ADVERTISEMENT

ಸಿಎಂ ಶುದ್ಧಹಸ್ತದ ಮುಖವಾಡ ಕಳಚಿದೆ: ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 16:03 IST
Last Updated 20 ಜುಲೈ 2024, 16:03 IST
ಆರ್. ಅಶೋಕ 
ಆರ್. ಅಶೋಕ    

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 40 ವರ್ಷಗಳ ಶುದ್ಧ ಹಸ್ತದ ಮುಖವಾಡ ಕಳಚಿದೆ. ಹಗರಣ ಮಾಡಿದ್ದರಿಂದಲೇ ಬೆಚ್ಚಿ ಬಿದ್ದಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಸಿದ್ದರಾಮಯ್ಯ ಬೆದರಿರುವುದರಿಂದಲೇ ಪುಟಗಟ್ಟಲೆ ಜಾಹೀರಾತು ನೀಡಿ ಸ್ಪಷ್ಟನೆ ಕೊಟ್ಟಿದ್ದಾರೆ. ಅವರು ಜಾತಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಿರ್ದಿಷ್ಟ ಜಾತಿಯ ವಿರುದ್ಧ ಯಾವುದೇ ಆಪಾದನೆ ಮಾಡಬಾರದು ಎಂದು ಸಂವಿಧಾನದಲ್ಲೇ ತಿದ್ದುಪಡಿ ಮಾಡಲು ಕ್ರಮವಹಿಸಲಿ’ ಎಂದು ಸಲಹೆ ನೀಡಿದರು.

‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹೊಣೆಯನ್ನು ಅಧಿಕಾರಿಗಳ ಮೇಲೆ ಹಾಕುತ್ತಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ 40ಕ್ಕೂ ಅಧಿಕ ದಾಖಲೆಗಳನ್ನು ಕೊಟ್ಟಿದ್ದರೂ ಸ್ಪಷ್ಟೀಕರಣ ಕೊಡದ ಮುಖ್ಯಮಂತ್ರಿ, ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಕಾರಣ ಎನ್ನುತ್ತಿದ್ದಾರೆ. ಮಾಜಿ ಸಚಿವ ಬಿ. ನಾಗೇಂದ್ರ, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಅವರಿಗೆ ಕ್ಲೀನ್‌ಚಿಟ್‌ ನೀಡುವ ಮೂಲಕ ಹಗರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ನಾಗೇಂದ್ರ ತಪ್ಪೇ ಮಾಡಿಲ್ಲ ಎನ್ನುವುದಾದರೆ ಅವರ ರಾಜೀನಾಮೆ ಏಕೆ ಪಡೆಯಲಾಯಿತು’ ಎಂದು ಪ್ರಯತ್ನಿಸಿದರು.

ADVERTISEMENT

‘ರಾಜ್ಯದ ಜನರ ಹಣವನ್ನು ಕಳ್ಳ ಖಾತೆಯಲ್ಲಿ ಇಟ್ಟಿದ್ದು ರಾಜ್ಯ ಸರ್ಕಾರ. ಅದರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪಾತ್ರ ಏನಿದೆ?. ಬ್ಯಾಂಕ್‌ ಅಧಿಕಾರಿಗಳು ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿದರು. ಆದರೆ, ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಮುಚ್ಚಿಹಾಕುತ್ತಿದೆ’ ಎಂದರು.

‘ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಮತ್ತಷ್ಟು ಆರೋ‍ಪ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರ ಬಿಟ್ಟುಕೊಟ್ಟರೆ ಅವರು ಮಾಡಿರುವ 21 ಹಗರಣಗಳ ಆರೋಪವನ್ನು ನಾವೇ ತನಿಖೆ ಮಾಡುತ್ತೇವೆ' ಎಂದು ಹೇಳಿದರು.

‘ಬಿಜೆಪಿ ಶಾಸಕರಿಗೂ ಅನುದಾನ ನೀಡಲಿ’
‘ಬ್ರ್ಯಾಂಡ್ ಬೆಂಗಳೂರು’ ಯಶಸ್ವಿಯಾಗಲು ಎಲ್ಲ ಕ್ಷೇತ್ರಗಳು ಅಭಿವೃದ್ಧಿಯಾಗಬೇಕು. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್‌ ಶಾಸಕರ ಕ್ಷೇತ್ರಕ್ಕೂ ಅನುದಾನ ನೀಡಿತ್ತು. ಬೆಂಗಳೂರಿನಲ್ಲಿ ಬಿಜೆಪಿ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ. ಶಿವಕುಮಾರ್ ಎಲ್ಲ ಶಾಸಕರ ಬಳಿ ಚರ್ಚಿಸಿ ಅಗತ್ಯ ಅನುದಾನ ನೀಡಬೇಕು ಎಂದು ಅಶೋಕ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.