ಬೀದರ್: ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸುರಿದ ಆಲಿಕಲ್ಲು ಸಹಿತ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. 650 ಹೆಕ್ಟೇರ್ ಪ್ರದೇಶದಲ್ಲಿನ ಜೋಳ, ಕುಸುಬಿ, ಗೋಧಿ ಬೆಳೆ, 152 ಹೆಕ್ಟೇರ್ ಪ್ರದೇಶದಲ್ಲಿನ ಕಲ್ಲಂಗಡಿ, ಮಾವು ಹಾಗೂ ಟೊಮೆಟೊ ಬೆಳೆ ಹಾಳಾಗಿದೆ.
ಕಮಲನಗರ ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಜೋಳ, ಕುಸುಬೆ, ಗೋಧಿ ಸೇರಿದಂತೆ ಹಲವು ಬೆಳೆಗಳಿಗೆ ಹಾನಿಯಾಗಿದೆ. ಚಿಟಗುಪ್ಪ ತಾಲ್ಲೂಕಿನಾದ್ಯಂತ ಮೂರು ದಿನಗಳಿಂದ ನಿರಂತರ ಮಳೆಯಿಂದಾಗಿ ಮಾವು, ಗೋಧಿ ಬೆಳೆ ಸೇರಿದಂತೆ ಹಲವಾರು ಬೆಳೆಗಳಿಗೆ ಹಾನಿಯಾಗಿದೆ.
‘ಪ್ರಾಥಮಿಕ ಹಂತದ ಮಾಹಿತಿ ಪ್ರಕಾರ ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ಹಾನಿಯಾಗಿದೆ. ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಜಂಟಿ ಸಮೀಕ್ಷೆ ನಂತರ ನಿಖರ ಮಾಹಿತಿ ದೊರೆಯಲಿದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.
ಪಟ್ಟಣ, ಕುಡಂಬಲ್, ಮುತ್ತಂಗಿ, ಬೇಮಳಖೇಡಾ, ಮಂಗಲಗಿ, ಬನ್ನಳ್ಳಿ ಗ್ರಾಮಗಳಲ್ಲಿ ಮಾವು ಬೆಳೆ ಹಾಳಾಗಿದೆ.
ರೈತ ರೇವಣಪ್ಪ ಹೂಗಾರ, ‘ಎರಡು ಎಕರೆ ಮಾವಿನ ತೋಟದಲ್ಲಿ ಬೆಳೆದ ಮಾವು, ದ್ರಾಕ್ಷಿ ಮಳೆಯಿಂದಾಗಿ ಸಂಪೂರ್ಣವಾಗಿ ನಾಶವಾಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ’ ಎಂದರು.
ತಾಳಮಡಗಿ, ನಿರ್ಣಾ ಗ್ರಾಮಗಳಲ್ಲಿ ಗೋಧಿ ಬೆಳೆ ನೆಲಕಚ್ಚಿದೆ. ಒಂದೆರಡು ದಿನಗಳಲ್ಲಿ ಗೋಧಿ ರಾಶಿ ಮಾಡಬೇಕಿತ್ತು. ಧಿಡೀರನೆ ಆಲಿಕಲ್ಲು ಮಳೆ ಸುರಿದಿದ್ದಕ್ಕೆ ಬೆಳೆ ಹಾಳಾಗಿದೆ ಎಂದು ರೈತ ಶಂಕರಪ್ಪ ಹೇಳಿದರು.
ಹಲಗೂರು: ಬಿರುಗಾಳಿ ಸಹಿತ ಮಳೆ, ಹಾನಿ
ಹಲಗೂರು (ಮಂಡ್ಯ ಜಿಲ್ಲೆ): ಬಿರುಗಾಳಿ ಸಹಿತ ಮಳೆಗೆ ಮಳವಳ್ಳಿ ತಾಲ್ಲೂಕು ಹಲಗೂರು ಸಮೀಪದ ವಿವಿದ ಗ್ರಾಮಗಳಲ್ಲಿ ಶನಿವಾರ ರಾತ್ರಿ ಮನೆಯ ಚಾವಣಿ (ಶೀಟ್), ಹೆಂಚುಗಳು ಹಾರಿಹೋಗಿದ್ದು, ನಷ್ಟ ಉಂಟಾಗಿದೆ.
