ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ಟ್ರಸ್ಟಿಗಳಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಬೆಂಗಳೂರನಲ್ಲಿ ತಮಗೆ ಮಂಜೂರು ಮಾಡಿದ್ದ ಐದು ಎಕರೆ ಸಿಎ ನಿವೇಶನವನ್ನು ವಾಪಸ್ ಪಡೆದುಕೊಳ್ಳುವಂತೆ ಮಂಡಳಿಗೆ ಪತ್ರ ಬರೆದಿದೆ.
ಟ್ರಸ್ಟ್‌ನ ಸಿಇಒ ರಾಹುಲ್ ಎಂ. ಖರ್ಗೆ ಅವರು ಈ ಸಂಬಂಧ ಮಂಡಳಿಗೆ ಪತ್ರ ಬರೆದಿದ್ದು, ‘ನಿವೇಶನ ನೀಡುವಂತೆ ನಾವು ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದುಕೊಳ್ಳುತ್ತೇವೆ. ಈ ನಿವೇಶನವನ್ನು ನಮಗೆ ಹಂಚಿಕೆ ಮಾಡಲಾಗಿದೆ ಅಷ್ಟೆ. ಒಪ್ಪಂದದಂತೆ ಬೋಗ್ಯಪತ್ರ ನೀಡಿಲ್ಲ. ಹೀಗಾಗಿ ಪ್ರಕ್ರಿಯೆಯನ್ನು ರದ್ದುಪಡಿಸಿ’ ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
‘ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ತರಬೇತಿ ನೀಡಲು ನಿವೇಶನ ಕೇಳಲಾಗಿತ್ತು. ಆದರೆ ಅನಗತ್ಯ ವಿವಾದ, ಇಲ್ಲ ಸಲ್ಲದ ಆರೋಪಗಳಿಂದಾಗಿ ಮೂಲ ಉದ್ದೇಶಕ್ಕೆ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಿವೇಶನ ವಾಪಸ್ ಮಾಡುತ್ತಿದ್ದೇವೆ. ವಾಪಸಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಏನು ಮಾಡಬೇಕು ಎಂಬುದನ್ನು ತಿಳಿಸಿ’ ಎಂದು ಪತ್ರದಲ್ಲಿ ಕೋರಿದ್ದಾರೆ.
‘ಟ್ರಸ್ಟ್‌ಗೆ ನಿವೇಶ ನೀಡುವುದರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಅಧಿಕಾರ ಬಳಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಕೋರಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಈ ಬಗ್ಗೆ ವಿವರಣೆ ನೀಡಿ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.