ADVERTISEMENT

ನಿಗಮ ಮಂಡಳಿಗೆ ನೇಮಕ | ಕಾರ್ಯಕರ್ತರಿಗೆ ಅಧಿಕಾರ: ರಾಹುಲ್ ಗಾಂಧಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2023, 15:56 IST
Last Updated 20 ಡಿಸೆಂಬರ್ 2023, 15:56 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಕರ್ನಾಟಕದ ನಿಗಮ–ಮಂಡಳಿಗಳಿಗೆ ಅಧ್ಯಕ್ಷರುಗಳ ನೇಮಕ ಪ್ರಕ್ರಿಯೆ ಇನ್ನಷ್ಟು ತಡವಾಗುವ ಸಾಧ್ಯತೆ ಇದೆ. ನಿಗಮ–ಮಂಡಳಿಗಳಲ್ಲಿ ಶಾಸಕರ ಜತೆಗೆ ಕಾರ್ಯಕರ್ತರಿಗೂ ಮೊದಲ ಹಂತದಲ್ಲೇ ಅಧಿಕಾರ ನೀಡಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೂಚಿಸಿದ್ದಾರೆ.

ನಿಗಮ–ಮಂಡಳಿಗಳಿಗೆ ಅಧ್ಯಕ್ಷರ ಹೆಸರನ್ನು ಅಖೈರುಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹಲವು ಸುತ್ತಿನ ಸಮಾಲೋಚನೆ ನಡೆಸಿದ್ದರು. ಮೊದಲ ಹಂತದಲ್ಲಿ ಶಾಸಕರಿಗೆ ಅಧಿಕಾರ ನೀಡಬೇಕು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದರೆ, ಕಾರ್ಯಕರ್ತರಿಗೂ ಅವಕಾಶ ನೀಡಬೇಕು ಎಂದು ಶಿವಕುಮಾರ್ ಪಟ್ಟು ಹಿಡಿದಿದ್ದರು. ಮೊದಲ ಹಂತದಲ್ಲಿ 35 ನಿಗಮ–ಮಂಡಳಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನು ನೇಮಿಸಲು ಉಭಯ ನಾಯಕರು ಸಹಮತಕ್ಕೆ ಬಂದಿದ್ದರು. ಶಿವಕುಮಾರ್‌ ನಿವಾಸದಲ್ಲಿ ಮಂಗಳವಾರ ರಾತ್ರಿ ಇಬ್ಬರು ನಾಯಕರು ಸಭೆ ಸೇರಿ ಪಟ್ಟಿಗೆ ಅಂತಿಮ ರೂಪ ನೀಡಿದ್ದರು.

ರಾಹುಲ್‌ ಗಾಂಧಿ ಅವರನ್ನು ಬುಧವಾರ ಮಧ್ಯಾಹ್ನ ಭೇಟಿ ಮಾಡಿದ ಸಿದ್ದರಾಮಯ್ಯ, ರಾಜ್ಯದಿಂದ ಅಖೈರುಗೊಳಿಸಿರುವ ಪಟ್ಟಿಯನ್ನು ನೀಡಿದರು. ಮೊದಲ ಹಂತದಲ್ಲಿ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ಉದ್ದೇಶಿಸಿದ್ದನ್ನು ಪ್ರಸ್ತಾಪಿಸಿದರು. ಈ ಮಾತಿಗೆ ರಾಹುಲ್‌ ಒಪ್ಪಲಿಲ್ಲ. ‘ರಾಜ್ಯದಲ್ಲಿ ಪಕ್ಷ ಅಭೂತಪೂರ್ವ ಜಯ ಗಳಿಸಲು ಕಾರ್ಯಕರ್ತರ ಶ್ರಮವೂ ಕಾರಣ. ಶಾಸಕರ ಜತೆಗೆ ಕಾರ್ಯಕರ್ತರಿಗೂ ಅಧಿಕಾರ ನೀಡಬೇಕು. ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಉಳಿದಿವೆ. ಈ ಹಂತದಲ್ಲಿ ಕಾರ್ಯಕರ್ತರಿಗೆ ಅಧಿಕಾರ ನೀಡದಿದ್ದರೆ ತಪ್ಪು ಸಂದೇಶ ಹೋಗುತ್ತದೆ. ಹೀಗಾಗದಂತೆ ಎಚ್ಚರ ವಹಿಸಿ’ ಎಂದು ರಾಹುಲ್‌ ಕಿವಿಮಾತು ಹೇಳಿದರು ಎಂದು ಗೊತ್ತಾಗಿದೆ.

