ADVERTISEMENT

ಶಾಲಾ ಮಕ್ಕಳ ಆರೋಗ್ಯ ವೃದ್ಧಿಗೆ ‘ರಾಗಿ ಮಾಲ್ಟ್‌’

ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 16:17 IST
Last Updated 22 ಫೆಬ್ರುವರಿ 2024, 16:17 IST
ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಲಾ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್‌ ವಿತರಿಸಿದರು. ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ ಸಂಸ್ಥಾಪಕ ಮಧುಸೂದನ ಸಾಯಿ ಭಾಗವಹಿಸಿದ್ದರು. 
ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಲಾ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್‌ ವಿತರಿಸಿದರು. ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ ಸಂಸ್ಥಾಪಕ ಮಧುಸೂದನ ಸಾಯಿ ಭಾಗವಹಿಸಿದ್ದರು.    

ಬೆಂಗಳೂರು: ಕ್ಷೀರಭಾಗ್ಯ ಯೋಜನೆ ಜಾರಿಯಿಂದಾಗಿ ರಾಜ್ಯದ ಶಾಲಾ ಮಕ್ಕಳ ಆರೋಗ್ಯ ವೃದ್ಧಿಸಿದೆ. ಜತೆಗೆ, ಹಾಲು ಉತ್ಪಾದಕರು, ಒಕ್ಕೂಟಗಳಿಗೂ ನೆರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿ ಗುರುವಾರ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಹಮ್ಮಿಕೊಂಡಿದ್ದ ಪೌಷ್ಟಿಕಾಂಶಯುಕ್ತ ‘ಸಾಯಿಶೂರ್ ರಾಗಿ ಮಾಲ್ಟ್‌ ಪೌಡರ್‌’ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದ ಮಕ್ಕಳು ರಕ್ತಹೀನತೆಯಿಂದ ಸಂಪೂರ್ಣ ಮುಕ್ತರಾಗಬೇಕು. ಅದಕ್ಕಾಗಿ ಶಾಲೆಯಲ್ಲಿ ಹಾಲು, ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ನೀಡಲಾಗುತ್ತಿದೆ. ಈಗ ಹಾಲಿನ ಜತೆಗೆ ರಾಗಿ ಮಾಲ್ಟ್‌ ಸಿಗಲಿದೆ. ಆರೋಗ್ಯವಂತರಾಗುವ ಮಕ್ಕಳು ಓದಿನ ಕಡೆ ಹೆಚ್ಚಿನ ಗಮನಹರಿಸಲು ಇದು ಸಹಕಾರಿಯಾಗಲಿದೆ ಎಂದರು.

ADVERTISEMENT

‌ಶಿಕ್ಷಣವಿದ್ದರೆ ಮಾತ್ರ ಸ್ವಾಭಿಮಾನದ ಬದುಕು ಸಾಧ್ಯ. ಶಿಕ್ಷಣದ ಮೂಲಕ ವೈಚಾರಿಕತೆ ಬೆಳೆಸಿಕೊಳ್ಳಬೇಕು. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಬೇಕು. ಆಗ ಮಾತ್ರ ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ. ದೇವರ ಪೂಜೆ ಮಾಡುವುದು ತಪ್ಪಲ್ಲ. ಆದರೆ, ಮೌಢ್ಯ, ಕಂದಾಚಾರಗಳ ಪಾಲನೆ ತಪ್ಪು. ಉನ್ನತ ಶಿಕ್ಷಣ ಪಡೆದವರು, ವೈದ್ಯರು, ಎಂಜಿನಿಯರ್‌ಗಳೂ ಇಂದು ಮೌಢ್ಯ ಅನುಸರಿಸುತ್ತಿದ್ದಾರೆ. ಅಂಥವರು ಬಸವಾದಿ ಶರಣರ ಸಾಹಿತ್ಯ ಓದಬೇಕು ಎಂದು ಸಲಹೆ ನೀಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್‌ ನೀಡಲಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ  ಈ ಬಾರಿ ಶಿಕ್ಷಣ ಕ್ಷೇತ್ರಕ್ಕೆ ₹7 ಸಾವಿರ ಕೋಟಿಗೂ ಹೆಚ್ಚು ಅನುದಾನ ದೊರೆತಿದೆ ಎಂದರು.

ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ ಸಂಸ್ಥಾಪಕ ಮಧುಸೂದನ ಸಾಯಿ, ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.