ಬೆಂಗಳೂರು: ವಿಶ್ವವಿದ್ಯಾಲಯಗಳ ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ‘ವಿಷಯವಾರು ಮೀಸಲಾತಿ’ ಅನ್ವಯ ಮಾಡಬಾರದು ಎಂದು ಕೇಂದ್ರ ಸರ್ಕಾರ 2019ರಲ್ಲಿ ಆದೇಶಿಸಿ ಐದು ವರ್ಷಗಳಾಗುತ್ತಿದೆ. ಆದರೆ ರಾಜ್ಯ ಸರ್ಕಾರವು ತಾಂತ್ರಿಕ ಕಾರಣ ಮುಂದೊಡ್ಡಿ, ಇದನ್ನು ಪಾಲಿಸುತ್ತಿಲ್ಲ. ಇದರಿಂದಾಗಿ ವಿಶ್ವವಿದ್ಯಾಲಯಗಳ ನೇಮಕಾತಿಯಲ್ಲಿ ಹಲವು ಸಮುದಾಯಗಳು ಮೀಸಲಾತಿ ವಂಚಿತವಾಗುತ್ತಿವೆ.
ರಾಯಚೂರು ವಿಶ್ವವಿದ್ಯಾಲಯವು 24 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದ್ದು, ಇಲ್ಲಿ ‘ವಿಷಯವಾರು ಮೀಸಲಾತಿ’ ಅನ್ವಯ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆಯು ರೋಸ್ಟರ್ ಸಿದ್ದಪಡಿಸಿಕೊಟ್ಟಿದೆ. ಇದರಿಂದಾಗಿ ಪರಿಶಿಷ್ಟ ಪಂಗಡ ಮತ್ತು ಒಬಿಸಿ ಸಮುದಾಯಗಳಿಗೆ ಮೀಸಲಾತಿ ಸಿಕ್ಕಿಲ್ಲ.
ಇದನ್ನು ಆಕ್ಷೇಪಿಸಿ ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ, ‘ವಿಷಯವಾರು ಮೀಸಲಾತಿ ಅನ್ವಯ ಮಾಡಿದರೆ, ಮೀಸಲಾತಿ ಸಿಗದೇ ಹೋಗುತ್ತದೆ ಅಥವಾ ಒಂದು ಸಮುದಾಯಕ್ಕಷ್ಟೇ ಮೀಸಲಾತಿ ದೊರೆತಂತಾಗುತ್ತದೆ. ಇತರ ಅರ್ಹ ಸಮುದಾಯಗಳಿಗೆ ಅನ್ಯಾಯವಾಗುತ್ತದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದರು.
ಆದರೂ ಇಲಾಖೆಯು ‘ವಿಷಯವಾರು ಮೀಸಲಾತಿ’ ಅನ್ವಯ ಮಾಡಿ, ರೋಸ್ಟರ್ ಅನ್ನು ಅಂತಿಮಗೊಳಿಸಿತು. ಪರಿಣಾಮವಾಗಿ 24 ಹುದ್ದೆಗಳಲ್ಲಿ 15 ಹುದ್ದೆಗಳು (ಶೇ 62ರಷ್ಟು) ಸಾಮಾನ್ಯ ವರ್ಗಕ್ಕೇ ಹೋಗಿದ್ದು, ಪರಿಶಿಷ್ಟ ಜಾತಿಗಳಿಗೆ 9 ಹುದ್ದೆಗಳು (ಶೇ 37ರಷ್ಟು) ಸಿಕ್ಕಿವೆ. ಹೀಗಾಗಿ ಈ ನೇಮಕಾತಿಯಲ್ಲಿ ಪರಿಶಿಷ್ಟ ಪಂಗಡಗಳಿಗೆ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಯಾವುದೇ ಹುದ್ದೆ ಉಳಿದಿಲ್ಲ. ಮಹಿಳಾ ಮೀಸಲಾತಿಯೂ ದೊರೆತಿಲ್ಲ.
ವಿಷಯವಾರು ಬದಲಿಗೆ ಎಲ್ಲ ಹುದ್ದೆಗಳಿಗೆ ಮೀಸಲಾತಿ ಅನ್ವಯ ಮಾಡಿದ್ದರೆ, ಸಾಮಾನ್ಯ ವರ್ಗಕ್ಕೆ 12 ಹುದ್ದೆಗಳು ಮಾತ್ರ ದೊರೆಯುತ್ತಿತ್ತು. ಪರಿಶಿಷ್ಟ ಜಾತಿಗಳಿಗೆ 4, ಪರಿಶಿಷ್ಟ ಪಂಗಡಗಳಿಗೆ 2 ಮತ್ತು ಇತರೆ ಹಿಂದುಳಿದ ವರ್ಗಗಳಿಗೆ 6 ಹುದ್ದೆಗಳು ದೊರೆಯುತ್ತಿತ್ತು.
ಇದನ್ನು ಸರಿಪಡಿಸುವಂತೆ ಅಭ್ಯರ್ಥಿಗಳು ಹಲವು ಬಾರಿ ವಿಶ್ವವಿದ್ಯಾಲಯದ ಕುಲಪತಿ ಮತ್ತು ಕುಲಸಚಿವರಿಗೆ ಪತ್ರ ಬರೆದಿದ್ದಾರೆ. ಆದರೆ ಮೀಸಲಾತಿ ರೋಸ್ಟರ್‌ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಿಲಿಲ್ಲ. ವಾಟ್ಸ್‌ಆ್ಯಪ್ ಸಂದೇಶಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಇಲಾಖೆ ಸಚಿವರಿಂದಲೂ ಪ್ರತಿಕ್ರಿಯೆ ದೊರೆತಿಲ್ಲ.
ಎಸ್‌ಟಿ ಮತ್ತು ಒಬಿಸಿ ಮೀಸಲಾತಿ ನೀಡದೇ ಇರುವುದರಿಂದ ಈ ಸಮುದಾಯಗಳ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಅಭ್ಯರ್ಥಿಗಳ ಜತೆ ಸ್ಪರ್ಧಿಸುವಂತಾಗಿದೆಶಿವಪ್ರಸಾದ್ ಕೆ.ಎನ್. ಅಭ್ಯರ್ಥಿ
ಮಹಿಳಾ ಮೀಸಲಾತಿಯನ್ನೂ ನೀಡದೇ ಇರುವ ಕಾರಣಕ್ಕೆ ನನ್ನ ಹಲವು ವಿದ್ಯಾರ್ಥಿನಿಯರು ಎಲ್ಲರೊಂದಿಗೆ ಸ್ಪರ್ಧಿಸಬೇಕಾದ ಅನಿವಾರ್ಯ ಎದುರಾಗಿದೆರಾಜಣ್ಣ ಎಂ. ಸಹಾಯಕ ಪ್ರಾಧ್ಯಾಪಕ ನ್ಯಾಷನಲ್ ಕಾಲೇಜು ಬೆಂಗಳೂರು
ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದರೂ ಪ್ರಯೋಜನ ಆಗಿಲ್ಲ. ನಿಯಮಗಳ ಅನ್ವಯವೇ ರೋಸ್ಟರ್ ಮಾಡಿದ್ದೇನೆ ಬದಲಾವಣೆ ಸಾಧ್ಯವಿಲ್ಲ ಎನ್ನುತ್ತಾರೆಪ್ರೊ.ಎಂ.ವಿಶ್ವನಾಥ್ ನಿಕಟಪೂರ್ವ ಕುಲಸಚಿವ ರಾಯಚೂರು ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.