ಬೆಂಗಳೂರು:ರಫೇಲ್ ಯುದ್ಧವಿಮಾನಕ್ಕೆ 'ಶಸ್ತ್ರ ಪೂಜೆ' ಸಲ್ಲಿಸಿ ನಾಟಕ ಮಾಡುವ ಅಗತ್ಯವಿರಲಿಲ್ಲ ಎಂದುಎಐಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಮಲ್ಲಿಕಾರ್ಜುನ ಖರ್ಗೆ ಟೀಕೆ ಮಾಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಫ್ರಾನ್ಸ್‌ನಲ್ಲಿ ರಫೇಲ್ ಯುದ್ಧವಿಮಾನಕ್ಕೆ ‘ಆಯುಧಪೂಜೆ’ ನೆರವೇರಿಸಿರುವುದಕ್ಕೆ ಬುಧವಾರ ಪ್ರತಿಕ್ರಿಯಿಸಿರುವ ಖರ್ಗೆ ಅವರು, ವಿಮಾನಕ್ಕೆ ಆಯುಧ ಪೂಜೆ ಸಲ್ಲಿಸುವ ಮೂಲಕ ತಮಾಷೆ(ನಾಟಕ) ಮಾಡುವ ಅಗತ್ಯ ಇರಲಿಲ್ಲ ಎಂದಿದ್ದಾರೆ.
ಈ ಹಿಂದೆ ನಾವು ಬೋಫೋರ್ಸ್ ಗನ್‌ನಂತಹ ಶಸ್ತ್ರಾಸ್ತ್ರಗಳನ್ನು ಖರೀದಿಸಿದಾಗ ಅವುಗಳನ್ನು ತರಲು ಮತ್ತು ಪ್ರಚಾರ ಗಿಟ್ಟಿಸಿಕೊಳ್ಳಲು ಯಾರೂ ಹೋಗಿರಲಿಲ್ಲ ಎಂದು ಹೇಳಿದ್ದಾರೆ.
ಅವುಗಳು(ವಿಮಾನಗಳು) ಉತ್ತಮವಾಗಿವೆಯೇ ಇಲ್ಲವೇ ಎಂಬುದನ್ನು ವಾಯುಪಡೆ ಅಧಿಕಾರಿಗಳು ನಿರ್ಧರಿಸುತ್ತಾರೆ. ಆದರೆ, ಇವರು ಅಲ್ಲಿಗೆ ಹೋಗುತ್ತಾರೆ, ಅದರೊಳಗೆ(ವಿಮಾನ) ಕುಳಿತುಕೊಳ್ಳುತ್ತಾರೆ. ಜತೆಗೆ, ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕೆ ಮಾಡಿದ್ದಾಗಿ ಎಎನ್‌ಐ ಟ್ವೀಟ್ ಮಾಡಿದೆ.
ರಫೇಲ್ ಯುದ್ಧವಿಮಾನವನ್ನು ಅಧಿಕೃತವಾಗಿ ಪಡೆದ ರಾಜನಾಥ್ ಸಿಂಗ್ ಅವರು, ರಫೇಲ್ ವಿಮಾನಕ್ಕೆ ‘ಆಯುಧಪೂಜೆ’ ನೆರವೇರಿಸಿ ‘ಓಂ’ ಎಂದು ಬರೆದಿದ್ದರು.
₹56 ಸಾವಿರ ಕೋಟಿ ಮೊತ್ತದ 36 ರಫೇಲ್ ಯುದ್ಧವಿಮಾನಗಳನ್ನು ಪಡೆಯಲು 2016ರಲ್ಲಿ ಒಪ್ಪಂದ ಏರ್ಪಟ್ಟಿತ್ತು. 2020ರ ಮೇನಲ್ಲಿ ನಾಲ್ಕು ರಫೇಲ್ ವಿಮಾನಗಳು ಭಾರತಕ್ಕೆ ಬರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.