ADVERTISEMENT

ತುರ್ತು ಪರಿಸ್ಥಿತಿ ವಾರ್ಷಿಕೋತ್ಸವ ಸಂಭ್ರಮಿಸಲು ಹಾಲಿನ ದರ ಏರಿಕೆ: ಆರ್‌. ಅಶೋಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜೂನ್ 2024, 9:30 IST
Last Updated 25 ಜೂನ್ 2024, 9:30 IST
<div class="paragraphs"><p> ಆರ್‌. ಅಶೋಕ</p></div>

ಆರ್‌. ಅಶೋಕ

   

ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆಯ ಕುರಿತು ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘50 ವರ್ಷಗಳ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ವಾರ್ಷಿಕೋತ್ಸವವನ್ನು ಸಂಭ್ರಮಿಸಲು ನಂದಿನಿ ಹಾಲಿನ ದರವನ್ನು ಲೀಟರ್‌ಗೆ ₹2 ಹೆಚ್ಚಳ ಮಾಡಿ ಕಾಂಗ್ರೆಸ್‌ ಸರ್ಕಾರ ವಿಕೃತ ಸಂತೋಷ ಅನುಭವಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನೀವು ಅಧಿಕಾರಕ್ಕೆ ಬಂದ ಕೇವಲ 13 ತಿಂಗಳಿನಲ್ಲಿ ಎರಡು ಬಾರಿ ಹಾಲಿನ ದರವನ್ನು ಹೆಚ್ಚಿಸಿದ್ದೀರಿ. ಕಳೆದ ವರ್ಷ ಆಗಸ್ಟ್‌ನಲ್ಲಿ ₹3 ಹೆಚ್ಚಳವಾಗಿದ್ದ ಹಾಲಿನ ಬೆಲೆ ಈಗ ಮತ್ತೊಮ್ಮೆ ₹2 ಹೆಚ್ಚಾಗಿದೆ. ರಾಜ್ಯದಲ್ಲಿನ ಬಡವರು, ಮಧ್ಯಮ ವರ್ಗದ ಜನರು ಈಗಾಗಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ, ಗಗನಕ್ಕೇರಿರುವ ತರಕಾರಿ ಬೆಲೆಗಳಿಂದ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸಿ ಮತ್ತೊಮ್ಮೆ ಬಡವರ ಗಾಯದ ಮೇಲೆ ಬರೆ ಎಳೆದಿದ್ದೀರಿ’ ಎಂದು ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮಗೆ ಬಡವರು, ಮಧ್ಯಮ ವರ್ಗದ ಜನರ ಮೇಲೆ ಸ್ವಲ್ಪವಾದರೂ ಕನಿಕರ ಇದ್ದರೆ, ಈ ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಿರಿ ಎಂದು ಅವರು ಆಗ್ರಹಿಸಿದ್ದಾರೆ.

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್‌) ನಂದಿನಿ ಹಾಲಿನ ದರವನ್ನು ಹೆಚ್ಚಿಸಲಾಗಿದ್ದು, ಪರಿಷ್ಕೃತ ದರಗಳು ನಾಳೆಯಿಂದ (ಜೂನ್ 26) ಜಾರಿಗೆ ಬರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.