ದೊಡ್ಡ ಮರದ ಕೊಂಬೆಗಳು ವಿದ್ಯುತ್ ತಂತಿ ಮೇಲೆ ಬಿದ್ದುದರಿಂದ ಕಸಬಾ ಮತ್ತು ಹಲಗೂರು ಹೋಬಳಿಯ ಹಲವು ಗ್ರಾಮಗಳಲ್ಲಿ ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ವಿದ್ಯುತ್ ವ್ಯತ್ಯಯಗೊಂಡಿದ್ದು, ಭಾನುವಾರ ಸಂಜೆಯವರೆಗೂ ತೆರವು ಕಾರ್ಯಾಚರಣೆ ನಡೆಯಿತು.
ಅಂತರವಳ್ಳಿಯ ಎ.ಎಸ್.ಶಿವಕುಮಾರ್ ಮತ್ತು ಶಿವರಾಮು ಅವರಿಗೆ ಅವರಿಗೆ ಸೇರಿದ್ದ ತಲಾ 2 ಎಕರೆಯಲ್ಲಿ ಫಸಲು ಬಂದಿದ್ದ ಬಾಳೆ ತೋಟಕ್ಕೆ ಹಾನಿಯಾಗಿದ್ದು, ಬಹುತೇಕ ಗಿಡಗಳು ನೆಲಕಚ್ಚಿವೆ. ಮನು ಅವರ ಕೋಳಿ ಸಾಕಣೆ ಶೆಡ್‌ನ ಚಾವಣಿ, ದಡಮಹಳ್ಳಿಯಲ್ಲಿ ದೊಡ್ಡಲಿಂಗೇಗೌಡ ಅವರ ಇಟ್ಟಿಗೆ ತಯಾರಿಕೆ ಶೆಡ್, ಕೋಳಿ ಶೆಡ್ ಹಾನಿಗೊಂಡಿವಾ. ಹಲವು ತೆಂಗಿನ ಮರ, ಮಾವಿನ ಮರಗಳು ಧರೆಗುರುಳಿವೆ.
ಆತಂಕ: ಕಸಬಾ ಮತ್ತು ಹಲಗೂರು ಹೋಬಳಿಯಲ್ಲಿ ಮುಸುಕಿನ ಜೋಳ, ಟೊಮೆಟೊ, ಬದನೆ, ದಪ್ಪಮೆಣಸಿನಕಾಯಿ, ಸೌತೆಕಾಯಿ, ವಿವಿಧ ಬಗೆಯ ಪುಷ್ಪಕೃಷಿಗೆ ಬಿರುಗಾಳಿಯಿಂದಾಗಗ ನಷ್ಟವಾಗಿದೆ. ಅಧಿಕಾರಿಗಳು ಪರಿಶೀಲಿಸಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿದ್ಯುತ್ ತಂತಿ ತಗುಲಿ ಮೂವರ ದುರ್ಮರಣ
ಚಿಂಚೋಳಿ (ಕಲಬುರಗಿ ಜಿಲ್ಲೆ): ಪಟ್ಟಣದ ಧನಗರ ಗಲ್ಲಿಯಲ್ಲಿ ವಿದ್ಯುತ್ ತಂತಿ ತಗುಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಝರಣಮ್ಮ ಅಂಬಣ್ಣ ಬಸಗೊಂಡ (45), ಮಹೇಶ ಅಂಬಣ್ಣ ಬಸಗೊಂಡ (20), ಸುರೇಶ ಅಂಬಣ್ಣ ಬಸಗೊಂಡ (18) ಮೃತರು.
ಭಾನುವಾರ ಬೆಳಗಿನ ಜಾವ 1ರ ಸುಮಾರಿಗೆ ಗುಡುಗು ಮಿಂಚು ಸಹಿತ ಜೋರು ಮಳೆ ಸುರಿಯುತ್ತಿದ್ದಾಗ ವಿದ್ಯುತ್ ತಂತಿ ಕಡಿದು ನೆಲಕ್ಕೆ ಬಿದ್ದಿದೆ. ಮನೆಯ ಹೊರಗಡೆ ಸಂಗ್ರಹಿಸಿದ್ದ ಹೊಟ್ಟು (ಜಾನುವಾರುಗಳ ಮೇವು) ಮಳೆಯಲ್ಲಿ ನೆನೆಯುತ್ತದೆ ಎಂದು ತಾಡಪತ್ರಿಯಿಂದ ಮುಚ್ಚಲು ಹೋದಾಗ ವಿದ್ಯುತ್ ತಂತಿ ತಗುಲಿದೆ. ಘಟನೆಯಲ್ಲಿ ಅಂಬಣ್ಣನಿಗೆ ಗಾಯಗಳಾಗಿವೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.