೀರಾವರಿ ಇಲಾಖೆಯ ಉತ್ತರ ವಲಯ
*ಬಿ.ಟಿ.ಕಾಂತರಾಜು, ಗುಣ ನಿಯಂತ್ರಣ ವಲಯ, ಬೆಂಗಳೂರು
*ವೆಂಕಟೇಶ್, ಕೃಷ್ಣ ಭಾಗ್ಯ ಜಲ ನಿಗಮ ಆಲಮಟ್ಟಿ ಅಣೆಕಟ್ಟೆ ವಲಯ
*ರವೀಂದ್ರ, ಹೇಮಾವತಿ ನದಿಯ ಗೊರೂರು ಅಣೆಕಟ್ಟೆ
*ಪ್ರಕಾಶ್, ಕಾವೇರಿ ಜಲನಿಗಮ ದಕ್ಷಿಣ ವಲಯ ಮೈಸೂರು
*ರವೀಂದ್ರ ಬಾಬು, ರಸ್ತೆ ಮತ್ತು ಆಸ್ತಿ ನಿರ್ವಹಣೆ ಕೇಂದ್ರ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.