ದಾವಣಗೆರೆ: ಇಪ್ಪತ್ತು ವರ್ಷಗಳ ಹಿಂದೆ ಸೈಕಲ್ ಪಂಕ್ಚರ್ ಅಂಗಡಿ ನಡೆಸುತ್ತಿದ್ದ ಅಮೀರ್ ಅಹ್ಮದ್, ಪ್ರಶ್ನೆಪತ್ರಿಕೆ ಸೋರಿಕೆ ದಂಧೆಯ ಮೂಲಕ ಈಗ ಕೋಟ್ಯಧಿಪತಿಯಾಗಿದ್ದಾನೆ.
ಅಮೀರ್ ಹೆಸರಿಗೆ ತಕ್ಕಂತೆ ದಿಢೀರನೆ ಶ್ರೀಮಂತನಾಗಿದ್ದು ಚನ್ನಗಿರಿ ತಾಲ್ಲೂಕಿನ ಹೀರೇಕೋಗಲೂರು ಗ್ರಾಮಸ್ಥರಲ್ಲಿ ಆಶ್ಚರ್ಯ ಮೂಡಿಸಿತ್ತು. ಬಿಎಂಟಿಸಿ ಚಾಲಕ ಕಂ ನಿರ್ವಾಹಕ ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಆತನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿರುವ ವಿಚಾರ ತಿಳಿಯುತ್ತಿದ್ದಂತೆ ಆತನ ಜೀವನ ವೃತ್ತಾಂತದ ಬಗ್ಗೆ ಗ್ರಾಮಸ್ಥರು ಒಂದೊಂದೇ ಕಥೆ ಹೇಳುತ್ತಿದ್ದಾರೆ.
‘ಅಮೀರ್‌ನ ತಂದೆ ಅಹ್ಮದ್‌ಗೆ ಮೂರು ಎಕರೆ ಜಮೀನಿತ್ತು. ಕೂಲಿ ಕೆಲಸ ಮಾಡುತ್ತಿದ್ದರು. ಬರಿ ಎಸ್‌ಎಸ್‌ಎಲ್‌ಸಿ ಓದಿದ್ದ ಅಮೀರ್ ಕೋಗಲೂರು ಗ್ರಾಮದಲ್ಲಿ ಸೈಕಲ್ ಪಂಕ್ಚರ್ ಅಂಗಡಿ ಇಟ್ಟುಕೊಂಡಿದ್ದ. ಬಳಿಕ ದಾವಣಗೆರೆಗೆ ಹೋಗಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸಕ್ಕೆ ಸೇರಿಕೊಂಡ. ನಂತರ ಅಲ್ಲಿನ ರಾಜಕಾರಣಿಯೊಬ್ಬರ ಮನೆಯಲ್ಲೂ ಕೆಲ ಕಾಲ ಕಾರು ಚಾಲಕನಾಗಿ ಕೆಲಸ ಮಾಡಿದ್ದ’ ಎಂದು ಕೋಗಲೂರು ಗ್ರಾಮಸ್ಥರೊಬ್ಬರು ನೆನಪಿಸಿಕೊಂಡರು.
‘ನಂತರ ಟ್ರಾವೆಲ್ ಏಜೆನ್ಸಿ ಆರಂಭಿಸಿದ. ‘ಗೀತಾಂಜನೇಯ’ ಎಂಬ ಹೆಸರಿನಲ್ಲಿ ಖಾಸಗಿ ಬಸ್‌ಗಳನ್ನೂ ಓಡಿಸಲು ಆರಂಭಿಸಿದ್ದ. ಅದನ್ನು ನಿಲ್ಲಿಸಿ ಬೆಂಗಳೂರಿಗೆ ಹೋಗಿದ್ದ. ಕೆಲ ವರ್ಷಗಳ ಬಳಿಕ ಹಣ ಮಾಡಿಕೊಂಡು ಊರಿಗೆ ಬಂದು ಮೂರ್ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಸಿದ್ದ. 40 ಎಕರೆ ಅಡಿಕೆ ತೋಟವನ್ನೂ ಮಾಡಿದ್ದಾನೆ. ಅಲ್ಪಾವಧಿಯಲ್ಲಿ ಆತ ಇಷ್ಟೊಂದು ಹಣ ಹೇಗೆ ಮಾಡಿದ ಎಂಬ ಹಿಂದಿನ ಮರ್ಮ ಗೊತ್ತಾಗುತ್ತಿದೆ’ ಎಂದರು.
* ಇದನ್ನೂ ಓದಿ:ಪ್ರಶ್ನೆಪತ್ರಿಕೆ ಹಸ್ತಾಂತರಕ್ಕೆ ಶವಾಗಾರವೇ ತಾಣ!
‘ಶಾಸಕ ಶ್ರೀರಾಮುಲು ಅವರ ಬಿಎಸ್‌ಆರ್ ಕಾಂಗ್ರೆಸ್‌ನಿಂದ 2013ರಲ್ಲಿ ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಠೇವಣಿ ಕಳೆದುಕೊಂಡಿದ್ದ. ‘ಹಾಫ್ ಬಾಯ್ಲ್ಡ್’ ಸಿನಿಮಾವನ್ನೂ ನಿರ್ಮಿಸಿದ್ದ‘ ಎಂದು ಗ್ರಾಮಸ್ಥರು ಒಂದೊಂದೇ ಗುಟ್ಟನ್ನು ಬಿಚ್ಚಿಟ್ಟರು.
‘ದಾವಣಗೆರೆಯ ಮನೆಯಲ್ಲಿ ಆತನ ತಾಯಿ ಇದ್ದಾರೆ. ಮಕ್ಕಳನ್ನು ವಸತಿಶಾಲೆಯಲ್ಲಿ ಓದಿಸುತ್ತಿದ್ದಾನೆ. ವೈದ್ಯೆಯಾಗಿರುವ ಆತನ ಪತ್ನಿ ಬೆಂಗಳೂರಿನ ಖಾಸಗಿಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ’ ಎನ್ನುತ್ತವೆ ಮೂಲಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.