ADVERTISEMENT

ರೈಲ್ವೆ ಇ–ಟಿಕೆಟ್ ಅಕ್ರಮ ಜಾಲ, ಮೌಲ್ವಿ ಸೇರಿ ನಾಲ್ವರ ಬಂಧನ: ಪಾಕಿಸ್ತಾನದ ನಂಟು?

‘ಕಿಂಗ್’ ಸಾಫ್ಟ್‌ವೇರ್‌ ಖರೀದಿಸಿ ಕೃತ್ಯ l ಮೌಲ್ವಿ ಸೇರಿ ನಾಲ್ವರನ್ನು ಬಂಧಿಸಿದ ಆರ್‌ಪಿಎಫ್‌

ಸಂತೋಷ ಜಿಗಳಿಕೊಪ್ಪ
Published 17 ಸೆಪ್ಟೆಂಬರ್ 2022, 20:19 IST
Last Updated 17 ಸೆಪ್ಟೆಂಬರ್ 2022, 20:19 IST
ಬಂಧಿತ ಆರೋಪಿಗಳು (ಕುಳಿತವರು) ಹಾಗೂ ರೈಲ್ವೆ ಪೊಲೀಸರ ತಂಡ
ಬಂಧಿತ ಆರೋಪಿಗಳು (ಕುಳಿತವರು) ಹಾಗೂ ರೈಲ್ವೆ ಪೊಲೀಸರ ತಂಡ   

ಬೆಂಗಳೂರು: ಹಲವು ವರ್ಷಗಳಿಂದ ಅಕ್ರಮವಾಗಿ ರೈಲ್ವೆ ಇ–ಟಿಕೆಟ್‌ ಕಾಯ್ದಿರಿಸಿ ಇಲಾಖೆಗೆ ವಂಚಿಸುತ್ತಿದ್ದ ಜಾಲ ಭೇದಿಸಿರುವ ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್‌) ಪೊಲೀಸರು, ಮೌಲ್ವಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಪಾಕಿಸ್ತಾನ ವ್ಯಕ್ತಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಈ ಆಯಾಮದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

‘ಗೋರಿಪಾಳ್ಯದ ಮಾಮೂರ್ ಮಸೀದಿಯ ಮೌಲ್ವಿ ನದೀಮ್ ಅಖ್ತರ್ ಸಿದ್ಧಿಕ್ (35), ಪಾದರಾಯನಪುರದ ಸೈಯದ್ ಮೊಹಮ್ಮದ್ ಜುನೇದ್ (30), ಯಶವಂತಪುರದ ಸಂತೋಷ್ (35) ಹಾಗೂ ಮತ್ತೀಕೆರೆಯ ಪಿ. ವೆಂಕಟೇಶ್ (37) ಬಂಧಿತರು. ಇವರಿಂದ ಮೊಬೈಲ್ ಹಾಗೂ ಇ–ಟಿಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಆರ್‌ಪಿಎಫ್‌ ಮೂಲಗಳು ಹೇಳಿವೆ.

‘ಸಿದ್ಧಿಕ್ ಹಾಗೂ ಜುನೇದ್, ಜಾಲದ ಸೂತ್ರಧಾರಿಗಳು. ಸಂತೋಷ್ ಹಾಗೂ ವೆಂಕಟೇಶ್‌, ಗ್ರಾಹಕರನ್ನು ಪರಿಚಯಿಸಿಕೊಡುವ ಏಜೆಂಟರಾಗಿದ್ದರು. ನಾಲ್ವರು ಸೇರಿಕೊಂಡು ಇ–ಟಿಕೆಟ್ ಕಾಯ್ದಿರಿಸುತ್ತಿದ್ದರು. ಈ ಕೃತ್ಯದಿಂದ ರೈಲ್ವೆ ಇಲಾಖೆಗೆ ಅಪಾರ ನಷ್ಟವಾಗಿತ್ತು' ಎಂದೂ ತಿಳಿಸಿವೆ.

