ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸರ್ಕಾರದ ನಂ1 ರೇಸ್ ವ್ಯೂ ವಸತಿ ಗೃಹವನ್ನು ಹಂಚಿಕೆ ಮಾಡಲಾಗಿದೆ.
ಈ ಹಿಂದೆ ಇದನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಹಂಚಿಕೆ ಮಾಡಲಾಗಿತ್ತು. ಅದನ್ನು ಈಗ ಹಿಂದಕ್ಕೆ ಪಡೆಯಲಾಗಿದೆ. ಬಸವರಾಜ ಬೊಮ್ಮಾಯಿ ಅವರ ಮುಖ್ಯಮಂತ್ರಿ ಅಧಿಕೃತ ನಿವಾಸ ಇದಾಗಿರಲಿದೆ.
ಈ ಮಧ್ಯೆ ‘ಕಾವೇರಿ’ ನಿವಾಸವನ್ನು ಕಂದಾಯ ಸಚಿವ ಆರ್.ಅಶೋಕ ಅವರಿಗೆ ಹಂಚಿಕೆ ಮಾಡಲಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಲ್ಲೇ ಉಳಿಯಲು ನಿರ್ಧರಿಸಿರುವುದರಿಂದ ಕಾವೇರಿಯನ್ನು ಬಿಟ್ಟುಕೊಡಲು ಅಶೋಕ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಮನೆಗೆ ಮೊಬೈಲ್ ನಿಷೇಧ:ಬಸವರಾಜ ಬೊಮ್ಮಾಯಿ ಅವರ ಆರ್.ಟಿ.ನಗರದ ನಿವಾಸಕ್ಕೆ ಮೊಬೈಲ್ ಒಯ್ಯುವುದಕ್ಕೆ ಕಡಿವಾಣ ಹಾಕಲಾಗಿದೆ. ಮೊಬೈಲ್ ಪೋನ್ ಮೂಲಕ ಸೆಲ್ಫಿ ತೆಗೆಯಲು ಹಲವರು ಕಿರಿಕಿರಿ ಉಂಟು ಮಾಡುತ್ತಿರುವ ಕಾರಣ ಬೊಮ್ಮಾಯಿ ಅವರ ಮನೆಯ ಗೇಟ್‌ಗೆ ಈ ಸಂಬಂಧ ಸೋಮವಾರ ಮಾಹಿತಿ ಫಲಕ ಹಾಕಲಾಗಿತ್ತು. ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಈ ನಿರ್ದೇಶನ ಅನ್ವಯ ಆಗುವುದಿಲ್ಲ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.