ಬೆಂಗಳೂರು: ಡ್ರಗ್ಸ್ ಮಾರಾಟ ಜಾಲದಲ್ಲಿ ಭಾಗಿಯಾದ ಆರೋಪದಡಿ ಬಂಧಿಸಲಾಗಿರುವ ನಟಿ ಸಂಜನಾ ಗಲ್ರಾನಿ ಆಪ್ತ ಎನ್ನಲಾದ ಶೇಖ್ ಫೈಜಲ್ ಎಂಬಾತನ ಮನೆ ಮೇಲೆ ಸಿಸಿಬಿ ಪೊಲೀಸರು ಬುಧವಾರ ದಾಳಿ ಮಾಡಿದರು.
ಜಯನಗರದಲ್ಲಿರುವ ಮನೆಗೆ ಹೋಗಿದ್ದ ಪೊಲೀಸರು, ಗಂಟೆಗಟ್ಟಲೇ ಪರಿಶೀಲನೆ ನಡೆಸಿದರು. ಫೈಜಲ್ ಮನೆಯಲ್ಲಿ ಇರಲಿಲ್ಲ. ಸಹೋದರ ಹಾಗೂ ಪತ್ನಿ–ಮಕ್ಕಳು ಮಾತ್ರ ಇದ್ದರು.
ಶೋಧ ಮುಗಿಸಿದ ಪೊಲೀಸರು, ಫೈಜಲ್ ಸಹೋದರನನ್ನು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆತಂದಿದ್ದರು. ಫೈಜಲ್ ಬಗ್ಗೆ ಮಾಹಿತಿ ಸಂಗ್ರಹಿಸಿ ವಾಪಸು ಕಳುಹಿಸಿದರು. ಸಂಜೆ ಸಂಬಂಧಿಕರನ್ನೂ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡರು.
‘ಪ್ರಕರಣದಲ್ಲಿ ಬಂಧಿಸಲಾಗಿರುವ ಕೇರಳದ ರೂಪದರ್ಶಿ ನಿಯಾಜ್ ಹಾಗೂ ಸಂಜನಾ ಜೊತೆಯಲ್ಲಿ ಫೈಜಲ್ ಒಡನಾಟವಿಟ್ಟುಕೊಂಡಿದ್ದ. ಆತ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ವಿಶೇಷ ತಂಡಗಳು ಹುಡುಕಾಟ ನಡೆಸಿವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಸುಲಿಗೆ ಮಾಡಿ ಪರಾರಿಯಾಗಿದ್ದ; ಗಾಂಜಾದಿಂದ ಸಿಕ್ಕಿಬಿದ್ದ
ಬೆಂಗಳೂರು: ಬೈಕ್ ಕದ್ದು ಸುಲಿಗೆ ಮಾಡಿ ಪರಾರಿಯಾಗಿದ್ದ ಆರೋಪಿಯೊಬ್ಬ ಗಾಂಜಾ ಮಾರಾಟ ಮಾಡಲು ಬಂದು ಚಂದ್ರಾ ಲೇಔಟ್ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಪಲ್ಸರ್ ಬೈಕ್‌ನಲ್ಲಿ ಸುತ್ತಾಡಿ ಗಾಂಜಾ ಮಾರುತ್ತಿದ್ದ ಆರೋಪದಡಿ ಗಂಗೊಂಡನಹಳ್ಳಿಯ ಮೊಯಿನುದ್ದೀನ್ ಪಾಷಾ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನಿಂದ 310 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ. ಅಪರಾಧ ಹಿನ್ನೆಲೆಯುಳ್ಳ ಮೊಯಿನುದ್ದೀನ್ ಹಾಗೂ ಆತನ ಸ್ನೇಹಿತ ಷಹನಾಜ್, 15 ದಿನಗಳ ಹಿಂದೆ ರಾಮನಗರದಲ್ಲಿ ಬೈಕ್ ಕದ್ದಿದ್ದರು.