ADVERTISEMENT

8ನೇ ವಯಸ್ಸಿಗೆ ಬಿಹಾರ ತೊರೆದಿದ್ದ: ‘ಆರೋಪಿ ಸಿದ್ಧಿಕ್, ಬಿಹಾರದವ. 8ನೇ ವಯಸ್ಸಿನಲ್ಲಿ ಪೋಷಕರ ಜೊತೆ ಬೆಳಗಾವಿಗೆ ಬಂದಿದ್ದ. ಅಲ್ಲಿಯೇ ಮದರಸಾದಲ್ಲಿ ಶಿಕ್ಷಣ ಪಡೆದಿದ್ದ. ಕೆಲ ವರ್ಷಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು, ಮಾಮೂರ್ ಮಸೀದಿಯಲ್ಲಿ ಮೌಲ್ವಿ ಆಗಿ ಕೆಲಸ ಆರಂಭಿಸಿದ್ದ. ಮಕ್ಕಳಿಗೆ ಕುರಾನ್ ಪಾಠ ಮಾಡುತ್ತಿದ್ದ.’

‘ಇನ್ನೊಬ್ಬ ಆರೋಪಿ ಜುನೇದ್, ಹೊಸ ಗುಡ್ಡದಹಳ್ಳಿ ಕುವೆಂಪುನಗರದ ಪೈಪ್‌ಲೈನ್ ರಸ್ತೆಯಲ್ಲಿ ‘ಅರ್ಫತ್ ಎಂಟರ್‌ಪ್ರೈಸಸ್’ ಮಳಿಗೆ ನಡೆಸುತ್ತಿದ್ದ. ಸಿದ್ಧಿಕ್ ನೀಡುತ್ತಿದ್ದ ‘ಯೂಸರ್ ಐಡಿ’ಗಳನ್ನು ಬಳಸಿಕೊಂಡು ಟಿಕೆಟ್ ಕಾಯ್ದಿರಿಸುತ್ತಿದ್ದ. ಪ್ರತಿ ಟಿಕೆಟ್‌ನ ದರ ಹಾಗೂ ಹೆಚ್ಚುವರಿಯಾಗಿ₹ 500 ಪಡೆಯುತ್ತಿದ್ದ. ಇದರಲ್ಲಿ ಸಿದ್ಧಿಕ್‌ಗೆ ಪಾಲು ಕೊಡುತ್ತಿದ್ದ. ಯಶವಂತಪುರದಲ್ಲಿ ಎಸ್‌ಎಲ್‌ವಿ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ಸಂತೋಷ್, ವ್ಯವಹಾರದಲ್ಲಿ ನಷ್ಟವಾಗಿ ಮಳಿಗೆ ಮುಚ್ಚಿದ್ದ. ಇನ್ನೊಬ್ಬ ಆರೋಪಿ ಪಿ. ವೆಂಕಟೇಶ್ ಜೊತೆ ಸೇರಿ ‘ಟ್ರಾವೆಲ್ ವರ್ಲ್ಡ್’ ಏಜೆನ್ಸಿ ಆರಂಭಿಸಿದ್ದ. ಇವರಿಬ್ಬರೂ ಇ–ಟಿಕೆಟ್‌ ಮಾರಾಟದಲ್ಲಿ ತೊಡಗಿದ್ದರು.’

