ರಾಯಚೂರು: ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನದಳ ವಿಭಾಗದಲ್ಲಿ 13 ವರ್ಷ ಆರು ತಿಂಗಳು ಕಾರ್ಯನಿರ್ವಹಿಸಿರುವ ‘ರೂಬಿ’ ಶ್ವಾನವು ಶುಕ್ರವಾರ ಮೃತಪಟ್ಟಿತು.
ರೂಬಿಯ ಸ್ವಾಮಿನಿಷ್ಠೆ, ಕರ್ತವ್ಯಪ್ರಜ್ಞೆ ಹಾಗೂ ಆರೋಪಿಗಳನ್ನು ಪತ್ತೆ ಮಾಡಿದ ಅದರ ಸಾಧನೆಯನ್ನು ನೆನೆದು ಪೊಲೀಸರು ಕಂಬಣಿ ಮಿಡಿದರು. ಸಕಲ ಗೌರವದೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
2016 ರ ಜುಲೈ 3 ರಂದು ಶ್ವಾನದಳ ವಿಭಾಗಕ್ಕೆ ತನಿಖೆಗಾಗಿ ನಿಯುಕ್ತಿ ಪಡೆದಿದ್ದ ರೂಬಿಗೆ, ಬೆಂಗಳೂರಿನ ಆಡುಗೊಡೆಯಲ್ಲಿ ಒಂಭತ್ತು ತಿಂಗಳು ತರಬೇತಿ ನೀಡಲಾಗಿತ್ತು. ಆನಂತರ ಅಪರಾಧಗಳ ತನಿಖೆಯನ್ನು ರೂಬಿ ನಿಷ್ಠೆಯಿಂದ ಮಾಡಿಕೊಂಡು ಬಂದಿದೆ. ಇಲ್ಲಿಯವರೆಗೂ ಒಟ್ಟು 246 ಅಪರಾಧ ಪ್ರಕರಣಗಳನ್ನು ತನಿಖೆ ಮಾಡಿದ್ದು, ಅದರಲ್ಲಿ 18 ಪ್ರಕರಣಗಳಲ್ಲಿ ಅಪರಾಧ ಪತ್ತೆ ಹಚ್ಚಿ ಪೊಲೀಸ್ ಇಲಾಖೆಯ ಗೌರವವನ್ನು ಹೆಚ್ಚಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದರು.
ಮಾನ್ವಿ ತಾಲ್ಲೂಕಿನ ಜಾನೇಕಲ್ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ವಿರೂಪಗೊಳಿಸಿದ್ದ ಕಿಡಿಗೇಡಿಗಳನ್ನು ರೂಬಿ ಪತ್ತೆ ಮಾಡಿತ್ತು. ಶಕ್ತಿನಗರದ ಆರ್‌ಟಿಪಿಎಸ್ ಎದುರು ಎಂಜಿನಿಯರ್ ಒಬ್ಬರ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿತ್ತು ಎಂದು ಅದರ ಸಾಧನೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.