ADVERTISEMENT

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬುಧವಾರ ರಾತ್ರಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಸಿದ್ದರಾಮಯ್ಯ, ‘ನಾವು ಅಖೈರುಗೊಳಿಸಿದ ಪಟ್ಟಿಯನ್ನು ಪಕ್ಷದ ವರಿಷ್ಠರಿಗೆ ನೀಡಿದ್ದೇವೆ. ಪಟ್ಟಿಯನ್ನು ಇನ್ನೂ ನೋಡಿಲ್ಲ ಎಂದು ಖರ್ಗೆಯವರು ತಿಳಿಸಿದ್ದಾರೆ. ನೋಡಿ ತಿಳಿಸುವುವಾಗಿ ಭರವಸೆ ನೀಡಿದ್ದಾರೆ’ ಎಂದರು. ಶಿವಕುಮಾರ್ ಸಹ ‌ಧ್ವನಿಗೂಡಿಸಿದರು.

‘ಈ ಪಟ್ಟಿಗೆ ಒಂದೆರಡು ದಿನಗಳಲ್ಲಿ ವರಿಷ್ಠರ ಒಪ್ಪಿಗೆ ಸಿಕ್ಕರೂ ಸಿಗಬಹುದು. ಇಲ್ಲದಿದ್ದರೆ 15 ದಿನಗಳೂ ಆಗಬಹುದು’ ಎಂದು ರಾಜ್ಯದ ಉನ್ನತ ನಾಯಕರೊಬ್ಬರು ತಿಳಿಸಿದರು.

ನಮ್ಮ ಕೈಗೂ ಅಧಿಕಾರ ಕೊಡಿ: ಮುಖಂಡರು

‘ಪಕ್ಷ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಕಾರ್ಯಕರ್ತರ ಕೈಗೆ ಅಧಿಕಾರ ನೀಡುವುದಾಗಿ
ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದರು. ಪಕ್ಷ ಅಧಿಕಾರಕ್ಕೆ ಬಂದು ಏಳು ತಿಂಗಳುಗಳು ಕಳೆದಿವೆ. ಈಗ ನಿಗಮ–ಮಂಡಳಿಗಳಿಗೆ ಶಾಸಕರನ್ನು ನೇಮಕ ಮಾಡಲು ಹೊರಟಿದ್ದಾರೆ’. 

ಹೀಗೆಂದು ಅಸಮಾಧಾನ ವ್ಯಕ್ತಪಡಿಸಿದವರು ಬಳ್ಳಾರಿ, ಹಾಸನ ಹಾಗೂ ಮೈಸೂರು ಭಾಗದ ಕಾಂಗ್ರೆಸ್‌ ಮುಖಂಡರು. 

ನಿಗಮ–ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸಲು ನವದೆಹಲಿಗೆ ದೌಡಾಯಿಸಿರುವ ಈ ಮುಖಂಡರು ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಹಾಗೂ ಸಚಿವರ ಧೋರಣೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಕರ್ನಾಟಕ ಭವನದಲ್ಲಿ ಬುಧವಾರ ಸಂಜೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಕಾದು ಕುಳಿತಿದ್ದ ಈ ಮುಖಂಡರು, ‘ನಮ್ಮ ಹಿರಿಯ ನಾಯಕರೆಲ್ಲ ಅಧಿಕಾರದ ಸುಖ ಅನುಭವಿಸುತ್ತಿದ್ದಾರೆ. ನಾವು ಇನ್ನೂ ಬೀದಿಯಲ್ಲೇ ಇದ್ದೇವೆ. ನಮ್ಮ ಕೈಗೆ ಅಧಿಕಾರ ಕೊಡುವುದು ಯಾವಾಗ?’ ಎಂದರು. 

