ADVERTISEMENT

ಬೆಂಗಳೂರನ್ನು ನಿಮ್ಮ ಜಹಗೀರು ಅಂದುಕೊಂಡಿದ್ದೀರಾ: ಡಿಸಿಎಂಗೆ ಆರ್‌. ಅಶೋಕ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2024, 10:55 IST
Last Updated 7 ನವೆಂಬರ್ 2024, 10:55 IST
   

ಬೆಂಗಳೂರು: ಅನುದಾನ ಬೇಕಾದರೆ ನನ್ನ ಬಳಿ ತಗ್ಗಿ ಬಗ್ಗಿ ನಡೆಯಬೇಕು ಎಂಬ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರ ಮಾತು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, 'ಅನುದಾನ ಬೇಕಾದರೆ ನನ್ನ ಬಳಿ ತಗ್ಗಿ ಬಗ್ಗಿ ನಡೆಯಬೇಕು'- ಡಿಸಿಎಂ ಸಾಹೇಬರ ಲೇಟೆಸ್ಟ್ ನುಡಿಮುತ್ತುಗಳು. ಡಿ.ಕೆ ಶಿವಕುಮಾರ್‌ ಅವರೇ, 'ನಿಮ್ಮ ಬಳಿ ತಗ್ಗಿ-ಬಗ್ಗಿ ಇರಬೇಕು ಅನ್ನುವುದಕ್ಕೆ ಬೆಂಗಳೂರು ನಗರವನ್ನು ನಿಮ್ಮ ಜಹಗೀರು ಅಂದುಕೊಂಡಿದ್ದೀರಾ?. ಅಧಿಕಾರ ಎನ್ನುವುದು ಮತದಾರರು ಕೊಟ್ಟಿರುವ ಭಿಕ್ಷೆ, ಸಂವಿಧಾನ ಕೊಟ್ಟಿರುವ ಜವಾಬ್ದಾರಿಯೇ ಹೊರತು ಪಾಳೆಗಾರಿಕೆ ಅಲ್ಲ' ಎಂದಿದ್ದಾರೆ.

'ಪ್ರಜಾಪ್ರಭುತ್ವದಲ್ಲಿ ನಾವು ತಗ್ಗಿ-ಬಗ್ಗಿ ನಡೆಯಬೇಕಿರುವುದು ಮತಭಿಕ್ಷೆ ನೀಡಿರುವ ಮತದಾರ ಪ್ರಭುಗಳಿಗೆ, ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿರುವ ಸಂವಿಧಾನಕ್ಕೆ ಹೊರತು ಯಾವ ದೊಣ್ಣೆ ನಾಯಕನಿಗೂ ಅಲ್ಲ. ಈ ನಿಮ್ಮ ಒಣ ಪ್ರತಿಷ್ಠೆ, ಧಿಮಾಕು, ದರ್ಬಾರು ಎಲ್ಲ ಬಿಟ್ಟು ಜನರ ಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಿ. ಯಾವುದೇ ಕ್ಷೇತ್ರದ ಬಗ್ಗೆ ತಾರತಮ್ಯ ಮಾಡದೆ ಸಚಿವರಾಗಿ ನಿಮ್ಮ ಕರ್ತವ್ಯ ನಿರ್ವಹಿಸಿ' ಎಂದು ಸಲಹೆ ನೀಡಿದ್ದಾರೆ.

ADVERTISEMENT

ಬೆಂಗಳೂರು ಮೆಟ್ರೊದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರ ಜೊತೆ ಪ್ರಯಾಣಿಸುತ್ತಿದ್ದಾಗ, 'ನನ್ನ ಜೊತೆ ಮಾತನಾಡಬೇಕಾದರೆ ತಗ್ಗಿಬಗ್ಗಿ ಇರಬೇಕು. ಬೇರೆಯವರ ಜೊತೆಗೆ ಇದ್ದಂತೆ, ಇದ್ದರೆ ಆಗುವುದಿಲ್ಲ' ಎಂದು ಡಿಸಿಎಂ ಅವರು ಹೇಳುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.