ADVERTISEMENT

ಮಳೆ ಹಾನಿ: ವಿಧಾನಸಭೆಯಲ್ಲಿ ಪ್ರತಿಧ್ವನಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 15:54 IST
Last Updated 22 ಜುಲೈ 2024, 15:54 IST

ಬಿ.ವೈ. ವಿಜಯೇಂದ್ರ 
ಬಿ.ವೈ. ವಿಜಯೇಂದ್ರ    

ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆಯಿಂದ ಉಂಟಾಗಿರುವ ಮನೆ ಕುಸಿತ, ಗುಡ್ಡ ಕುಸಿತ, ರಸ್ತೆ ಹಾನಿ ವಿಚಾರಗಳು ವಿಧಾನಸಭೆಯಲ್ಲಿ ಸೋಮವಾರ ಪ್ರತಿಧ್ವನಿಸಿದವು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಬಿ.ವೈ. ವಿಜಯೇಂದ್ರ, ‘ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿದೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹಲವು ಮನೆಗಳು ಕುಸಿದಿವೆ. ಕೆಲವೆಡೆ ಗೋಡೆಗಳು ಕುಸಿದಿವೆ. ಅಂಕೋಲಾದ ಬಳಿ ಗುಡ್ಡ ಕುಸಿತವಾಗಿದೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಮನೆ ಕಳೆದುಕೊಂಡವರಿಗೆ ₹ 5 ಲಕ್ಷ, ಭಾಗಶಃ ಹಾನಿಗೆ ₹ 1 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಗುಡ್ಡ ಕುಸಿದಿರುವ ಶಿರೂರು ಗ್ರಾಮದಲ್ಲಿ ಹೆಚ್ಚು ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‍ಬಾಬು, ‘ಶಿರೂರಿನಲ್ಲಿ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿರುವ ಟ್ರಕ್‌ ಅನ್ನು ತೆಗೆಯಲು ಇನ್ನೂ ಸಾಧ್ಯ ಆಗಿಲ್ಲ. ಕೇಂದ್ರ ಸರ್ಕಾರದ ನೆರವು ಬಳಸಿಕೊಳ್ಳಿ’ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ADVERTISEMENT

‘ಸಕಲೇಶಪುರದಲ್ಲಿ 50 ಮನೆಗಳಿಗೆ ಹಾನಿಯಾಗಿದೆ. ಕಾಫಿ ತೋಟಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ಬಿಜೆಪಿಯ ಸಿಮೆಂಟ್ ಮಂಜು ಒತ್ತಾಯಿಸಿದರು. ಬಿಜೆಪಿಯ ಸಿದ್ದು ಸವದಿ ಸೇರಿದಂತೆ ಇತರ ಸದಸ್ಯರೂ ದನಿಗೂಡಿಸಿದರು.

ಆಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಅತಿವೃಷ್ಟಿಯಿಂದ ಕೊಡಗು, ಚಿಕ್ಕಮಗಳೂರು, ಬೆಳಗಾವಿ, ಶಿವಮೊಗ್ಗ, ಕರಾವಳಿ, ಸಕಲೇಶಪುರ ಭಾಗದಲ್ಲಿ ಹೆಚ್ಚಿನ ಹಾನಿಯಾಗಿದೆ. ಈ ಬಗ್ಗೆ ವಿಸ್ತೃತ ವರದಿ ಪಡೆದು ಸದನದಲ್ಲಿ ಉತ್ತರ ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.