ADVERTISEMENT

ರೈಲ್ವೆ: ₹2,432 ಕೋಟಿ ಹೆಚ್ಚುವರಿ ಹೊರೆ

ರಾಜ್ಯದ ನಾಲ್ಕು ಯೋಜನೆ ವಿಳಂಬ: ರಾಜ್ಯದ ವೆಚ್ಚವೂ ₹649 ಕೋಟಿ ಏರಿಕೆ

ಜಯಸಿಂಹ ಆರ್.
Published 21 ಜುಲೈ 2024, 23:45 IST
Last Updated 21 ಜುಲೈ 2024, 23:45 IST
<div class="paragraphs"><p> ರೈಲ್ವೆ</p></div>

ರೈಲ್ವೆ

   

ಬೆಂಗಳೂರು: ಕರ್ನಾಟಕದಲ್ಲಿ ನೈರುತ್ಯ ರೈಲ್ವೆ ಕೈಗೊಂಡಿರುವ ನಾಲ್ಕು ಯೋಜನೆಗಳು ವಿಳಂಬವಾದುದರಿಂದ ಯೋಜನಾ ವೆಚ್ಚದಲ್ಲಿ ₹2,432 ಕೊಟಿಯಷ್ಟು ಏರಿಕೆಯಾಗಿದೆ. ಇವುಗಳಲ್ಲಿ ಎರಡು ಯೋಜನೆಗಳ ವಿಳಂಬದಿಂದ ರಾಜ್ಯ ಸರ್ಕಾರದ ವೆಚ್ಚವೂ ₹649.52 ಕೋಟಿಯಷ್ಟು ಹೆಚ್ಚಾಗಿದೆ.

ರೈಲ್ವೆ ಇಲಾಖೆಯು ಪದೇ–ಪದೇ ಲೇನ್‌ ಅಲೈನ್‌ಮೆಂಟ್‌ ಬದಲಿಸಿದ್ದು ಮತ್ತು ಕೇಂದ್ರ ಪರಿಸರ ಸಚಿವಾಲಯದಿಂದ ಪರಿಸರ ಅನುಮತಿ ದೊರೆಯದೇ ಇದ್ದದ್ದೇ ವಿಳಂಬಕ್ಕೆ ಕಾರಣ. ಇದರಿಂದ ರೈಲ್ವೆ ಇಲಾಖೆಯ ವೆಚ್ಚವೂ ಏರಿಕೆಯಾಗಿದೆ ಎಂಬುದನ್ನು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ‘ಯೋಜನಾ ಆನ್‌ಲೈನ್‌ ಮೇಲ್ವಿಚಾರಣಾ ವ್ಯವಸ್ಥೆ’ಯ ಡ್ಯಾಶ್‌ಬೋರ್ಡ್‌ ಹೇಳುತ್ತದೆ.

ADVERTISEMENT

ಬಾಗಲಕೋಟೆ–ಕುಡಚಿ, ಕಡೂರು–ಸಕಲೇಶಪುರ, ಹೊಸಪೇಟೆ–ವಾಸ್ಕೋ ಡ ಗಾಮಾ ಮತ್ತು ಮಾರಿಕುಪ್ಪಂ–ಕುಪ್ಪಂ ಮಾರ್ಗಗಳ ಕಾಮಗಾರಿ ಮೂಲ ವೆಚ್ಚ ಒಟ್ಟು ₹4,037.08 ಕೊಟಿಯಷ್ಟಿತ್ತು. ವಿಳಂಬದ ಕಾರಣದಿಂದ ಈ ವೆಚ್ಚ ಈಗಾಗಲೇ ₹6,463.94 ಕೋಟಿಗೆ ಏರಿಕೆಯಾಗಿದೆ. ಈ ಯೋಜನೆಗಳು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇರುವುದರಿಂದ ವೆಚ್ಚ ಇನ್ನಷ್ಟು ಏರಿಕೆಯಾಗುವ ಸಂಭವವಿದೆ ಎಂದು ಡ್ಯಾಶ್‌ಬೋರ್ಡ್‌ ಹೇಳುತ್ತದೆ.

