ಧಾರವಾಡ: ‘ನಾಲ್ಕನೇ ಕೈಗಾರಿಕಾ ಕ್ರಾಂತಿಯಾದ ಡಿಜಿಟಲ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಭಾರತವು, ಗುಣಮಟ್ಟದ ತಂತ್ರಜ್ಞರನ್ನು ಉತ್ಪಾದಿಸಿದಲ್ಲಿ ಈ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೇರಲು ಸಾಧ್ಯ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಧಾರವಾಡ ಹಾಗೂ ಅದರ ನೂತನ ಕ್ಯಾಂಪಸ್ ಅನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ತಾಂತ್ರಿಕ ಕೌಶಲವುಳ್ಳ ಮಾನವ ಸಂಪನ್ಮೂಲವನ್ನು ಬೆಳೆಸಿದಲ್ಲಿ ಭವ್ಯ ಭಾರತ ಕಟ್ಟಲು ಸಹಾಯವಾಗಲಿದೆ. ತಾಂತ್ರಿಕ ಶಿಕ್ಷಣದಲ್ಲಿ ದೇಶವು ಅಗ್ರಸ್ಥಾನದಲ್ಲಿದೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಗಳು ಹಾಗೂ ಅನ್ವೇಷಣೆಗಳು ನಡೆದಲ್ಲಿ ದೇಶದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಹೆಚ್ಚಿನ ಒತ್ತು ನೀಡಿದೆ’ ಎಂದರು.
‘ಮಾಹಿತಿ ತಂತ್ರಜ್ಞಾನದೊಂದಿಗೆ ಜೈವಿಕ ತಂತ್ರಜ್ಞಾನ, ನ್ಯಾನೊ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ನರ ವಿಜ್ಞಾನಗಳಂತಹ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಪರಿಸರ, ಆರೋಗ್ಯ ಕ್ಷೇತ್ರ ಹಾಗೂ ಬಡ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ನೂತನ ಶಿಕ್ಷಣ ನೀತಿಯಲ್ಲೂ ತಂತ್ರಜ್ಞಾನದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಇಂಥ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಹೊಸ ರೀತಿಯ ಸಂಶೋಧನೆಗಳು ನಡೆಯಬೇಕು’ ಎಂದು ರಾಷ್ಟ್ರಪತಿ ಹೇಳಿದರು.
‘ಐಐಐಟಿ ಅಧ್ಯಕ್ಷರಾಗಿ ಸುಧಾಮೂರ್ತಿ ಅವರು ಇರುವುದರಿಂದ ಇಲ್ಲಿ ಬಾಲಕಿಯರ ಕಲಿಕೆಗೂ ಹೆಚ್ಚು ಒತ್ತು ಸಿಗುವ ವಿಶ್ವಾಸವಿದೆ’ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಯಾವುದೇ ತಂತ್ರಜ್ಞಾನದ ಅಭಿವೃದ್ಧಿಯು ಮನುಕುಲದ ಉದ್ಧಾರಕ್ಕೆ ಮೀಸಲಾಗಿರಬೇಕು. ಐಐಐಟಿ ಧಾರವಾಡದಲ್ಲಿ 2 ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುವಂತಾಗಬೇಕು. ಅದಕ್ಕಾಗಿ ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲಿದೆ’ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಕಾಲದಲ್ಲಿ ಅಡಿಗಲ್ಲು ಹಾಕಿದ ಎಲ್ಲಾ ಸಂಸ್ಥೆಗಳ ಉದ್ಘಾಟನೆ ಆ ಅವಧಿಯಲ್ಲೇ ಪೂರ್ಣಗೊಂಡು ಉದ್ಘಾಟನೆಯಾಗುತ್ತಿವೆ. 2019ರಲ್ಲಿ ಐಐಐಟಿ ಹಾಗೂ ಐಐಟಿಗೆ ಮೋದಿ ಅಡಿಗಲ್ಲು ಹಾಕಿದ್ದರು. ಇದೇ ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರೇ ಐಐಟಿ ಧಾರವಾಡದ ನೂತನ ಕ್ಯಾಂಪಸ್ ಉದ್ಘಾಟಿಸಲಿದ್ದಾರೆ’ ಎಂದರು.
ರಾಜ್ಯಪಾಲ ಥಾವರಚಂದ ಗೆಹ್ಲೋತ್ ಮಾತನಾಡಿದರು. ಐಐಐಟಿ ಧಾರವಾಡ ಅಧ್ಯಕ್ಷೆ ಸುಧಾಮೂರ್ತಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕೌದಿ, ಇಳಕಲ್ ಸೀರೆ ಹಾಗೂ ‘ತ್ರೀ ಥೌಸಂಡ್ ಸ್ಟಿಚಸ್’ ಪುಸ್ತಕ ನೀಡಿದರು.
ನಾಲೆಡ್ಜ್ ಪಾರ್ಕ್ ಸ್ಥಾಪಿಸಿ
‘ಸಿಲಿಕಾನ್ ಸಿಟಿ ಬೆಂಗಳೂರು ಸಮೀಪದಲ್ಲೇ ಇರುವ ಧಾರವಾಡದಲ್ಲೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿವೆ. ಸಾಕಷ್ಟು ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳೂ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವೆಲ್ಲವುಗಳನ್ನೂ ಒಗ್ಗೂಡಿಸಿ ಜ್ಞಾನ ವೃದ್ಧಿಸುವ ನಾಲೆಡ್ಜ್ ಪಾರ್ಕ್ ಅನ್ನು ಸ್ಥಾಪಿಸುವತ್ತ ಚಿಂತನೆ ನಡೆಸಬೇಕಿದೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.