ಬೆಂಗಳೂರು: ಬೆಳಗಾವಿ ತಹಶೀಲ್ದಾರ್ ಕಚೇರಿಯ ಎಸ್‌ಡಿಎ ರುದ್ರಣ್ಣ ಅವರ ಆತ್ಮಹತ್ಯೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ವರ್ಗಾವಣೆ ದಂಧೆಯೇ ಕಾರಣ ಎಂಬ ಅನುಮಾನವಿದ್ದು, ಅವರನ್ನು ಸಂಪುಟದಿಂದ ವಜಾ ಮಾಡಿ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
‘ನಿಮ್ಮ ಸರ್ಕಾರದ ಭ್ರಷ್ಟಾಚಾರದ ದಾಹಕ್ಕೆ ಇನ್ನೆಷ್ಟು ಪ್ರಾಮಾಣಿಕ ಅಧಿಕಾರಿಗಳು ಬಲಿಯಾಗಬೇಕು’ ಎಂದು ಅವರು ‘ಎಕ್ಸ್’ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ರುದ್ರಣ್ಣ ಅವರು ಸಾವನ್ನಪ್ಪಿರುವ ಪ್ರಕರಣವೂ ಸೇರಿ ಕಳೆದ 17 ತಿಂಗಳಲ್ಲಿ ಭ್ರಷ್ಟಾಚಾರಕ್ಕೆ ಬಲಿಯಾದ ನಾಲ್ಕನೇ ಪ್ರಕರಣವಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಯಾವ ಪರಾಕಾಷ್ಠೆ ತಲುಪಿದೆ ಎನ್ನುವುಕ್ಕೆ ಮತ್ತೊಂದು ನಿದರ್ಶನ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಲಂಚಕೋರತನಕ್ಕೆ ಬೇಸತ್ತು ದಾವಣಗೆರೆಯ ಗುತ್ತಿಗೆದಾರ ಪಿ.ಸಿ.ಗೌಡರ್ ಆತ್ಮಹತ್ಯೆ, ವರ್ಗಾವಣೆ ದಂಧೆಯ ಒತ್ತಡ, ಕಿರುಕುಳ ತಾಳಲಾರದೆ ಯಾದಗಿರಿ ಪಿಎಸ್‌ಐ ಪರಶುರಾಮ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಲೆಲ್ಲ ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ಭಾಗ್ಯ, ಆತ್ಮಹತ್ಯೆ ಗ್ಯಾರಂಟಿ ಎಂದು ಅಶೋಕ ಕಿರಿಕಾರಿದ್ದಾರೆ.
ಆಪ್ತ ಕಾರ್ಯದರ್ಶಿಯೇ ಕಾರಣ
ವಿಧಾನಪರಿಷತ್ ವಿರೋಧಪಕ್ಷದ ಸಚೇತಕ ಎನ್.ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರುದ್ರಣ್ಣ ಅವರ ವಾಟ್ಸ್ ಆ್ಯಪ್ ಸಂದೇಶದ ಪ್ರಕಾರ ಅವರ ಆತ್ಮಹತ್ಯೆಗೆ ಲಕ್ಷ್ಮಿ ಹೆಬ್ಬಾಳಕರ ಅವರ ಆಪ್ತ ಕಾರ್ಯದರ್ಶಿಯೇ ಕಾರಣ. ಹಿಂದೆ ಈಶ್ವರಪ್ಪ ಅವರ ಹೇಗೆ ರಾಜೀನಾಮೆ ಕೊಟ್ಟಿದ್ದರೋ ಅದೇ ಮಾದರಿಯಲ್ಲಿ ಲಕ್ಷ್ಮಿ ಅವರೂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.