ADVERTISEMENT

ಏರುತ್ತಿರುವ ಜಲಾಶಯಗಳ ನೀರಿನಮಟ್ಟ; ಮುಳುಗಡೆ ಭೀತಿ

ವ್ಯಕ್ತಿ ನೀರುಪಾಲು; ಕೊಚ್ಚಿ ಹೋದ ವೆಸ್ಲಿ ಸೇತುವೆ; ಗೋಡೆ ಕುಸಿದು ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 16 ಜುಲೈ 2018, 20:07 IST
Last Updated 16 ಜುಲೈ 2018, 20:07 IST
ನೀರಿನ ಸೆಳೆತಕ್ಕೆ ಅರ್ಧ ಕೊಚ್ಚಿ ಹೋಗಿರುವ ವೆಸ್ಲಿ ಸೇತುವೆ
ನೀರಿನ ಸೆಳೆತಕ್ಕೆ ಅರ್ಧ ಕೊಚ್ಚಿ ಹೋಗಿರುವ ವೆಸ್ಲಿ ಸೇತುವೆ   

ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ಸ್ವಲ್ಪಮಟ್ಟಿಗೆ ತಗ್ಗಿದೆ. ನದಿಗಳು, ಹಳ್ಗಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಜಲಾಶಯಗಳ ನೀರಿನಮಟ್ಟ ಏರಿಕೆಯಾಗುತ್ತಲೇ ಇದೆ.

ಕೊಡಗು ಜಿಲ್ಲೆಯಲ್ಲಿ ಸೋಮವಾರ ಮಳೆ ಅಬ್ಬರ ತುಸು ತಗ್ಗಿದೆ. ಅದರೆ, ಗಾಳಿಯ ಆರ್ಭಟ ಇನ್ನೂ ಕಡಿಮೆಯಾಗಿಲ್ಲ.

ಭಾನುವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ನಷ್ಟವಾಗಿದೆ. ಮಡಿಕೇರಿ, ವಿರಾಜಪೇಟೆ ತಾಲ್ಲೂಕುಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾತ್ರ ಸೋಮವಾರ ರಜೆ ನೀಡಲಾಗಿತ್ತು.

ADVERTISEMENT

ಧಾರಾಕಾರ ಮಳೆ: ಬೆಳಗಾವಿ ಹಾಗೂ ಖಾನಾಪುರ ಸುತ್ತಮುತ್ತ ಸೋಮವಾರ ಎಡೆಬಿಡದೆ ಧಾರಾಕಾರವಾಗಿ ಮಳೆ ಸುರಿದಿದೆ. ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯ ಕೋಡಿ ಬಿದ್ದಿದೆ.

ಖಾನಾಪುರ ತಾಲ್ಲೂಕಿನ ತಿವೊಲಿ ಗ್ರಾಮದ ಬಳಿ ಅಲಾತ್ರಿ ಹಳ್ಳದ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ನೀರಿನಲ್ಲಿ ಕೊಚ್ಚಿಹೋಗಿದೆ. ಸಿಂಧನೂರು– ಹೆಮ್ಮಡಗ ರಾಜ್ಯ ಹೆದ್ದಾರಿಯ ಮಂತೂರ್ಗಾ ಗ್ರಾಮದ ಬಳಿ ಸೇತುವೆ ಮೇಲೆ 3 ಅಡಿ ನೀರು ಹರಿಯುತ್ತಿದೆ. ರಸ್ತೆ ಸಂಚಾರ ಸ್ಥಗಿತಗೊಂಡಿದೆ. ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದ್ದು, ಕೃಷ್ಣಾ ನದಿಗೆ 1.17 ಲಕ್ಷ ಕ್ಯುಸೆಕ್‌ ನೀರು ಹರಿದುಬಂದಿದೆ. ಚಿಕ್ಕೋಡಿ ತಾಲ್ಲೂಕಿನಲ್ಲಿ ಮುಳುಗಿರುವ ಆರು ಸೇತುವೆಗಳು ಅದೇ ಸ್ಥಿತಿಯಲ್ಲಿವೆ.

ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಹರಿಯುವ ವರದಾ ನದಿಗೆ ಪ್ರವಾಹ ಬಂದಿದ್ದು, ಅಂದಾಜು 400 ಎಕರೆ ಭತ್ತದ ಗದ್ದೆ ನೀರಿನಲ್ಲಿ ಮುಳುಗಿದೆ. ಅಜ್ಜರಣಿ ಗ್ರಾಮಕ್ಕೆ ತೆರಳುವ ಸೇತುವೆಯ ಮೇಲೆ ಮೂರು ಅಡಿ ನೀರು ಹರಿಯುತ್ತಿದೆ.

‘ಸದ್ಯದಲ್ಲಿ ಯಾವುದೇ ಅಪಾಯದ ಪರಿಸ್ಥಿತಿ ಇಲ್ಲ. ಅಜ್ಜರಣಿ ಗ್ರಾಮಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ’ ಎಂದು ಮಂಗಳವಾರ ಪ್ರವಾಹಪೀಡಿತ ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ
ಪ್ರತಿಕ್ರಿಯಿಸಿದರು.

ಉತ್ತರ ಕನ್ನಡ ಜಿಲ್ಲೆ ಭಟ್ಕಳ ಪಟ್ಟಣದಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಕಟ್ಟಡದ ಒಂದು ಭಾಗ ಸೋಮವಾರ ಮಧ್ಯಾಹ್ನ ಕುಸಿದಿದೆ. ಯಾರಿಗೂ ಅಪಾಯವಾಗಿಲ್ಲ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರದಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಸಾಧಾರಣ ಮಳೆಯಾಗಿದೆ.

ಮುಳುಗಡೆ ಆತಂಕ: ಗರಿಷ್ಠ ಮಟ್ಟ ತಲುಪಿರುವ ಕೆಆರ್‌ಎಸ್‌ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರ ಹರಿಸುತ್ತಿದ್ದು, ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಹಾಗೂ ರಂಗನತಿಟ್ಟು ಪಕ್ಷಿಧಾಮ ಮುಳುಗಡೆಯಾಗುವ ಆತಂಕ ಎದುರಾಗಿದೆ.

ಜಲಾಶಯದ ನೀರಿನ ಮಟ್ಟ 123.5 ಅಡಿ ತಲುಪಿದ್ದು, 82,838 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಹೀಗಾಗಿ, ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬಲಮುರಿ ಬಳಿ ಧುಮ್ಮುಕ್ಕಿ ಹರಿಯುತ್ತಿರುವ ಕಾವೇರಿ ನದಿ ವೀಕ್ಷಣೆಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ದೊಡ್ಡ ಗೋಸಾಯಿಘಾಟ್‌ ಬಳಿ ಐತಿಹಾಸಿಕ ಮಂಟಪಗಳಿಗೆ ನೀರು ನುಗ್ಗಿದೆ.

ಗಂಜಿ ಕೇಂದ್ರ: ‘ಶ್ರೀರಂಗಪಟ್ಟಣ ತಾಲ್ಲೂಕಿನ ಹೋಬಳಿ ಕೇಂದ್ರಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರಕೃತಿ ವಿಕೋಪ ನಿರ್ವಹಣಾ ಮತ್ತು ರಕ್ಷಣಾ ಪಡೆಯನ್ನು ಕರೆಸಲಾಗಿದೆ’ ಎಂದು ತಹಶೀಲ್ದಾರ್‌ ಡಿ.ನಾಗೇಶ್‌ ತಿಳಿಸಿದರು.

ಗೌತಮ ಕ್ಷೇತ್ರ ನಡುಗಡ್ಡೆಯಲ್ಲಿ ಗಜಾನನ ಸ್ವಾಮೀಜಿ ಜತೆಗಿದ್ದ ಪಾಂಡವಪುರ ತಾಲ್ಲೂಕು ಕೆನ್ನಾಳು ಗ್ರಾಮದ ಚೇತನ್‌ ಎಂಬಾತನನ್ನು ತೆಪ್ಪದ ಸಹಾಯದಿಂದ ಈಚೆಗೆ ಕರೆ ತರಲಾಗಿದೆ.

