ಬೆಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಅಮೆರಿಕದಲ್ಲಿ ಭಾರತದ ವಿರುದ್ಧ ಮಾತನಾಡಿದ್ದು, ಇದನ್ನು ದೇಶ ಗಂಭೀರವಾಗಿ ಪರಿಗಣಿಸುತ್ತಿದೆ. ರಾಹುಲ್ ಗಾಂಧಿಯವರ ಮಾತುಗಳು ಸುಳ್ಳಿನಿಂದ ಕೂಡಿರುವುದಷ್ಟೇ ಅಲ್ಲದೆ, ಭಾರತವನ್ನು ವಿರೋಧಿಸುವ ಶಕ್ತಿಗಳಿಗೆ ಹೊಸ ಜೀವ ನೀಡಿ ಹೊಸ ಶಕ್ತಿ ಕೊಟ್ಟಂತೆ ಕಾಣಿಸುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿಸೂರ್ಯ ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ವ್ಯಕ್ತಿಗಳ ಹಿನ್ನೆಲೆಯನ್ನು ಗಮನಿಸಿದರೆ, ಯಾರು ಭಾರತದ ವಿರೋಧಿಗಳಿದ್ದಾರೋ ಅವರ ಜೊತೆ ರಾಹುಲ್ ಗಾಂಧಿಯವರು ಸ್ನೇಹಿತರಾಗಿರುವುದು ಸ್ಪಷ್ಟಗೊಳ್ಳುತ್ತದೆ ಎಂದು ತಿಳಿಸಿದರು.
ದೇಶದ ಒಳಗಡೆ ರಾಹುಲ್ ಗಾಂಧಿಯವರು, ಬಿಜೆಪಿ ಮೀಸಲಾತಿಯನ್ನು ರದ್ದು ಮಾಡುತ್ತದೆ; ಜಾತಿ ಆಧಾರದ ಗಣತಿ ಮಾಡಿ, ಒಬಿಸಿ, ಎಸ್‍ಸಿ, ಎಸ್‍ಟಿಗಳಿಗೆ ಅನ್ಯಾಯ ಆಗುತ್ತಿದೆ ಎಂದು ಭಾಷಣ ಮಾಡುತ್ತಾರೆ. ಆದರೆ, ವಿದೇಶದಲ್ಲಿ ಹೋದ ತಕ್ಷಣವೇ ಇಂಗ್ಲಿಷ್‍ನಲ್ಲಿ ಮಾತನಾಡುವುದರಿಂದ ಇಲ್ಲಿನವರು ಕೇಳಿಸಿಕೊಳ್ಳಲಾರರು ಅಂದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಕ್ಕಿದಾಗ ಮೀಸಲಾತಿ ರದ್ದು ಮಾಡುವುದಾಗಿ ಭಾಷಣ ಮಾಡುತ್ತಾರೆ ಎಂದು ವಿವರಿಸಿದರು.
ನಿರಂತರವಾಗಿ ಮೀಸಲಾತಿ ವಿರೋಧಿಸಿದ್ದ ಕಾಂಗ್ರೆಸ್ ಮುಖಂಡರು:
ಈ ಆಷಾಡಭೂತಿತನ (ಹಿಪೋಕ್ರಸಿ) ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಾರ್ಟಿಯ ರಾಜಕೀಯವನ್ನು ಜನರಿಗೆ ತೋರಿಸುತ್ತಿದೆ. ರಾಹುಲ್ ಗಾಂಧಿಯವರು ಮೀಸಲಾತಿ ರದ್ದು ಮಾಡುವುದಾಗಿ ಅಮೆರಿಕದಲ್ಲಿ ಭಾಷಣ ಮಾಡಿದ್ದು ನನಗಂತೂ ಆಶ್ಚರ್ಯಕ್ಕೆ ಕಾರಣವಾಗಿಲ್ಲ. ರಾಹುಲ್ ಗಾಂಧಿಯ ಕಾಂಗ್ರೆಸ್ ಪಾರ್ಟಿ ತನ್ನ ಇತಿಹಾಸದಲ್ಲಿ ನೆಹರೂ ಅವರಿಂದ ಪ್ರಾರಂಭಿಸಿ ರಾಜೀವ್ ಗಾಂಧಿ ವರೆಗೆ ಮೀಸಲಾತಿಯನ್ನು ವಿರೋಧಿಸಿತ್ತು ಎಂದು ತೇಜಸ್ವಿಸೂರ್ಯ ಅವರು ಗಮನ ಸೆಳೆದರು.
ಮೀಸಲಾತಿ ಶುರು ಮಾಡಬೇಕೆಂಬ ಸಂದರ್ಭದಲ್ಲಿ ನೆಹರೂ ಅವರು ದೇಶದ ಎಲ್ಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಇದರಿಂದ ದೇಶಕ್ಕೆ ಲುಕ್ಸಾನು (ನಷ್ಟ) ಆಗಲಿದೆ ಎಂದು ತಿಳಿಸಿದ್ದರು. ಒಬಿಸಿಗಳಿಗೆ ಮೀಸಲಾತಿ ಕೊಡಲು ಕಾಕಾ ಕಾಲೇಕರ್ ಸಮಿತಿ ರಚಿಸಿ, 1956ರಲ್ಲೇ ವರದಿ ನೀಡಿದ್ದರು. ಆ ವರದಿಯನ್ನು ಕಸದ ಬುಟ್ಟಿಯಲ್ಲಿಟ್ಟಿದ್ದರು. ಒಬಿಸಿಗಳಿಗೆ ವಿ.ಪಿ.ಸಿಂಗ್ ಅವರು ಅಧಿಕಾರಕ್ಕೆ ಬಂದು ಮಂಡಲ್ ಮೀಸಲಾತಿ ಕೊಡುವವರೆಗೆ ಕೂಡ ಶೀತಲೀಕೃತ ಘಟಕದಲ್ಲಿ (ಕೋಲ್ಡ್ ಸ್ಟೋರೇಜ್) ಇಟ್ಟದ್ದು ಕಾಂಗ್ರೆಸ್ ಪಕ್ಷ ಎಂದು ಟೀಕಿಸಿದರು. ವಿ.ಪಿ.ಸಿಂಗ್ ಅವರ ಸರಕಾರ ಅಧಿಕಾರಕ್ಕೆ ಬಂದು ಮಂಡಲ್ ಆಯೋಗದ ಶಿಫಾರಸು ಜಾರಿಗೊಳಿಸಲು ಮುಂದಾದಾಗ ಕೂಡ ರಾಜೀವ್ ಗಾಂಧಿಯವರು ಆಗಿನ ವಿಪಕ್ಷ ನಾಯಕರಾಗಿ, ಕಾಂಗ್ರೆಸ್ ಪಾರ್ಟಿ ಅಧಿಕೃತ ಮುಖಂಡರಾಗಿ ಗರಿಷ್ಠ ವಿರೋಧ ಮಾಡಿದ್ದರು ಎಂದರು.
ರಾಹುಲ್ ಗಾಂಧಿಯವರ ತಂದೆ ರಾಜೀವ್ ಗಾಂಧಿ ಮಂಡಲ್ ಕಮಿಷನ್ ಶಿಫಾರಸು ವಿರೋಧಿಸಿ ಅತ್ಯಂತ ದೊಡ್ಡ ಭಾಷಣ ಮಾಡಿದ್ದರು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.