‘ವಿಧಾನಸಭಾ ಚುನಾವಣೆಗೆ ಒಂದೊಂದು ಕ್ಷೇತ್ರಕ್ಕೆ 10–15 ಆಕಾಂಕ್ಷಿಗಳು ಇದ್ದೆವು. ಕೆಪಿಸಿಸಿ ಸೂಚಿಸಿದಷ್ಟು ಹಣ ತುಂಬಿ ಅರ್ಜಿ ಸಲ್ಲಿಸಿದ್ದೆವು. ಪಕ್ಷದ ಭಾರತ್‌ ಜೋಡೊ ಭವನ ನಿರ್ಮಾಣಕ್ಕೆ ನೆರವು ನೀಡಿದ್ದೆವು. ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಕರೆದು ಶಿವಕುಮಾರ್ ಮಾತನಾಡಿಸಿದ್ದರು. ಅಧಿಕಾರಕ್ಕೆ ಬಂದ ಕೂಡಲೇ ನಿಮಗೆಲ್ಲ ಅಧಿಕಾರ ನೀಡುತ್ತೇವೆ ಎಂದು ಅಭಯ ನೀಡಿದ್ದರು. ಈಗ ನಮ್ಮ ಕಡೆಗೆ ಗಮನ ಹರಿಸುತ್ತಿಲ್ಲ’ ಎಂದು ಹಾಸನ ಭಾಗದ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. 

‘ನಮ್ಮ ಅಭ್ಯರ್ಥಿಗಳ ಗೆಲುವಿಗೆ ತನು ಮನ ಧನದ ಸಹಾಯ ಮಾಡಿದ್ದೇವೆ. ಈಗ ಅದನ್ನೆಲ್ಲ ಮರೆತು ಬಿಟ್ಟಿದ್ದಾರೆ. ಸಚಿವರು ಸಹ ನಮ್ಮ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ಕೆಲವು ಸಚಿವರನ್ನು ಭೇಟಿ ಮಾಡುವುದೇ ಅಸಾಧ್ಯ ಎಂಬ ಪರಿಸ್ಥಿತಿ ಇದೆ. ಲೋಕಸಭಾ ಚುನಾವಣೆಗೆ ಮುನ್ನ ನಮ್ಮ ಕೈಗೆ ಅಧಿಕಾರ ಕೊಡಬೇಕು’ ಎಂದು ಮತ್ತೊಬ್ಬ ಮುಖಂಡರು ಆಗ್ರಹಿಸಿದರು. 

‘ನಿಗಮ–ಮಂಡಳಿಗಳಿಗೆ ಶಾಸಕರನ್ನು ನೇಮಕ ಮಾಡುವುದು ಬೇಡ ಎಂದೇನೂ ನಾವು ಹೇಳುತ್ತಿಲ್ಲ. 100ಕ್ಕೂ ಅಧಿಕ ನಿಗಮ ಮಂಡಳಿಗಳಿವೆ. ಅದರಲ್ಲಿ 40 ನಿಗಮ ಮಂಡಳಿಗಳಿಗೆ ಶಾಸಕರ ನೇಮಕ ಮಾಡಲಿ. ಉಳಿದ ಮಂಡಳಿಗಳಿಗೆ ನಮ್ಮನ್ನು ಪರಿಗಣಿಸಲಿ. ಎರಡು ವರ್ಷಗಳ ಬಳಿಕ ಮತ್ತಷ್ಟು ಮಂದಿಗೆ ಅಧಿಕಾರ ಕೊಡಲಿ’ ಎಂದು ಮೈಸೂರಿನ ಮುಖಂಡರೊಬ್ಬರು ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.