ADVERTISEMENT

ಕೃಷ್ಣಾ ನದಿ ತೀರದಲ್ಲಿ ಹೈಅಲರ್ಟ್‌

ಗ್ರಾಮಗಳು ಜಲಾವೃತ l ಬೆಳಗಾವಿ ಜಿಲ್ಲೆಯ 25 ಸೇತುವೆಗಳು ಮುಳುಗಡೆ l ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 19:32 IST
Last Updated 4 ಆಗಸ್ಟ್ 2019, 19:32 IST
ಲೋಂಡಾ ಬಳಿ ರೈಲು ಹಳಿಯಡಿ ಮಣ್ಣು ಕುಸಿದಿದೆ     –ಪ್ರಜಾವಾಣಿ ಚಿತ್ರ
ಲೋಂಡಾ ಬಳಿ ರೈಲು ಹಳಿಯಡಿ ಮಣ್ಣು ಕುಸಿದಿದೆ     –ಪ್ರಜಾವಾಣಿ ಚಿತ್ರ   

ಬೆಂಗಳೂರು: ದಕ್ಷಿಣ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿಗೆ 2.22 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಆಲಮಟ್ಟಿ ಜಲಾಶಯದ ಹೊರಹರಿವನ್ನೂ 3.03 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ. ಇದು ಹನ್ನೊಂದು ವರ್ಷಗಳಲ್ಲಿ ಗರಿಷ್ಠ ಪ್ರಮಾಣವಾಗಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕೃಷ್ಣಾ ನದಿ ತೀರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ಕೊಯ್ನಾ ಜಲಾಶಯ ಬಹುತೇಕ ಭರ್ತಿಯಾಗಿದೆ. 6 ಗೇಟ್‍ಗಳಿಂದ 65 ಸಾವಿರ ಕ್ಯುಸೆಕ್‌, ರಾಜಾಪುರ ಬ್ಯಾರೇಜ್‌ನಿಂದ 1.96 ಲಕ್ಷ ಕ್ಯುಸೆಕ್ ಹಾಗೂ ದೂಧ್‌ಗಂಗಾ ನದಿಯಿಂದ 34 ಸಾವಿರ ಕ್ಯುಸೆಕ್‌ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿ ಸೇರುತ್ತಿದೆ. ಕೃಷ್ಣಾ ಮತ್ತು ಉಪನದಿಗಳು ಉಕ್ಕಿಹರಿಯುತ್ತಿರುವ ಪರಿಣಾಮ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಕೃಷ್ಣಾ ಪಾತ್ರದ ಗ್ರಾಮಗಳಲ್ಲಿ ಜನಜೀವನ ಅಕ್ಷರಶಃ ಅಸ್ತವ್ಯಸ್ತಗೊಂಡಿದೆ. ಕ್ಷಣಕ್ಷಣಕ್ಕೂ ನೀರಿನ ಮಟ್ಟ ಏರುತ್ತಿದ್ದು, ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ಎಕರೆ ಜಮೀನು ಮುಳುಗಡೆಯಾಗಿದೆ.

ಬೆಳಗಾವಿ ಹಾಗೂ ಖಾನಾಪುರದಲ್ಲಿ ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಖಾನಾಪುರ ತಾಲ್ಲೂಕಿನ ಲೋಂಡಾ ಬಳಿ ರೈಲು ಹಳಿ ಕೆಳಗೆ ಮಣ್ಣು ಕುಸಿದು ಸಂಚಾರ ಸ್ಥಗಿತಗೊಂಡಿದೆ. ಪ್ರವಾಹದಿಂದ ಬೆಳಗಾವಿ ಜಿಲ್ಲೆಯ 25 ಸೇತುವೆಗಳು ಮುಳುಗಡೆಯಾಗಿವೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಮಾರ್ಕಂಡೇಯ ನದಿ ಪ್ರವಾಹದಿಂದ ಗೋಕಾಕ ತಾಲ್ಲೂಕಿನ ಕುಂದರಗಿಯ ಅಡವಿಸಿದ್ದೇಶ್ವರ ಮಠ ಜಲಾವೃತವಾಗಿದೆ. ಮಠದಲ್ಲಿದ್ದ 15 ಜನರನ್ನು, ಚಿಕ್ಕೋಡಿ, ಅಥಣಿ, ರಾಯಬಾಗ ಹಾಗೂ ಕಾಗವಾಡ ತಾಲ್ಲೂಕುಗಳಿಂದ 850 ಮಂದಿ ನೆರೆ ಸಂತ್ರಸ್ತರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. 100ಕ್ಕೂ ಹೆಚ್ಚಿನ ಜಾನುವಾರುಗಳನ್ನು ದೋಣಿಗಳ ಮೂಲಕ ಸಾಗಿಸಲಾಯಿತು. 8 ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ.

ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿದ್ದು, ಬೈಲಹೊಂಗಲ ತಾಲ್ಲೂಕಿನ ತಿಗಡಿ ಹರಿನಾಲಾ ಜಲಾಶಯ ಭರ್ತಿಯಾಗಿದೆ.

ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಭಾನುವಾರ 2.71 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ. ಇದರಿಂದ ಮುದ್ದೇಬಿಹಾಳ ತಾಲ್ಲೂಕಿನ ಕೆಲವು ಗ್ರಾಮಗಳು ಮುಳುಗಡೆ ಭೀತಿಯಲ್ಲಿವೆ. ನಾರಾಯಣಪುರ ಜಲಾಶಯ ಹಿನ್ನೀರಿನ ಕೂಡಲಸಂಗಮ ಬಳಿಯಕೃಷ್ಣಾ–ಮಲಪ್ರಭಾ ನದಿಯ ಸಂಗಮದಲ್ಲಿ ಅಪಾಯ ಮಟ್ಟದಲ್ಲಿ ನದಿ ಹರಿಯುತ್ತಿದ್ದು, ಸಂಗಮನಾಥನ ದೇವಸ್ಥಾನದ ಬಳಿಗೆ ನೀರು ಬರಲು ಮೂರು ಮೆಟ್ಟಿಲು ಮಾತ್ರ ಬಾಕಿ ಉಳಿದಿದೆ.

