ADVERTISEMENT

ರಾಜ್ಯದ ಕೆಲವೆಡೆ ಧಾರಾಕಾರ ಮಳೆ: ಬಾಲಕ ಸೇರಿ ಮೂವರ ಸಾವು

ಹೊಲಗಳು ಜಲಾವೃತ, ಬೆಳೆಗಳಿಗೆ ಹಾನಿ * ಕೋಡಿ ಬಿದ್ದ ಕೆರೆಗಳು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 1:05 IST
Last Updated 18 ಅಕ್ಟೋಬರ್ 2024, 1:05 IST
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕು ಬ್ಯಾಲಹುಣ್ಸಿಯಲ್ಲಿ ಮಳೆಯಿಂದ ಭತ್ತದ ಬೆಳೆ ಹಾನಿಗೊಂಡಿರುವುದು  ಪ್ರಜಾವಾಣಿ ಚಿತ್ರ
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕು ಬ್ಯಾಲಹುಣ್ಸಿಯಲ್ಲಿ ಮಳೆಯಿಂದ ಭತ್ತದ ಬೆಳೆ ಹಾನಿಗೊಂಡಿರುವುದು  ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ/ದಾವಣಗೆರೆ: ಬೆಳಗಾವಿ, ದಾವಣಗೆರೆ, ಹಾವೇರಿ, ಉತ್ತರಕನ್ನಡ ಅಲ್ಲದೆ ರಾಜ್ಯದ ಕೆಲವೆಡೆ ಬುಧವಾರ ರಾತ್ರಿ ಮತ್ತು ಗುರುವಾರ ಧಾರಾಕಾರ ಮಳೆ ಆಗಿದೆ. ಹೊಲಗಳು ಜಲಾವೃತವಾಗಿದ್ದರೆ, ಮಳೆ ಅನಾಹುತಗಳಿಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ಬಾಲಕ ಸೇರಿದಂತೆ ಐವರು ಮೃತಪಟ್ಟಿದ್ದಾರೆ.

ದಾವಣಗೆರೆಯಲ್ಲಿ ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ಕಟಾವಿಗೆ ಬಂದಿರುವ ಬೆಳೆಗಳಿಗೆ ಹಾನಿಯಾಗಿದೆ. ನಿರಂತರ ವರ್ಷಧಾರೆಯಿಂದಾಗಿ ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಹೋಬಳಿ ವ್ಯಾಪ್ತಿಯ ಈಚಲನಾಗೇನಹಳ್ಳಿ ಗ್ರಾಮದಲ್ಲಿ ಗುರುವಾರ ಮನೆ ಕುಸಿದು ರಂಗಮ್ಮ (75) ಮೃತಪಟ್ಟಿದ್ದಾರೆ. 

ಹಾವೇರಿಯ ಹಳೇ ಪಿ.ಬಿ.ರಸ್ತೆ ಬದಿಯ ಕಾಲುವೆಯಲ್ಲಿ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಹೋಗಿ ನಿವೇದನ್ ಗುಡಗೇರಿ (9) ಮೃತಪಟ್ಟಿದ್ದಾನೆ.

ADVERTISEMENT

‘ಹಳೇ ಪಿ.ಬಿ. ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಎರಡು ಬದಿಯಲ್ಲೂ ಮೂರು ಅಡಿಯಷ್ಟು ಹಳ್ಳದಂತೆ ನೀರು ಹರಿಯುತ್ತಿತ್ತು. ಶಿವಾಜಿನಗರದ 3ನೇ ಕ್ರಾಸ್‌ನಲ್ಲಿ ಪೋಷಕರ ಜೊತೆ ನೆಲೆಸಿದ್ದ ನಿವೇದನ್, ಸ್ನೇಹಿತರ ಜೊತೆ ಗುರುವಾರ ಬೆಳಿಗ್ಗೆ ಸ್ಥಳಕ್ಕೆ ಹೋಗಿದ್ದ. ಆಗ ಆಯತಪ್ಪಿ ಕಾಲುವೆಯೊಳಗೆ ಬಿದ್ದು ಅಸುನೀಗಿದ್ದಾನೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಕಾರ್ಯಾಚರಣೆ ನಡೆಸಿದಾಗ ಆತನ ಮೃತದೇಹ ಪತ್ತೆಯಾಯಿತು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು. 

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ನೊಗನಿಹಾಳ ಗ್ರಾಮದ ಬಳಿ ಘಟಪ್ರಭಾ ನದಿ ಸೇತುವೆ ಮೇಲೆ ಹೊರಟಿದ್ದ ಬೈಕ್‌ ನದಿಗೆ ಬಿದ್ದು ದಂಪತಿ ಮೃತಪಟ್ಟಿದ್ದಾರೆ. ಚಿಕ್ಕೋಡಿ ತಾಲ್ಲೂಕಿನ ಪೊಗತ್ಯಾನಟ್ಟಿ ಗ್ರಾಮದ ಜಯಶ್ರೀ ಸುರೇಶ ಬಡಿಗೇರ (45) ಶವ ಪತ್ತೆಯಾಗಿದೆ. ಅವರ ಪತಿ ಸುರೇಶ ಗುಂಡಪ್ಪ ಬಡಿಗೇರ (54) ನೀರುಪಾಲಾಗಿದ್ದಾರೆ.