ಆಲಮಟ್ಟಿಯಲ್ಲಿ ವಿದ್ಯುತ್‌ ಉತ್ಪಾದನೆ ಆರಂಭ: ಆಲಮಟ್ಟಿ ಜಲಾಶಯದಿಂದ, ವಿದ್ಯುತ್ ಉತ್ಪಾದನಾ ಘಟಕದ ಮೂಲಕ ಸೋಮವಾರ ನೀರನ್ನು ಹೊರಬಿಡಲಾಗಿದ್ದು, ವಿದ್ಯುತ್‌ ಉತ್ಪಾದನೆ ಆರಂಭವಾಗಿದೆ.

ಆರೂ ಘಟಕಗಳು ಕಾರ್ಯಾರಂಭ ಮಾಡಿದ್ದು, 290 ಮೆಗಾವಾಟ್‌ ವಿದ್ಯುತ್ ಉತ್ಪಾದನೆಯಾಗಿದೆ ಎಂದು ಕೆಪಿಸಿಎಲ್‌ ಆಲಮಟ್ಟಿ ಘಟಕದ ಸೂಪರಿಂಟೆಂಡಿಂಗ್‌ ಎಂಜಿನಿಯರ್ ಎಸ್‌.ಬಿ. ಬಿಸ್ಲಾಪುರ ಮಾಹಿತಿ ನೀಡಿದರು.

ಕೊಚ್ಚಿ ಹೋದ ವೆಸ್ಲಿ ಸೇತುವೆ

ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲ ಸಮೀಪ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ 200 ವರ್ಷಗಳ ಹಳೆಯದಾದ ವೆಸ್ಲಿ ಸೇತುವೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ.

ಭರಚುಕ್ಕಿ ಜಲಪಾತ ವೀಕ್ಷಿಸಲು ಸಾವಿರಾರು ಮಂದಿ ಭೇಟಿ ನೀಡಿದ್ದರಿಂದ ವೆಸ್ಲಿ ಹೊಸ ಸೇತುವೆ ಮಾರ್ಗದಲ್ಲಿ ವಾಹನ ದಟ್ಟಣೆ ಕಂಡುಬಂದಿತು. ಸುಮಾರು 2 ಕಿ.ಮೀ. ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ನೀರುಪಾಲಾದ ರೈತ

ಸಕಲೇಶಪುರ: ತಾಲ್ಲೂಕಿನ ಕಾಡಮನೆ ಸಮೀಪದ ನಟ್ಟಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನೀರಿನ ಸೆಳೆತಕ್ಕೆ ರೈತರೊಬ್ಬರು ಬಲಿಯಾಗಿದ್ದಾರೆ.

ಭತ್ತದ ಗದ್ದೆಯಿಂದ ಮನೆಗೆ ಬರುತ್ತಿದ್ದ ಸತೀಶ್‌ (45) ಹಳ್ಳ ದಾಟುವಾಗ ಆಯತಪ್ಪಿ ಬಿದ್ದು ನೀರು ಪಾಲಾಗಿದ್ದಾರೆ. ತಾಲ್ಲೂಕು ವ್ಯಾಪ್ತಿಯಲ್ಲಿ ಸೋಮವಾರ ಮಳೆಯ ಬಿರುಸು ಕಡಿಮೆಯಾಗಿದೆ.

ಗೋಡೆ ಕುಸಿದು ಸಾವು

ಧಾರವಾಡ: ತಾಲ್ಲೂಕಿನ ಮುಮ್ಮಿಗಟ್ಟಿಯಲ್ಲಿ ಸೋಮವಾರ ರಾತ್ರಿ ಮನೆಯೊಂದರ ಗೋಡೆ ಕುಸಿದು ಸೋಮಪ್ಪ ವರವಿ (55) ಎಂಬುವವರು ಮೃತಪಟ್ಟಿದ್ದಾರೆ. ಸುರಿಯುತ್ತಿದ್ದ ಮಳೆಯಿಂದ ರಕ್ಷಿಸಿಕೊಳ್ಳಲು ಅವರು ಮನೆಯ ಪಕ್ಕದಲ್ಲಿ ನಿಂತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.