ADVERTISEMENT

ಆಳಂದದ ಮಶಾಕ್ ದರ್ಗಾದಲ್ಲಿ ರಾಘವ ಚೈತನ್ಯರ ದೇವಸ್ಥಾನ ಖಚಿತ: ಶ್ರೀರಾಮಸೇನೆ

ಬಿಗಿ ಬಂದೋಬಸ್ತ್ ಮಧ್ಯೆ ಆಳಂದದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಲಿಂಗಪೂಜೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 20:11 IST
Last Updated 18 ಫೆಬ್ರುವರಿ 2023, 20:11 IST
ಕಲಬುರಗಿ ಜಿಲ್ಲೆ ಆಳಂದದ ಹೊರವಲಯದಲ್ಲಿ ಶನಿವಾರ ದರ್ಗಾ ಪ್ರವೇಶಕ್ಕೂ ಮುನ್ನ ಶ್ರೀರಾಮಸೇನೆ ಸಂಘಟನೆ ಮತ್ತು ಬಿಜೆಪಿ ಮುಖಂಡರು ಶಿವಲಿಂಗ ಪೂಜೆ ನೆರವೇರಿಸಿದರು –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿ ಜಿಲ್ಲೆ ಆಳಂದದ ಹೊರವಲಯದಲ್ಲಿ ಶನಿವಾರ ದರ್ಗಾ ಪ್ರವೇಶಕ್ಕೂ ಮುನ್ನ ಶ್ರೀರಾಮಸೇನೆ ಸಂಘಟನೆ ಮತ್ತು ಬಿಜೆಪಿ ಮುಖಂಡರು ಶಿವಲಿಂಗ ಪೂಜೆ ನೆರವೇರಿಸಿದರು –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಲಿಂಗಕ್ಕೆ ಶಿವರಾತ್ರಿ ಪ್ರಯುಕ್ತ ಶನಿವಾರ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ 15 ಮಂದಿ ಶ್ರೀರಾಮಸೇನೆ ಸಂಘಟನೆ ಹಾಗೂ ಬಿಜೆಪಿ ಮುಖಂಡರು ಪೂಜೆ ಸಲ್ಲಿಸಿದರು.

ಇದಕ್ಕೂ ಮುನ್ನ ನಡೆದ ಶಿವರಾತ್ರಿ ಮಹಾಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ ಆಂದೋಲಾ ಸಿದ್ದಲಿಂಗ ಸ್ವಾಮೀಜಿ, ‘ರಾಘವ ಚೈತನ್ಯರು ನೆಲೆಸಿದ್ದ ಸ್ಥಳದಲ್ಲಿ ಮೊದಲು ದೇವಾಲಯವಿತ್ತು. ನಂತರ ಮುಸ್ಲಿಂ ಆಕ್ರಮಣಕಾರರು ದೇವಾಲಯ ನೆಲಸಮಗೊಳಿಸಿ ದರ್ಗಾ ನಿರ್ಮಿಸಿದ್ದಾರೆ. ಹೀಗಾಗಿ, ಮತ್ತೆ ಅಲ್ಲಿ ದೇವಸ್ಥಾನ ನಿರ್ಮಿಸಿ ಗಂಟೆ ಹೊಡೆಯುತ್ತೇವೆ. ಇದನ್ನು ಮಾಡದಿದ್ದರೆ ನಾವು ಹಿಂದೂಗಳೇ ಅಲ್ಲ’ ಎಂದರು.

ಸಭೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡದಂತೆ ಆಂದೋಲಾ‌ ಸಿದ್ಧಲಿಂಗ ಸ್ವಾಮೀಜಿಗೆ ಪೊಲೀಸರು ಸೂಚಿಸಿದ್ದರು.

ADVERTISEMENT

ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಹಿಂದೂ ಮುಖಂಡರಿಗೆ ಪೂಜೆ ಸಲ್ಲಿಸಲು ಹೈಕೋರ್ಟ್‌ನ ಕಲಬುರಗಿ ಪೀಠ ಅನುಮತಿ ನೀಡಿತ್ತು. ಶಿವರಾತ್ರಿ ಮಹಾಸಂಗಮ ಕಾರ್ಯಕ್ರಮದ ಬಳಿಕ ಸಿದ್ಧಲಿಂಗ ಸ್ವಾಮೀಜಿ, ಕಡಗಂಚಿ ವೀರಭದ್ರ ಸ್ವಾಮೀಜಿ, ಶಾಸಕರಾದ ಸುಭಾಷ್ ಗುತ್ತೇದಾರ, ಬಸವರಾಜ ಮತ್ತಿಮಡು ಸೇರಿದಂತೆ 15 ಜನರು ಈ ಅವಧಿಯಲ್ಲಿ ದರ್ಗಾಕ್ಕೆ ತೆರಳಿ ರಾಘವ ಚೈತನ್ಯ ಲಿಂಗಕ್ಕೆ ಪೂಜೆ ಸಲ್ಲಿಸಿ ವಾಪಸಾದರು.

ದರ್ಗಾ ಆವರಣದಲ್ಲಿರುವ ಹಜರತ್ ಮರ್ದಾನೆ ಗೈಬ್ ಅವರಿಗೆ ‘ಸಂದಲ್’ (ಗಂಧ ಅರ್ಪಿಸುವ ಧಾರ್ಮಿಕ ಕಾರ್ಯ) ನಡೆಸಲು ಶನಿವಾರ ತಮಗೂ ಅವಕಾಶ ನೀಡಬೇಕು ಎಂದು ಮುಸ್ಲಿಂ ಸಮುದಾಯದವರು ವಕ್ಫ್‌ ನ್ಯಾಯಮಂಡಳಿ ಎದುರು ಮನವಿ ಸಲ್ಲಿಸಿದ್ದರು. ಹೀಗಾಗಿ ಅವರಿಗೂ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಅವಕಾಶ ನೀಡಲಾಗಿತ್ತು. ದರ್ಗಾದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆಸಿಫ್ ಅನ್ಸಾರಿ ಸೇರಿದಂತೆ 14 ಮಂದಿ ಸಂದಲ್ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.