ADVERTISEMENT

ಹಂಪಿ ಎಕ್ಸ್‌ಪ್ರೆಸ್ ಮಾರ್ಗ ಬದಲಾವಣೆಯ ಮಾಹಿತಿ ನೀಡಲಾಗಿತ್ತು: ರೈಲ್ವೆ ಇಲಾಖೆ

​ಪ್ರಜಾವಾಣಿ ವಾರ್ತೆ
Published 5 ಮೇ 2019, 13:00 IST
Last Updated 5 ಮೇ 2019, 13:00 IST
   

ಬೆಂಗಳೂರು: ‘ಹಂಪಿ ಎಕ್ಸ್‌ಪ್ರೆಸ್ ಮಾರ್ಗ ಬದಲಾವಣೆಯಿಂದಾಗಿ ಬೆಂಗಳೂರು ತಲುಪುವುದು ವಿಳಂಬವಾಗಿದೆ. ಈ ಬಗ್ಗೆ ಪ್ರಯಾಣಿಕರಿಗೆ ಮೊದಲೇ ಮಾಹಿತಿ ನೀಡಲಾಗಿತ್ತು’ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

ಗುಂತಕಲ್ ಮತ್ತು ಕೊಲ್ಲೂರು ನಡುವೆ ಜೋಡಿ ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಹೀಗಾಗಿ ಮಾರ್ಗ ಬದಲಿಸಲಾಗಿದೆ. ಹುಬ್ಬಳ್ಳಿಯಿಂದ ಮೈಸೂರಿಗೆ ಹೋಗುವ ಹಂಪಿ ಎಕ್ಸ್‌ಪ್ರೆಸ್‌, ಬಳ್ಳಾರಿ–ಗುಂತಕಲ್–ಧರ್ಮಾವರ–ಪೆನುಕೊಂಡ–ಯಲಹಂಕ ಮೂಲಕ ಬೆಂಗಳೂರು ತಲುಪುತ್ತದೆ. ಆದರೆ, ಮಾರ್ಗ ಬದಲಾಗಿರುವ ಕಾರಣ ಬಳ್ಳಾರಿ–ರಾಯದುರ್ಗ–ಚಿಕ್ಕಜಾಜೂರು–ಅರಸೀಕೆರೆ–ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬಂದಿದೆ.

ಈ ಮಾರ್ಗದಲ್ಲಿ ರೈಲು 120 ಕಿ.ಮೀ ಹೆಚ್ಚುವರಿ ಪ್ರಯಾಣ ಮಾಡಿದೆ. ಅಲ್ಲದೇ, ಬಳ್ಳಾರಿಯಲ್ಲಿ ಎಂಜಿನ್‌ ತಿರಿಗಿಸಿಕೊಳ್ಳಬೇಕಿದ್ದು, ಅದಕ್ಕೂ ಕಾಲಾವಕಾಶ ಹಿಡಿದಿದೆ. ಹೀಗಾಗಿ, 2 ಗಂಟೆ 55 ನಿಮಿಷ ತಡವಾಗಿ ಮಧ್ಯಾಹ್ನ 2.36ಕ್ಕೆ ಬೆಂಗಳೂರು ತಲುಪಿದೆ. ಮೇ 3ರಿಂದ 9ರವರೆಗೆ ಬದಲಾದ ಮಾರ್ಗದಲ್ಲಿ ರೈಲು ಸಂಚರಿಸಲಿದೆ ಎಂಬ ಮಾಹಿತಿಯನ್ನು ಮೇ 1ರಂದೇ ಪ್ರಕಟಣೆ ಹೊರಡಿಸಲಾಗಿದೆ ಎಂದು ರೈಲ್ವೆ ಇಲಾಖೆ ವಿವರಿಸಿದೆ.

ADVERTISEMENT

‘ಇದಲ್ಲದೇ ಹುಬ್ಬಳ್ಳಿಯಿಂದ ಶನಿವಾರ ಸಂಜೆ 6.20ಕ್ಕೆ ಹೊರಡಬೇಕಿದ್ದ ರೈಲು 8.20ಕ್ಕೆ ಹೊರಟಿದೆ. ಮಾರ್ಗ ಬದಲಾವಣೆ ಮತ್ತು ಎರಡು ಗಂಟೆ ತಡವಾಗಿ ರೈಲು ಹೊರಡುತ್ತಿರುವ ಮಾಹಿತಿಯನ್ನು ಸೀಟು ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ಎಸ್ಎಂಎಸ್‌ ಮೂಲಕ ಶನಿವಾರವೇ ತಿಳಿಸಲಾಗಿದೆ’ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.