ADVERTISEMENT

2019ರಲ್ಲಿ ಮೋದಿ ಉಪನಾಮದ ಬಗ್ಗೆ ರಾಹುಲ್ ನೀಡಿದ ಹೇಳಿಕೆ ಏನು? ಇಲ್ಲಿದೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 12:38 IST
Last Updated 24 ಮಾರ್ಚ್ 2023, 12:38 IST
   

ಬೆಂಗಳೂರು: ಮೋದಿ ಉಪನಾಮವನ್ನು ವ್ಯಂಗ್ಯ ಮಾಡಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಸೂರತ್‌ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರ ಬೆನ್ನಲ್ಲೇ ಶುಕ್ರವಾರ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶ ಅಧಿಸೂಚನೆ ಹೊರಡಿಸಲಾಗಿದೆ. ಹಾಗಾದರೆ, ರಾಹುಲ್ ನೀಡಿದ ಹೇಳಿಕೆಯಲ್ಲಿ ಏನಿತ್ತು.. ಇಲ್ಲಿದೆ ಮಾಹಿತಿ..

2019ರ ಲೋಕಸಭಾ ಚುನಾವಣೆ ವೇಳೆ ಕೋಲಾರದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಪರ ಪ್ರಚಾರದ ವೇಳೆ ಮಾತನಾಡಿದ್ದ ಅವರು, ‘ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸಾಮ್ರಾಜ್ಯ ಸೃಷ್ಟಿಸುತ್ತಿದ್ದಾರೆ. ಚೌಕೀದಾರ್‌ (ಕಾವಲುಗಾರ) ಎಂದು ಹೇಳಿಕೊಳ್ಳುವ ಅವರು ದೇಶದ ಸಂಪತ್ತು ಲೂಟಿ ಮಾಡಿದ್ದಾರೆ’ ಎಂದು ರಾಹುಲ್‌ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದರು.

‘ಮೋದಿ ಬಡ ಜನರ ಕಿಸೆಯಿಂದ ಹಣ ಕದ್ದು ನೀರವ್‌ ಮೋದಿ, ಮಲ್ಯ, ಲಲಿತ್‌ ಮೋದಿಯಂತಹ ಕಳ್ಳರಿಗೆ ಕೊಟ್ಟು ವಿದೇಶಕ್ಕೆ ಕಳುಹಿಸಿದ್ದಾರೆ. ಈ ಕಳ್ಳರ ಗುಂಪಿಗೆ ಮೋದಿಯೇ ನಾಯಕ’ ಎಂದು ವ್ಯಂಗ್ಯವಾಡಿದ್ದರು.

ADVERTISEMENT

‘ಮೋದಿ 5 ವರ್ಷದಲ್ಲಿ ಏನು ಸಾಧನೆ ಮಾಡಿದ್ದಾರೆ ಎಂಬ ಬಗ್ಗೆ ಮಾತನಾಡುವುದಿಲ್ಲ. ದೇಶದ ಅಭಿವೃದ್ಧಿ, ನಿರುದ್ಯೋಗ ಸಮಸ್ಯೆ, ರೈತರ ಸಂಕಷ್ಟದ ಬಗ್ಗೆ ತುಟಿ ಬಿಚ್ಚುವುದಿಲ್ಲ. ಬಿಜೆಪಿಯ ಪ್ರಣಾಳಿಕೆಯಲ್ಲೂ ಈ ವಿಚಾರಗಳ ಪ್ರಸ್ತಾಪವಿಲ್ಲ. ದೇಶದ ಕಾವಲುಗಾರ ಎಂದು ಹೇಳಿಕೊಳ್ಳುವ ಮೋದಿ ನೂರಕ್ಕೆ ನೂರರಷ್ಟು ಕಳ್ಳ’ಎಂದು ಕುಟುಕಿದ್ದರು.

‘ಅನಿಲ್‌ ಅಂಬಾನಿಯನ್ನು ಬಾಚಿ ತಬ್ಬಿಕೊಳ್ಳುವ ಮೋದಿ ರೈತರನ್ನು ಆಲಂಗಿಸಿಕೊಳ್ಳುವುದಿಲ್ಲ. ವಂಚಕರಾದ ನೀರವ್‌ ಮೋದಿ, ಲಲಿತ್‌ ಮೋದಿ, ಮೆಹುಲ್ ಚೋಕ್ಸಿ ಜತೆ ಫೋಟೊ ತೆಗೆಸಿಕೊಳ್ಳುವ ಮೋದಿ ರೈತರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ವಂಚಕರ ಹೆಸರೆಲ್ಲಾ ಮೋದಿ ಎಂದೇ ಅಂತ್ಯಗೊಳ್ಳುತ್ತದೆ. ರಫೇಲ್‌ ಹಗರಣ ಬಯಲಾದ ನಂತರ ಚೌಕೀದಾರ ಮೋದಿಯ ಮುಖಚರ್ಯೆಯೇ ಬದಲಾಯಿತು’ ಎಂದೂ ಟೀಕಿಸಿದ್ದರು.

ದೇಶಭಕ್ತರೇ ಅಲ್ಲ: ‘ಈ ಚುನಾವಣೆಯಲ್ಲಿ 2 ಪ್ರಮುಖ ವಿಚಾರಗಳಿವೆ. ಮೋದಿ ದೇಶ ಛಿದ್ರಗೊಳಿಸುವ ವಿಚಾರ ಮುಂದಿರಿಸಿದ್ದಾರೆ. ಕಾಂಗ್ರೆಸ್ ಎಲ್ಲರನ್ನೂ ಜತೆಯಲ್ಲಿ ಕರೆದೊಯ್ಯುವ ವಿಚಾರಾಧಾರೆ ಮುಂದಿಟ್ಟಿದೆ. ಬಿಜೆಪಿಯುವರು ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ. ಆದರೆ, ದೇಶಭಕ್ತರು ಕಳ್ಳತನ ಮಾಡುವುದಿಲ್ಲ. ಕಳ್ಳತನ ಮಾಡುವವರು ದೇಶಭಕ್ತರೇ ಅಲ್ಲ’ ಎಂದು ತಿರುಗೇಟು ನೀಡಿದ್ದರು.

ಸರಕು ಮತ್ತು ಸೇವಾ ತೆರಿಗೆ ಪದ್ಧತಿಯನ್ನು (ಜಿಎಸ್‌ಟಿ) ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ ಎಂದು ಜರಿದಿದ್ದ ರಾಹುಲ್‌ ಗಾಂಧಿ. ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ರದ್ದುಗೊಳಿಸಿ ದೇಶದಲ್ಲಿ ಸರಳ ತೆರಿಗೆ ವ್ಯವಸ್ಥೆ ಜಾರಿಗೊಳಿಸುತ್ತದೆ. ರೈತರು ಕೃಷಿ ಸಾಲ ತೀರಿಸಲಾಗದೆ ಜೈಲಿಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣ ಮಾಡುತ್ತೇವೆ. ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸುತ್ತೇವೆ’ ಎಂದು ಭರವಸೆ ನೀಡಿದ್ದರು.

ಇವನ್ನೂ ಓದಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.