ಬೆಂಗಳೂರು: ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರು ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ಆರ್.ಅಶೋಕ ಅವರನ್ನು ಮುಜುಗರಕ್ಕೀಡು ಮಾಡಿದ ಘಟನೆ ನಡೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡುವಾಗ, ‘ನಾನು ತುಂಬಾ ಬದಲಾಗಿದ್ದೇನೆ ಎಂದು ಯತ್ನಾಳ ಹೇಳಿದ್ದಾರೆ. ವಾಜಪೇಯಿ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದ ಯತ್ನಾಳ ಅವರು ಆಗ ಇದ್ದ ಹಾಗೆ ಈಗ ಇದ್ದಾರಾ? ನಾನು ಬದಲಾಗಿಲ್ಲ, ಹಾಗೇ ಇದ್ದೀನಿ. 1983 ರಲ್ಲಿ ಹೇಗಿದ್ದಿನೋ ಹಾಗೇ ಇದ್ದೇನೆ’ ಎಂದರು.
ಆಗ ಎದ್ದು ನಿಂತು ಮಾತನಾಡಿದ ಆರ್.ಅಶೋಕ, 'ನಿನ್ನೆ ಯತ್ನಾಳ ಅವರು ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ’ ಎಂದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಯತ್ನಾಳ, ‘ನೀವು ಇಲ್ಲದ ಬಣ್ಣ ಹಚ್ಚಲು ಹೋಗಬೇಡಿ. ನಾನು ಸಿದ್ದರಾಮಯ್ಯ ಅವರನ್ನು ಹೊಗಳಲಿಲ್ಲ. ಅವರ ಕಚೇರಿಗೂ ಹೋಗಲಿಲ್ಲ. ನೀವು ಹೀಗೆ ಫುಲ್‌ಟಾಸ್ ಹಾಕಿದರೆ ಯತ್ನಾಳಗೆ ಏನೂ ಆಗಲ್ಲ. ನಾನು ಯಾವುದೇ ಅಡ್ಜೆಸ್ಟ್‌ಮೆಂಟ್ ಮಾಡಿಕೊಂಡಿಲ್ಲ. ಯಾವುದೇ ಕೆಲಸ ಮಾಡಿಸಿಕೊಳ್ಳಲು ಅವರ ಬಳಿ ಹೋಗಲಿಲ್ಲ’ ಎಂದರು. ಈ ಉತ್ತರ ಅಶೋಕ ಅವರನ್ನು ಮುಜುಗರಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.