ಖನ್ನಾ ವಿರುದ್ಧ ಮತ್ತೊಂದು ಎಫ್‌ಐಆರ್
ಪ್ರಕರಣದ ಆರೋಪಿ ದೆಹಲಿಯ ವಿರೇನ್ ಖನ್ನಾ ಮನೆಯಲ್ಲಿ ಪೊಲೀಸ್ ಸಮವಸ್ತ್ರ ಪತ್ತೆಯಾದ ಸಂಬಂಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಂತಿನಗರದಲ್ಲಿರುವ ಮನೆ ಮೇಲೆ ಮಂಗಳವಾರ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದ ವೇಳೆಯಲ್ಲಿ ಗಾಂಜಾ, ಪೊಲೀಸ್ ಸಮವಸ್ತ್ರ, ಬೆಲ್ಟ್, ಬ್ಯಾಡ್ಜ್ ಸೇರಿದಂತೆ ಹಲವು ವಸ್ತುಗಳು ಸಿಕ್ಕಿದ್ದವು.
’ಪೊಲೀಸ್ ಸಮವಸ್ತ್ರ ಧರಿಸುತ್ತಿದ್ದ ಖನ್ನಾ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದ. ಇದು ಅಪರಾಧವಾಗಿದ್ದು, ಆತನ ವಿರುದ್ಧ ಕ್ರಮ ಜರುಗಿಸುವಂತೆ ಸಿಸಿಬಿ ಅಧಿಕಾರಿ ದೂರು ನೀಡಿದ್ದಾರೆ. ಅದರನ್ವಯ ಖನ್ನಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಅಶೋಕನಗರ ಪೊಲೀಸರು ಹೇಳಿದರು.
ಕೊರಿಯರ್ ಪೊಟ್ಟಣದಲ್ಲಿ₹ 1 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ
ಬೆಂಗಳೂರು: ಬೆಲ್ಜಿಯಂನಿಂದ ನಗರಕ್ಕೆ ವಿಮಾನದಲ್ಲಿ ಬಂದಿದ್ದ ಕೊರಿಯರ್ ಪೊಟ್ಟಣದಲ್ಲಿ ₹ 1 ಕೋಟಿ ಮೌಲ್ಯದ ಮಾದಕ ವಸ್ತು (ಡ್ರಗ್ಸ್) ಪತ್ತೆಯಾಗಿದ್ದು. ಅದನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
‘ಕೊರಿಯರ್ ಪೊಟ್ಟಣದಲ್ಲಿ ಎಲೆಕ್ಟ್ರಾನಿಕ್ ವಸ್ತು ಇತ್ತು. ಪೊಟ್ಟಣವನ್ನು ಪೂರ್ತಿ ಬಿಚ್ಚಿ ನೋಡಿದಾಗ 1,980 ಎಂಡಿಎಂಎ ಮಾತ್ರೆಗಳು ಸಿಕ್ಕಿವೆ. ಇದರ ಮಾರುಕಟ್ಟೆ ಮೌಲ್ಯ ₹1 ಕೋಟಿ’ ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ಹೇಳಿದರು.
‘ಬೆಲ್ಜಿಯಂನಿಂದ ಭಾರತಕ್ಕೆ ಕಳ್ಳಸಾಗಣೆ ಮೂಲಕ ಮಾದಕ ವಸ್ತು ಬಂದಿದೆ. ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ಬಳಿ ಇರುವ ಅಂತರ ರಾಷ್ಟ್ರೀಯ ಕೋರಿಯರ್ ಕೇಂದ್ರದಲ್ಲಿ ಶೋಧ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ.’‘ಅಂತರರಾಷ್ಟ್ರೀಯ ಮಾದಕ ವಸ್ತು ಪೆಡ್ಲರ್‌ಗಳು, ಭಾರತದಲ್ಲಿರುವ ಉಪ ಪೆಡ್ಲರ್‌ಗಳಿಗೆ ಮಾತ್ರೆ ಕಳುಹಿಸುತ್ತಿದ್ದರೆಂಬ ಮಾಹಿತಿ ಇದೆ. ಪೊಟ್ಟಣದ ಮೇಲಿರುವ ವಿಳಾಸವನ್ನು ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.