‘ಕಿಂಗ್’ ಸಾಫ್ಟ್‌ವೇರ್ ಖರೀದಿ: ‘ಆರೋಪಿ ಸಿದ್ಧಿಕ್, ಆಗಾಗ ಬಿಹಾರ ಹಾಗೂ ಇತರೆ ನಗರಗಳಿಗೆ ಹೋಗಿ ಬರುತ್ತಿದ್ದ. ಈ ವೇಳೆ ಪ್ರಯಾಣಕ್ಕೆ ರೈಲ್ವೆ ಟಿಕೆಟ್ ಸಿಗುತ್ತಿರಲಿಲ್ಲ. ರೈಲ್ವೆ ಟಿಕೆಟ್ ಕಾಯ್ದಿರಿಸುವುದು ಹೇಗೆ ? ಎಂಬುದನ್ನು ತಿಳಿಯಲು ಯೂಟ್ಯೂಬ್‌ನಲ್ಲಿ ಹುಡುಕಾಡಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹೊರ ದೇಶದ ವ್ಯಕ್ತಿಯೊಬ್ಬ ಅಭಿವೃದ್ಧಿಪಡಿಸಿದ್ದ ‘ಕಿಂಗ್’ ಸಾಫ್ಟ್‌ವೇರ್ ಬಗ್ಗೆ ಸಿದ್ಧಿಕ್ ತಿಳಿದುಕೊಂಡಿದ್ದ. ವ್ಯಕ್ತಿಯನ್ನು ಸಂಪರ್ಕಿಸಿದ್ದ ಸಿದ್ದಿಕ್, ಆತನಿಗೆ ಹಣ ನೀಡಿ ‘ಎನಿಡೆಸ್ಕ್’ ಮೂಲಕ ಸಾಫ್ಟ್‌ವೇರ್ ಖರೀದಿಸಿದ್ದ. ಅದೇ ಸಾಫ್ಟ್‌ವೇರ್‌ ಬಳಸಿ, ನಾನಾ ಹೆಸರಿನ ಯೂಸರ್‌ ಐಡಿಗಳನ್ನು ಸೃಷ್ಟಿಸುತ್ತಿದ್ದ. ಕೋವಿಡ್ ಸಂದರ್ಭದಲ್ಲಿ ಮಸೀದಿ ಬಳಿಯೇ ಅಕ್ರಮವಾಗಿ ‘ಈಸಿ ಟ್ರಿಫ್’ ಏಜೆನ್ಸಿ ತೆರೆದು ಇ–ಟಿಕೆಟ್ ಕಾಯ್ದಿರಿಸಿ ಹಣ ಸಂಪಾದಿಸಿದ್ದ.’

‘ಹೆಚ್ಚು ಹಣ ಬರುತ್ತಿದ್ದಂತೆ ಸಿದ್ಧಿಕ್, ಯೂಸರ್ ಐಡಿಗಳನ್ನು ಸೃಷ್ಟಿಸಿ ಜುನೇದ್ ಹಾಗೂ ಇತರರಿಗೆ ನೀಡಿದ್ದ. ಎಲ್ಲರೂ ಸೇರಿ ಹೆಚ್ಚಿನ ಪ್ರಮಾಣದಲ್ಲಿ ಇ–ಟಿಕೆಟ್ ಕಾಯ್ದಿರಿಸುತ್ತಿದ್ದರು. ಸೈಬರ್ ವಿಭಾಗಕ್ಕೆ ಸಿಕ್ಕ ಸುಳಿವು ಆಧರಿಸಿ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.’

‘ಎಸ್‌ಬಿಐ, ಐಸಿಐಸಿಐ ಹಾಗೂ ಇತರೆ ಬ್ಯಾಂಕ್ ಶಾಖೆಗಳಲ್ಲಿರುವ ಆರೋಪಿಗಳ ಖಾತೆಗಳ ವಿವರ ಸಂಗ್ರಹಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಸಿಕ್ಕಿ ಬೀಳುತ್ತಿದ್ದಂತೆ ಯೂಸರ್ ಐಡಿ ಬ್ಲಾಕ್’

‘ಆರೋಪಿ ಸಿದ್ಧಿಕ್, ನೂರಕ್ಕೂ ಹೆಚ್ಚು ಯೂಸರ್ ಐಡಿಗಳನ್ನು ಸೃಷ್ಟಿಸಿದ್ದ. ಯೂಸರ್ ಐಡಿಗಳ ಪಟ್ಟಿ ಸಿದ್ಧಪಡಿಸಿ ಪರಿಶೀಲಿಸಲಾಯಿತು. ಆದರೆ, ಎಲ್ಲ ಐಡಿಗಳು ಬ್ಲಾಕ್‌ ಆಗಿದ್ದವು. ಆರೋಪಿಗಳು ಸಿಕ್ಕಿಬೀಳುತ್ತಿದ್ದಂತೆ ಐಡಿಗಳನ್ನು ಬ್ಲಾಕ್‌ ಮಾಡಲಾಗಿದ್ದು, ಇದರ ಹಿಂದೆ ಮತ್ತಷ್ಟು ಮಂದಿ ಶಾಮೀಲಾಗಿರುವ ಅನುಮಾನವಿದೆ’ ಎಂದು ಆರ್‌ಪಿಎಫ್‌ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.