ರಾಯಚೂರು ಜಿಲ್ಲೆ ದೇವಸೂಗೂರು ಗ್ರಾಮದ ಕೃಷ್ಣಾ ನದಿ ತೀರದ ಈಶ್ವರಮೂರ್ತಿ ಮತ್ತು ಬಸವೇಶ್ವರ ಮೂರ್ತಿಗಳು ಜಲಾವೃತವಾಗಿವೆ. ಲಿಂಗಸುಗೂರಿನಶೀಲಹಳ್ಳಿ ಹಾಗೂ ದೇವದುರ್ಗದ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಿವೆ. ರಾಯಚೂರು ತಾಲ್ಲೂಕಿನ ಕುರ್ವಕುಲಾ, ಕುರುಮಗಡ್ಡೆ ಗ್ರಾಮಗಳು ನಡುಗಡ್ಡೆಗಳಾಗಿವೆ. ಆಂಧ್ರಪ್ರದೇಶದ ಗುಂಟೂರಿನಿಂದ 30 ಜನರನ್ನೊಳಗೊಂಡ ಎನ್‌ಡಿಆರ್‌ಎಫ್‌ ತಂಡ ಬಂದಿದೆ. ಲಿಂಗಸುಗೂರಿನ ಶೀಲಹಳ್ಳಿ ಹಾಗೂ ದೇವದುರ್ಗದ ಹೂವಿನಹೆಡಗಿ ಸೇತುವೆಗಳು ಮುಳುಗಡೆಯಾಗಿವೆ.

ರೈಲು ಸಂಚಾರ ರದ್ದು: ನಿರಂತರ ಮಳೆ
ಯಿಂದ ಲೋಂಡಾ–ತೀನ್‌ಘಾಟ್‌ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿರುವ ಕಾರಣ ಭಾನುವಾರ ಮೀರಜ್‌–ಕ್ಯಾಸಲ್‌ರಾಕ್‌ ಪ್ಯಾಸೇಂಜರ್‌ ರೈಲಿನ ಬೆಳಗಾವಿ–ಕ್ಯಾಸಲ್‌ರಾಕ್‌ ನಡುವಿನ ಸಂಚಾರ ರದ್ದು ಪಡಿಸಲಾಗಿದೆ. ಕೊಲ್ಹಾಪುರ–ತಿರುಪತಿ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಭಾನುವಾರ ಕೊಲ್ಹಾ‍ಪುರ–ಮೀರಜ್‌ ನಡುವೆ ರದ್ದು ಮಾಡಲಾಗಿತ್ತು. ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಲ್‌– ವಿಜಯಪುರ ಪ್ಯಾಸೇಂಜರ್‌ ರೈಲಿನ ಸಂಚಾರವನ್ನು ಸೋಮವಾರ ರದ್ದು ಪಡಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಇಂಗಳಿ, ಮಾಂಜರಿ, ಯಡೂರ ಹಾಗೂ ಅಥಣಿಯಲ್ಲಿ ಪರಿಹಾರ ಕಾರ್ಯಾಚರಣೆಗೆ ಎಸ್‌ಡಿಆರ್‌ಎಫ್ ತಂಡದ 45 ಮಂದಿ, 30 ಬೋಟ್‌ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ತರಬೇತಿ ಪಡೆದ ಸೇನೆಯ 90 ಹಾಗೂ ಅಗ್ನಿಶಾಮಕ ದಳದ 75 ಸಿಬ್ಬಂದಿ ನಿಯೋಜಿಸಲಾಗಿದೆ
- ಲಕ್ಷ್ಮಣ ನಿಂಬರಗಿ, ಬೆಳಗಾವಿ ಎಸ್ಪಿ

***

ವೈಮಾನಿಕ ಸಮೀಕ್ಷೆ ಇಂದು

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆ. 5ರಂದು ಬೆಳಿಗ್ಗೆ 10 ಗಂಟೆಗೆ ತೋರಣಗಲ್ಲು ಜಿಂದಾಲ್ ಏರ್‌ಸ್ಟ್ರಿಪ್‌ಗೆ ಬರುವರು. ಅಲ್ಲಿಂದ ವಿಜಯಪುರ, ರಾಯಚೂರು, ಬಾಗಲಕೋಟೆ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುವರು.

ಮುಖ್ಯಾಂಶಗಳು

– ಸುರಕ್ಷಿತ ಸ್ಥಳಕ್ಕೆ 850 ಮಂದಿ ಸ್ಥಳಾಂತರ

– 8 ಕಡೆ ಗಂಜಿ ಕೇಂದ್ರಗಳು

– ಪರಿಹಾರ ಕಾರ್ಯಕ್ಕೆ ಸೇನೆ ಬಳಕೆ

– ವಿಪತ್ತು ನಿರ್ವಹಣಾ ತಂಡಗಳ ನಿಯೋಜನೆ

– ಗುಂಟೂರದಿಂದ ಎನ್‌ಡಿಆರ್‌ಎಫ್‌ ತಂಡದಿಂದ

– ಕೆಲವೆಡೆ ರೈಲು ಸಂಚಾರ ಭಾಗಶಃ ರದ್ದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.