ಬೆಂಗಳೂರು: ರಾಜ್ಯದಲ್ಲಿ ಬರಗಾಲ ಮರೆಯಾಗುವ ಎಲ್ಲ ಸೂಚನೆಗಳು ಕಂಡು ಬರುತ್ತಿವೆ. ಜೂನ್ 10ರ ಬಳಿಕ ಮುಂಗಾರು ಪ್ರವೇಶಿಸಲಿದ್ದು, ಉತ್ತಮ ಮಳೆಯಾಗುವ ಮುನ್ಸೂಚನೆಯೂ ಹವಾಮಾನ ಇಲಾಖೆಯಿಂದ ಬಂದಿದೆ. ಇದಕ್ಕೆ ಮುಖ್ಯ ಕಾರಣ ‘ಎಲ್ ನಿನೋ’ ವಾತಾವರಣ ಮುಗಿದು, ‘ಲಾ ನಿನಾ’ ಕಾಲಿಡುವುದಕ್ಕೆ ಪೂರಕವಾಗಿ ಪೆಸಿಫಿಕ್ ಸಾಗರದ ಮೇಲೆ ‘ತಟಸ್ಥ’ (ನ್ಯೂಟ್ರಲ್) ವಾತಾವರಣ ಸೃಷ್ಟಿಯಾಗಿದೆ.
ಎಲ್ ನಿನೊ ಇದ್ದಾಗ ಪೆಸಿಫಿಕ್ ಸಾಗರದ ಮೇಲ್ಮೈಯಲ್ಲಿ ತಾಪಮಾನ ಹೆಚ್ಚಾಗುತ್ತದೆ. ಲಾ ನಿನಾ ವಿದ್ಯಮಾನ ಆರಂಭಗೊಂಡಾಗ ಶೀತಲ ವಾತಾವರಣ ಸೃಷ್ಟಿಯಾಗುತ್ತದೆ. ಲಾ ನಿನಾದಿಂದ ಮಳೆ ಚೆನ್ನಾಗಿ ಆಗುತ್ತದೆ. ಕೆಲವೊಮ್ಮೆ ಅಧಿಕ ಮಳೆಯಾಗಿ ಪ್ರವಾಹ ಪರಿಸ್ಥಿತಿಯೂ ಉಂಟಾಗುತ್ತದೆ.
ಎಲ್ ನಿನೊ ನಿರ್ಗಮನದಿಂದ ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಲಾ ನಿನಾ ವಿದ್ಯಮಾನಕ್ಕೂ ಮುಂಚೆ ಇದೀಗ ತಟಸ್ಥ ವಾತಾವರಣ ಸೃಷ್ಟಿಯಾಗಿರುವುದು ಉತ್ತಮ ಬೆಳವಣಿಗೆ. ಜೂನ್‌ನಿಂದ ಆಗಸ್ಟ್‌ನಲ್ಲಿ ಲಾ ನಿನಾ ಪ್ರಕ್ರಿಯೆ ಆರಂಭವಾಗುವುದರಿಂದ ರಾಜ್ಯದಲ್ಲಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಲಾ ನಿನಾದ ಪರಿಣಾಮ ಜೂನ್ ಬಳಿಕ ಅಂದರೆ ಮುಂಗಾರಿನಲ್ಲೇ ಭಾರತದ ಹಲವು ರಾಜ್ಯಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿ ಪ್ರವಾಹದ ಸ್ಥಿತಿಯೂ ನಿರ್ಮಾಣವಾಗಬಹುದು ಎಂದು ಅಮೆರಿಕಾದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ ಕೇಂದ್ರ ಹೇಳಿದೆ.
ಈ ಹಿಂದೆ ಲಾ ನಿನಾ ಪ್ರಕ್ರಿಯೆ ಘಟಿಸಿದ ವರ್ಷಗಳಲ್ಲಿ ಭಾರತದಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಿತ್ತು. ಭಾರತದ ಹಲವು ರಾಜ್ಯಗಳಲ್ಲಿ ಅಧಿಕ ಪ್ರವಾಹವೂ ಸೃಷ್ಟಿಯಾಗಿತ್ತು. ಎಲ್ ನಿನೋ ಇದ್ದಾಗ ಬಿರು ಬೇಸಿಗೆ ಮತ್ತು ದುರ್ಬಲ ಮುಂಗಾರು ಕಟ್ಟಿಟ್ಟ ಬುತ್ತಿ. ಲಾ ನಿನಾ ಬಂದಾಗ ಪ್ರಬಲ ಮುಂಗಾರು, ವಾಡಿಕೆಗಿಂತ ಅಧಿಕ ಮಳೆ ಬೀಳಲಿದೆ ಎಂದು ತಜ್ಞರು ಹೇಳುತ್ತಾರೆ.
ಕಳೆದ ಕೆಲವು ದಿನಗಳಿಂದ ಆಗಿರುವ ಮಳೆ ವಾತಾವರಣವನ್ನು ಸ್ವಲ್ಪ ಮಟ್ಟಿಗೆ ತಂಪು ಮಾಡಿದೆ. ಬಿರು ಬೇಸಿಗೆಯಿಂದ ಕಾದು ಕಾವಲಿಯಂತಾಗಿದ್ದ ಭೂಮಿಯನ್ನೂ ಕೊಂಚ ಮಟ್ಟಿಗೆ ತಣಿಸಿದೆ. ಆದರೆ, ಇದರಿಂದ ಹೆಚ್ಚಿನ ಪರಿಣಾಮ ಆಗಿಲ್ಲ ಎನ್ನುತ್ತಾರೆ ಕರ್ನಾಟಕ ರಾಜ್ಯ ನಿಸರ್ಗ ವಿಕೋಪ ಉಸ್ತುವಾರಿ ಕೇಂದ್ರದ ಮಾಜಿ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ.
ಅಚ್ಚುಕಟ್ಟು ಪ್ರದೇಶಗಳಲ್ಲಿ 100ರಿಂದ 200 ಮಿ.ಮೀ ಮಳೆಯಾದರಷ್ಟೇ ಜಲಾಶಯಗಳಿಗೆ ಒಳಹರಿವು ಆರಂಭವಾಗಲು ಸಾಧ್ಯ. ಇತ್ತೀಚಿನ ಮಳೆಯಿಂದ ಕೆರೆ– ಕಟ್ಟೆಗಳಿಗೇ ನೀರು ಹರಿದಿಲ್ಲ. ಇದಕ್ಕೆ ಬಿಸಿಲಿನ ಪ್ರಮಾಣ ಜಾಸ್ತಿಯಾಗಿರುವುದೇ ಕಾರಣ ಎಂದು ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.