ADVERTISEMENT

ಕೊಡಗು ಜಿಲ್ಲೆಯಲ್ಲಿ ಮತ್ತೆ ವರ್ಷಧಾರೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 1:36 IST
Last Updated 1 ಜುಲೈ 2024, 1:36 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮಡಿಕೇರಿ/ಕಲಬುರಗಿ: ಕೊಡಗು ಜಿಲ್ಲೆಯಲ್ಲಿ ಒಂದೆರಡು ದಿನ ಬಿಡುವು ನೀಡಿದ್ದ ಮಳೆ ಭಾನುವಾರ ಮತ್ತೆ ಆರಂಭವಾಗಿದೆ. ಮಡಿಕೇರಿಯಲ್ಲಿ ಆಗಾಗ ದಿನವಿಡೀ ಬಿರುಸಿನ ಮಳೆ ಸುರಿಯಿತು. ವಿರಾಜಪೇಟೆಯಲ್ಲೂ ಮಧ್ಯಾಹ್ನದ ಬಳಿಕ ಉತ್ತಮ ಮಳೆಯಾಗಿದೆ.

ಭಾನುವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ 24 ಗಂಟೆಗಳಲ್ಲಿ ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ 5 ಸೆಂ.ಮೀನಷ್ಟು ಮಳೆಯಾಗಿದೆ.

ADVERTISEMENT

ಮೈಸೂರು ನಗರದಲ್ಲಿ ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ಸಮಯ ಚದುರಿದಂತೆ ಸಾಧಾರಣ ಮಳೆ ಬಿದ್ದಿತು.

ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್‌ ಜಿಲ್ಲೆಗಳ ವಿವಿಧ ತಾಲ್ಲೂಕುಗಳಲ್ಲಿ ಧಾರಾಕಾರ ಮಳೆಯಾಗಿದೆ. ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನುಮಸಾಗರದಲ್ಲಿ ತುಂತುರು ಮಳೆ ಸುರಿದಿದೆ.

ಕಲಬುರಗಿಯಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸೆಕೆಯೂ ಹೆಚ್ಚಾಗಿತ್ತು. ಆಗಸದಲ್ಲಿ ದಟ್ಟೈಸಿದ್ದ ಮೋಡಗಳು ಮಧ್ಯಾಹ್ನ 2.45ರ ಸುಮಾರಿಗೆ ಧಾರಾಕಾರ ಮಳೆ ಸುರಿಸಿದವು. ಬಳಿಕ ಜಿಟಿ–ಜಿಟಿ ಮಳೆಯಾಯಿತು. ಸಂಜೆ 5 ಗಂಟೆ ಹೊತ್ತಿಗೆ ಮತ್ತೆ ಧಾರಾಕಾರ ಮಳೆ ಸುರಿಯಿತು. ಒಂದು ವಾರದ ಬಿಡುವಿನ ಬಳಿಕ ಸುರಿದ ಬಿರುಸಿನ ಮಳೆಗೆ ಚರಂಡಿಗಳು ತುಂಬಿ ಹರಿದವು. ಕಾವೇರಿದ್ದ ವಾತಾವರಣವೂ ತಂಪಾಯಿತು.

ಕಲಬುರಗಿ ಜಿಲ್ಲೆಯ ಚಿಂಚೋಳಿ, ಚಿತ್ತಾಪುರ, ಕಮಲಾಪುರ, ಕಾಳಗಿ, ಶಹಾಬಾದ್‌ ತಾಲ್ಲೂಕುಗಳಲ್ಲೂ ಉತ್ತಮ ಮಳೆಯಾಗಿದೆ. ಈ ಮಳೆಯು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಳೆ ಹಾಗೂ ತೇವಾಂಶ ಕೊರತೆ ಎದುರಿಸುತ್ತಿದ್ದ ಹೆಸರು, ಉದ್ದು, ತೊಗರಿ ಬೆಳೆಗಳಿಗೆ ಭಾನುವಾರದ ಮಳೆ ಪೂರಕವಾಗಿದೆ. ಕಳೆದೊಂದು ವಾರದಿಂದ ಮಳೆ ಬಾರದೆ ರೈತರು ಮುಂಗಾರು ಬೆಳೆ ತೊಗರಿ ಬಿತ್ತನೆ ಸ್ಥಗಿತಗೊಳಿಸಿದ್ದರು.‌

ಬೀದರ್‌ ವರದಿ: ಬೀದರ್‌ ಜಿಲ್ಲೆಯ ಹಲವೆಡೆ ಸತತ ಎರಡನೇ ದಿನವೂ ವರ್ಷಧಾರೆಯಾಗಿದೆ. ಭಾನುವಾರ ಸಂಜೆ ಅರ್ಧಗಂಟೆಗೂ ಹೆಚ್ಚು ಕಾಲ ಬಿರುಸಿನ ಮಳೆಯಾಗಿದೆ. ಜೋರು ಮಳೆಗೆ ಬೀದರ್‌ನ ಮೈಲೂರ್‌ ಬಡಾವಣೆಯಲ್ಲಿರುವ ಸರ್ಕಾರಿ ಶಾಲಾ ಕೊಠಡಿಯ ಗೋಡೆ ಕುಸಿದಿದೆ. ಜಿಲ್ಲೆಯ ಬಸವಕಲ್ಯಾಣ, ಭಾಲ್ಕಿ, ಚಿಟಗುಪ್ಪದಲ್ಲೂ ಮಳೆಯಾಗಿದೆ.

ಮಂಗಳೂರು ವರದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮಳೆ ಮುಂದುವರಿದಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ಬಿಟ್ಟು ಬಿಟ್ಟು ಸಾಧಾರಣ ಮಳೆಯಾಯಿತು. ಪಶ್ಚಿಮ ಘಟ್ಟದ ತಪ್ಪಲಿನ ‍ಪ್ರದೇಶಗಳಲ್ಲಿ ಮಳೆಯ ತೀವ್ರತೆ ಜಾಸ್ತಿ ಇತ್ತು.

ಜಿಲ್ಲೆಯಾದ್ಯಂತ ವಾರದಿಂದ ಈಚೆಗೆ ನಿತ್ಯವೂ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸುತ್ತಿದೆ. ನಗರದ ಬಜಾಲ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದು ಗುಡ್ಡ ಕುಸಿತದಿಂದ ಹಾನಿಗೊಳಗಾಗಿದೆ. ಪಂಜಿಮೊಗರುವಿನ ಇಳಿಜಾರು  ಪ್ರದೇಶದಲ್ಲಿ ನಾಲ್ಕು ಮನೆಗಳು ಕುಸಿಯುವ ಅಪಾಯವನ್ನು ಎದುರಿಸುತ್ತಿವೆ. ಈ ಮನೆಗಳಲ್ಲಿ ವಾಸವಿದ್ದ ಕುಟುಂಬಗಳನ್ನು ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.