ಬೆಂಗಳೂರು: ‘ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ (ಬಿಟಿಸಿ) ಇದೇ 25 ಮತ್ತು 26ರಂದು ರೇಸ್ ಚಟುವಟಿಕೆ ನಡೆಸಲು ಷರತ್ತುಬದ್ಧ ಅನುಮತಿ ನೀಡುವ ಸಂಬಂಧ ನಿಮ್ಮ ನಿಲುವು ಏನು ಎಂಬುದನ್ನು ತಿಳಿಸಿ’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
‘ಪರವಾನಗಿ ನವೀಕರಿಸಲು ಕೋರಲಾಗಿರುವ ಮನವಿಯನ್ನು ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಬೆಂಗಳೂರು ಟರ್ಫ್ ಕ್ಲಬ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ರಜಾಕಾಲದ ಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಅವರಿದ್ದ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ ಈ ಸಂಬಂಧ ಸರ್ಕಾರಕ್ಕೆ ನಿರ್ದೇಶಿಸಿತು.
‘ರೇಸಿಂಗ್ ಗೆ ಇದೇ 25 ಮತ್ತು 26ರಂದು ವೇಳಾಪಟ್ಟಿ ಪ್ರಕಟಿಸಲಾಗಿದೆ. ಬಹಳಷ್ಟು ಜನರ ಜೀವನೋಪಾಯ ರೇಸಿಂಗ್ ಚಟುವಟಿಕೆಯನ್ನು ಅವಲಂಬಿಸಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಹಾಗಾಗಿ, ಇದೇ 25 ಮತ್ತು 26 ರಂದು ರೇಸಿಂಗ್ ಚಟುವಟಿಕೆಗೆ ಷರತ್ತುಬದ್ಧ ಅನುಮತಿ ನೀಡುವ ನಿಟ್ಟಿನಲ್ಲಿ ಸರ್ಕಾರ ಕೆಲವು ಪ್ರಸ್ತಾವನೆ ಹಾಗೂ ಸೂಚನೆಗಳ ಸಹಿತ ಗುರುವಾರ (ಮೇ 23) ನ್ಯಾಯಾಲಯಕ್ಕೆ ಉತ್ತರಿಸಬೇಕು. ಯಾವ್ಯಾವ ಷರತ್ತುಗಳನ್ನು ವಿಧಿಸಬೇಕು ಎಂಬುದನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬಹುದು. ನಂತರ ಪರವಾನಗಿ ನವೀಕರಣಕ್ಕೆ ಕೋರಿರುವ ಅರ್ಜಿಯನ್ನು ಪರಿಗಣಿಸುವ ಅಥವಾ ಪರಿಗಣಿಸದೇ ಇರುವ ಬಗ್ಗೆ ತೀರ್ಮಾನಿಸಬಹುದು’ ಎಂದು ನ್ಯಾಯಪೀಠ ಹೇಳಿದೆ. ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಲಾಗಿದೆ.
ಸರ್ಕಾರದ ಪರ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಹಾಜರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.