ಹುಬ್ಬಳ್ಳಿ: ‘ನೈರುತ್ಯ ರೈಲ್ವೆಯಲ್ಲಿ ‘ಡಿ’ ವೃಂದದ ಹುದ್ದೆಗಳಿಗೆ ಮಾಡಿಕೊಂಡಿರುವ ನೇಮಕಾತಿಯಲ್ಲಿ ಕನ್ನಡಿಗರಿಗೆ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಈ ನೇಮಕಾತಿಯನ್ನು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಇಲ್ಲಿನ ರೈಲ್ವೆ ವಲಯ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
‘2013ರಲ್ಲಿ ನಡೆಸಿದ ಹಾಗೆ ಸ್ಥಳೀಯ ಮಟ್ಟದಲ್ಲೇ ಈ ವೃಂದಕ್ಕೆ ಪರೀಕ್ಷೆ ನಡೆಸಬೇಕು’ ಎಂದು ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ದೂರಿದ್ದಾರೆ.
‘ರಾಜ್ಯದವರಿಗೆ ಕೆಲಸ ಸಿಗುವುದಿಲ್ಲ ಎಂದರೆ ನೈರುತ್ಯ ವಲಯ ಏಕೆ ಬೇಕು? ಕನ್ನಡಿಗರಿಗೆ ಆದ್ಯತೆ ಕೊಡುವ ಉದ್ದೇಶದಿಂದ ತಕ್ಷಣ ಮರು ಪರೀಕ್ಷೆ ನಡೆಸಬೇಕು. ಇಲ್ಲದಿದ್ದರೆ, ಹೋರಾಟ ಮಾಡಲಾಗುವುದು’ ಎಂದು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಿರೀಶ ಪೂಜಾರ ಎಚ್ಚರಿಸಿದ್ದಾರೆ.
ನೈರುತ್ಯ ರೈಲ್ವೆ ನೇಮಕಾತಿಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಯಲ್ಲಿ ಶುಕ್ರವಾರ ‘ಫಿಟ್ಟರ್ ಹುದ್ದೆಗೆ ಎಂ.ಟೆಕ್ ಪದವೀಧರರು’ ವರದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.