ADVERTISEMENT

ಕುಡಿಯುವ ನೀರು ನೀಡುವ ಯೋಗ್ಯತೆ ಇಲ್ಲ: ಆರ್. ಅಶೋಕ ಟೀಕೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 16:04 IST
Last Updated 15 ಜೂನ್ 2024, 16:04 IST
ಆರ್. ಅಶೋಕ 
ಆರ್. ಅಶೋಕ    

ಬೆಂಗಳೂರು: ‘ಟ್ಯಾಂಕರ್‌ಗಳನ್ನು ಸ್ವಚ್ಛಗೊಳಿಸಲು ಸರ್ಕಾರದ ಬಳಿ ಹಣವಿಲ್ಲ. ಜನರಿಗೆ ಶುದ್ಧ ಕುಡಿಯುವ ನೀರು ನೀಡುವ ಯೋಗ್ಯತೆ ಕೂಡ ರಾಜ್ಯ ಸರ್ಕಾರಕ್ಕೆ ಇಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರುಣ ಕ್ಷೇತ್ರದಲ್ಲೇ ಕಲುಷಿತ ನೀರು ಕುಡಿದು ಜನರು ಮೃತಪಟ್ಟಿದ್ದಾರೆ. ತುಮಕೂರಿನಲ್ಲೂ ಕಲುಷಿತ ನೀರು ಸೇವಿಸಿ ಆರು ಜನರ ಸಾವಾಗಿದೆ. ಜಿಲ್ಲಾಧಿಕಾರಿಯನ್ನು ಕೇಳಿದರೆ ಮೂತ್ರಪಿಂಡ ಸಮಸ್ಯೆ ಎಂದು ಕಾರಣ ಹೇಳಿದ್ದಾರೆ. ಈ ಕುರಿತು ವರದಿ ಕೇಳಿದ್ದೇನೆ’ ಎಂದರು‌.

‘ಕೊಪ್ಪಳದಲ್ಲಿ ಕೂಡ ಕಲುಷಿತ ನೀರು ಸೇವಿಸಿ ಕೆಲವರು ಆಸ್ಪತ್ರೆ ಸೇರಿದ್ದಾರೆ. ಶಾಸಕರು ಅನುದಾನ ಕೇಳಿದರೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಾಯ್ಮುಚ್ಚಿಕೊಂಡು ಸುಮ್ಮನಿರಿ ಎಂದಿದ್ದಾರೆ. ಜನರ ಸಾವಿಗೆ ಸರ್ಕಾರದ ನಿರ್ಲಕ್ಷ್ಯವೇ ನೇರ ಕಾರಣ’ ಎಂದು ಕಿಡಿಕಾರಿದರು.

ADVERTISEMENT

ಟ್ಯಾಂಕರ್ ಮಾಫಿಯಾ: ‘ಹೈಕಮಾಂಡ್‌ಗೆ ಹಣ ಕಳುಹಿಸಲು ಕಾಂಗ್ರೆಸ್ ಸರ್ಕಾರ ಟ್ಯಾಂಕರ್ ಮಾಫಿಯಾವನ್ನು ಬಳಸಿಕೊಂಡಿದೆ’ ಎಂದು ದೂರಿದ ಅಶೋಕ, ‘ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನದಲ್ಲಿ ಶೇ 25ರಷ್ಟು ಕಡಿತ ಮಾಡಿರುವುದರಿಂದ ಮೂಲಸೌಕರ್ಯ ಒದಗಿಸಲು ಅಡ್ಡಿಯಾಗಿದೆ. ಮುಖ್ಯಮಂತ್ರಿಯ ಸೂಚನೆಗೆ ಬೆಲೆ ನೀಡದೆ ಅಧಿಕಾರಿಗಳು ಕೈ ಚೆಲ್ಲಿದ್ದಾರೆ. ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ’ ಎಂದರು.

‘ಬಿಜೆಪಿ ಸರ್ಕಾರದ ವಿರುದ್ಧ ಶೇ 40 ಲಂಚದ ಆರೋಪ ಮಾಡಿದ್ದರೂ ಅದನ್ನು ಸಾಬೀತುಪಡಿಸಲು ಕಾಂಗ್ರೆಸ್‌ ಪಕ್ಷಕ್ಕೆ ಸಾಧ್ಯವಾಗಿಲ್ಲ’ ಎಂದೂ ಹೇಳಿದರು.

ದ್ವೇಷದ ರಾಜಕಾರಣ: ‘ಬಿ.ಎಸ್.ಯಡಿಯೂರಪ್ಪ ಅವರ ವಿಚಾರದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಡಿ.ಕೆ. ಶಿವಕುಮಾರ್ ಅವರಂತೂ ಇದನ್ನು ನೇರವಾಗಿ ಒಪ್ಪಿಕೊಂಡಿದ್ದಾರೆ. ಕರ್ನಾಟಕದಲ್ಲಿ ದ್ವೇಷ ರಾಜಕಾರಣ ಈವರೆಗೆ ಇರಲಿಲ್ಲ. ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಗೃಹ ಸಚಿವರೇ ಹೇಳಿದ್ದರೂ, ಚುನಾವಣೆಯ ಬಳಿಕ ರಾಜಕೀಯ ದ್ವೇಷ ಸಾಧಿಸಲಾಗಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.