ರಾಜ್ಯದ ವೆಚ್ಚವೂ ಏರಿಕೆ: ಬಾಗಲಕೋಟೆ–ಕುಡಚಿ ನೂತನ ಮಾರ್ಗ ನಿರ್ಮಾಣ ಯೋಜನೆಗೆ 2010ರಲ್ಲೇ ಅನುಮತಿ ದೊರೆತಿತ್ತು. ಅಗತ್ಯವಿರುವ ಭೂಮಿಯನ್ನು ತಾನೇ ಒದಗಿಸಿಕೊಡಲು ಮತ್ತು ಶೇ 50ರಷ್ಟು ವೆಚ್ಚವನ್ನು ಭರಿಸಲು ರಾಜ್ಯ ಸರ್ಕಾರವು ನೈರುತ್ಯ ರೈಲ್ವೆ ಒಟ್ಟಿಗೆ ಒಪ್ಪಂದ ಮಾಡಿಕೊಂಡಿತ್ತು. ರಾಜ್ಯ ಸರ್ಕಾರವು ಈ ಯೋಜನೆಗೆ ಅಗತ್ಯವಿದ್ದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ರೈಲ್ವೆಗೆ ಹಸ್ತಾಂತರಿಸಿತ್ತು.

ಯೋಜನೆಯು 2016ರ ಮಾರ್ಚ್‌ನಲ್ಲೇ ಪೂರ್ಣಗೊಳ್ಳಬೇಕಿತ್ತು. ಆದರೆ, ನೈರುತ್ಯ ರೈಲ್ವೆಯು ಪದೇ–ಪದೇ ಲೇನ್‌ ಲೈನ್‌ಮೆಂಟ್‌ ಬದಲಿಸಿ, ಹೆಚ್ಚುವರಿ ಭೂಮಿಗೆ ಬೇಡಿಕೆ ಸಲ್ಲಿಸಿದೆ. ಪರಿಣಾಮವಾಗಿ ಯೋಜನೆ ವಿಳಂಬವಾಗಿದೆ. ಯೋಜನೆ ಪೂರ್ಣಗೊಂಡಿರುವುದು ಶೇಕಡ 33ರಷ್ಟು ಮಾತ್ರ. ಯೋಜನೆ ಆರಂಭವಾದಾಗ ಕರ್ನಾಟಕವು ₹493.15 ಕೋಟಿಯಷ್ಟನ್ನು ಒದಗಿಸಬೇಕಿತ್ತು. ಆದರೆ ಈಗ ₹824.65 ಕೋಟಿ ಒದಗಿಸಬೇಕಿದೆ. ಈ ಯೋಜನೆಯಲ್ಲಿ ರಾಜ್ಯದ ವೆಚ್ಚ ₹331.5 ಕೋಟಿಯಷ್ಟು ಏರಿಕೆಯಾಗಿದೆ.

ಕಡೂರು–ಚಿಕ್ಕಮಗಳೂರು–ಸಕಲೇಶಪುರ ನೂತನ ಮಾರ್ಗ ನಿರ್ಮಾಣ ಯೋಜನೆಯ ಮೂಲ ವೆಚ್ಚ ₹644.78 ಕೋಟಿಯಷ್ಟು ಇತ್ತು. ಇದರಲ್ಲಿ ರಾಜ್ಯವು ₹322.9 ಕೋಟಿ ಭರಿಸಬೇಕಿತ್ತು. ಆದರೆ ಪರಿಸರ ಅನುಮತಿ ದೊರೆಯದೇ ಇದ್ದುದು ಮತ್ತು ಯೋಜನೆ ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ಚಿಕ್ಕಮಗಳೂರು–ಸಕಲೇಶಪುರ ಮಾರ್ಗ ರದ್ದಾಯಿತು. ಬದಲಿಗೆ ಚಿಕ್ಕಮಗಳೂರು–ಬೇಲೂರು–ಹಾಸನ ಮಾರ್ಗವನ್ನು ಯೋಜನೆಗೆ ಹೊಸದಾಗಿ ಸೇರಿಸಲಾಯಿತು.

ಇದರಿಂದ ಕಾಮಗಾರಿ ವಿಳಂಬವಾಗಿದೆ. ಪರಿಣಾಮವಾಗಿ ಯೋಜನೆಯ ಒಟ್ಟು ವೆಚ್ಚ ₹1,282 ಕೋಟಿಗೆ ಏರಿಕೆಯಾಗಿದೆ. ರಾಜ್ಯ ಸರ್ಕಾರದ ವೆಚ್ಚವು ₹641 ಕೋಟಿಗೆ ಏರಿಕೆಯಾಗಿ, ₹318 ಕೋಟಿ ಹೆಚ್ಚುವರಿ ಹೊರೆ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.