ADVERTISEMENT

ರಾಜ್ಯದಲ್ಲಿ ಮಳೆ : ಧರೆಗುರುಳಿದ ಮರಗಳು, ವಿದ್ಯುತ್ ‌ಪೂರೈಕೆ ವ್ಯತ್ಯ‌ಯ

ದಕ, ಉಡುಪಿ, ಕೊಡಗಿನಲ್ಲಿ ಭಾರಿ ಮಳೆ, ಕದ್ರಾ, ಹಾರಂಗಿಯಿಂದ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 0:30 IST
Last Updated 23 ಜುಲೈ 2023, 0:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರವೂ ಮಳೆಯ ಆರ್ಭಟ ಮುಂದುವರಿಯಿತು. 

ಘಟ್ಟಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ, ಕೊಡಗು ಜಿಲ್ಲೆಯ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ 20 ಸಾವಿರ ಕ್ಯುಸೆಕ್‌ಗೆ ಮುಟ್ಟಿದ್ದು, ಭರ್ತಿಯಾಗಲು ಕೇವಲ 4 ಅಡಿಯಷ್ಟೇ ಇದೆ.  

ಭಾಗಮಂಡಲ ಹೋಬಳಿ ವ್ಯಾಪ್ತಿಯ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಸಿದ್ದಾಪುರ ಭಾಗದಲ್ಲೂ ಕಾವೇರಿ ನದಿ ನೀರು ಹೆಚ್ಚಾಗಿದೆ. ಸಮೀಪದ ಬಲಮುರಿಯಲ್ಲೂ ಕಾವೇರಿ ನದಿ ನೀರು ಉಕ್ಕಿ ಹರಿಯುತ್ತಿದೆ.

ADVERTISEMENT

ಬಿರುಗಾಳಿಗೆ ಮಡಿಕೇರಿ ನಗರ ಸೇರಿದಂತೆ ಹಲವೆಡೆ ಮರಗಳು ಧರೆಗುರುಳಿವೆ. ಅಬ್ಬಿಫಾಲ್ಸ್‌ ರಸ್ತೆಯಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ, ಸುಮಾರು ಒಂದೂವರೆ ಕಿ.ಮೀನಷ್ಟು ದೂರ ಸಂಚಾರ ದಟ್ಟಣೆ ಉಂಟಾಗಿತ್ತು.

ಮಡಿಕೇರಿಯ ಅರಣ್ಯ ಭವನದ ಸಮೀಪ ಮರವೊಂದು ವಿದ್ಯುತ್ ತಂತಿಗಳ ಮೇಲೆ ಬಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಇಡೀ ದಿನ ವಿದ್ಯುತ್ ಕಡಿತಗೊಂಡಿತ್ತು. ಮಳೆಯ ನಡುವೆಯೇ ಸೆಸ್ಕ್ ಸಿಬ್ಬಂದಿ ಕಾರ್ಯನಿರ್ವಹಿಸಿದರು. ಹೈಸೋಡ್ಲೂರು - ಬಿರುನಾಣಿ ರಸ್ತೆಯಲ್ಲಿ ‌ಮರ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು.  

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನಾಗನಹಳ್ಳಿ ಬಳಿ ಮಳೆಗಾಳಿಯಿಂದ ಶುಕ್ರವಾರ ರಾತ್ರಿ ರಸ್ತೆಗೆ ಅಡ್ಡಲಾಗಿ ವಿದ್ಯುತ್ ಕಂಬ ಹಾಗೂ ಮರ ಬಿದ್ದು ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಭಾರಿ ಗಾಳಿ ಬೀಸಿದ್ದರಿಂದ ಮಂಗಳೂರು ನಗರದಲ್ಲಿ 50ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದ್ದು, ಕೆಲ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. 

ನೇರಳೆಕಟ್ಟೆಯಲ್ಲಿ ರಸ್ತೆಗೆ ಮರ ಉರುಳಿ ಬಿದ್ದು ಮಾಣಿ– ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ವಾಹನಗಳ ಸಂಚಾರಕ್ಕೆ ಕೆಲ ಕಾಲ ಅಡ್ಡಿ ಉಂಟಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಕೆಲ ಮನೆಗಳ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿವೆ.

ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೆಲ ಕಡೆ ದಿನವಿಡೀ ತುಂತುರು ಇದ್ದರೆ, ಇನ್ನೂ ಕೆಲ ಕಡೆ ಬಿರುಸಿನ ಮಳೆ ಸುರಿಯಿತು.

ಖಾನಾಪುರ ತಾಲ್ಲೂಕಿನಲ್ಲಿ ಇಡೀ ದಿನ ಧಾರಾಕಾರ ಮಳೆಯಾದ ಕಾರಣ ಕಾಡಂಚಿನ 14 ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಪರಿಸ್ಥಿತಿ ಯಥಾರೀತಿಯಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದ ಕೃಷ್ಣಾ ನದಿಗೆ 92 ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ, ಹಳಿಯಾಳ ಭಾಗದಲ್ಲಿ ವ್ಯಾಪಕ ಮಳೆಯಾಗಿದೆ. ಕರಾವಳಿ ಭಾಗದ ಕಾರವಾರ, ಹೊನ್ನಾವರ, ಕುಮಟಾ ಸೇರಿ ವಿವಿಧೆಡೆ ಗಾಳಿ ಸಹಿತ ಮಳೆಯಾಗಿದೆ. ಜೊಯಿಡಾದ ಮೆಸ್ತಬಿರೋಡಾ ಗ್ರಾಮದಲ್ಲಿ ಬೃಹತ್ ಮರ ಉರುಳಿ ಮನೆಗೆ ಹಾನಿಯಾಗಿದೆ. ಯಲ್ಲಾಪುರದ ನಂದಿಬಾವಿಯಲ್ಲಿ ಮನೆಯೊಂದರೆ ಗೋಡೆ ಕುಸಿದಿದೆ.

ಇಡಗುಂದಿ ವಲಯ ಅರಣ್ಯ ವ್ಯಾಪ್ತಿಯ ಶಿರ್ಲೆ ಜಲಪಾತಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ದಾಂಡೇಲಿಯ ಕುಳಗಿ ರಸ್ತೆಯ ಬಡಕಾನಶಿರಡಾ ಗ್ರಾಮದ ಕ್ರಾಸ್ ಬಳಿ ಮರ ಬಿದ್ದು ಕೆಲ ಹೊತ್ತು ಸಂಚಾರಕ್ಕೆ ಅಡ್ಡಿಯಾಗಿತ್ತು.  

ಕಾಳಿನದಿಯಲ್ಲಿ ನೀರಿನ ಹರಿವಿನ ಮಟ್ಟ ಏರಿಕೆಯಾದ ಪರಿಣಾಮ ತಾಲ್ಲೂಕಿನ ಕದ್ರಾ ಜಲಾಶಯದಿಂದ ಶನಿವಾರ 6 ಕ್ರಸ್ಟ್ ಗೇಟ್‍ಗಳಿಂದ 30 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಯಿತು. ಜಲಾಶಯಕ್ಕೆ ಒಳಹರಿವಿನ ಪ್ರಮಾಣ 30,549 ಕ್ಯುಸೆಕ್‍ಗೆ ತಲುಪಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.