‘ಘೋಡಗೇರಿ ಗ್ರಾಮದಿಂದ ಚಿಕ್ಕೋಡಿ ತಾಲ್ಲೂಕಿನ ಪೊಗತ್ಯಾನಟ್ಟಿ ಗ್ರಾಮಕ್ಕೆ ದಂಪತಿ ಬೈಕ್ ಮೇಲೆ ತೆರಳುತ್ತಿದ್ದರು. ಸೇತುವೆ ಮೇಲೆ ಎದುರಿಗೆ ಬಂದ ವಾಹನಕ್ಕೆ ದಾರಿ ಬಿಡುವಾಗ, ಬೈಕ್‌ ಜಾರಿ ನದಿಗೆ ಬಿತ್ತು. ಮಳೆ ಕಾರಣ ನದಿ ನೀರು ರಭಸವಾಗಿ ಹರಿಯುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕ ನಾಪತ್ತೆ: ಬೈಲಹೊಂಗಲ ತಾಲ್ಲೂಕಿನ ನೇಸರಗಿ ಗ್ರಾಮದ ಬಳಿ ಬುಧವಾರ ಸಂಜೆ ಹಳ್ಳಕ್ಕೆ ಸಿಲುಕಿದ ಕರಡಿಗುದ್ದಿ ಗ್ರಾಮದ ಯಲ್ಲಪ್ಪ ಡಿ. ಬೋರಣ್ಣವರ ಎಂಬುವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.ಮೋರೆ ಗ್ರಾಮದಿಂದ ಕರಡಿಗುದ್ದಿಗೆ ಮರಳುತ್ತಿದ್ದ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಗಳೂರು ತಾಲ್ಲೂಕಿನ ಜಿನಗಿ ಹಳ್ಳ ತುಂಬಿ‌ ಹರಿಯುತ್ತಿದೆ. ಕೆರೆ ಕೋಡಿ ಹರಿದು ಹಿರೇಮಲ್ಲನಹೊಳೆ ಗ್ರಾಮ ಜಲಾವೃತಗೊಂಡಿದೆ. ಕಾಳಜಿ‌ ಕೇಂದ್ರದಲ್ಲಿ 40 ಕುಟುಂಬಗಳು ಆಶ್ರಯ ಪಡೆದಿವೆ. ದಾವಣಗೆರೆಯಲ್ಲಿ 6 ಸೆಂ.ಮೀ, ಹರಿಹರ ಹಾಗೂ ಜಗಳೂರು ತಾಲ್ಲೂಕಿನಲ್ಲಿ ತಲಾ 4 ಸೆಂ.ಮೀ ಮಳೆ ಬಿದ್ದಿದೆ. 

ವಿವಿಧೆಡೆ ಬೆಳೆ ಹಾನಿ (ಚಿತ್ರದುರ್ಗ ವರದಿ): ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಕೆರೆ, ಕಟ್ಟೆಗಳ ಕೋಡಿ ಬಿದ್ದಿದ್ದು, ಬೆಳೆ ಹಾನಿಯಾಗಿದೆ. ತಾಲ್ಲೂಕಿನ ಕೊಡಗವಳ್ಳಿ ಗ್ರಾಮದ ಕೆರೆ ತುಂಬಿ, ಏರಿಯ ಒಂದು ಭಾಗ ಕುಸಿದು ಅಪಾರ ಪ್ರಮಾಣದ ನೀರು ಹೊರಗೆ ಹರಿಯುತ್ತಿದೆ. ಏರಿ ಒಡೆಯುವ ಭೀತಿ ಸೃಷ್ಟಿಯಾಗಿದ್ದು, ಸ್ಥಳೀಯರು ಕಲ್ಲುಗಳನ್ನು ತಂದು ಏರಿಗೆ ತುಂಬಿದ್ದಾರೆ. ಆ ಮೂಲಕ ತಾತ್ಕಾಲಿಕವಾಗಿ ನೀರಿನ ಹೊರಹರಿವು ಕಡಿಮೆ ಮಾಡಿದ್ದಾರೆ. 

ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಹೋಬಳಿ ವ್ಯಾಪ್ತಿಯಲ್ಲಿ 4 ಮನೆಗಳು ಕುಸಿದಿವೆ. ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯಲ್ಲಿ 4 ಮನೆ, ಕಸಬಾ 3 ಮನೆ, ಧರ್ಮಪುರ ಹೋಬಳಿ ವ್ಯಾಪ್ತಿಯಲ್ಲಿ 3 ಮನೆ ಕುಸಿದಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ.

ಹುಬ್ಬಳ್ಳಿ ವರದಿ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ, ಅರಸೀಕೆರೆ ಭಾಗದಲ್ಲಿ ನೂರಾರು ಎಕರೆ ಭತ್ತದ ಫಸಲು ನಾಶವಾಗಿದೆ. ಹೂವಿನಹಡಗಲಿ ತಾಲ್ಲೂಕಿನ ಹಿರೇಬನ್ನಿಮಟ್ಟಿ, ಮಕರಬ್ಬಿ, ಬ್ಯಾಲಹುಣ್ಸಿ ಗ್ರಾಮಗಳಲ್ಲಿ 60 ಎಕರೆ ಭತ್ತದ ಬೆಳೆ ನೆಲಕ್ಕೆ ಬಿದ್ದು ಹಾನಿಯಾಗಿದೆ. ಹೀರೆಮೆಗಳಗೇರೆ ಸ್ಮಶಾನ ಜಲಾವೃತಗೊಂಡಿದೆ. ಕುರೆಮಾಗನಹಳ್ಳಿ ಕೆರೆ ಕೋಡಿಬಿದ್ದು ಮೆಕ್ಕೆಜೋಳ ಬೆಳೆ ನಾಶವಾಗಿದೆ. 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ತುಂಗಭದ್ರಾ ಅಣೆಕಟ್ಟೆಯಿಂದ 17 ಸಾವಿರ ಕ್ಯುಸೆಕ್‌ ನೀರನ್ನು ಮೂರು ಗೇಟ್‌ಗಳ ಮೂಲಕ ನದಿಗೆ ಹರಿಸ
ಲಾಗುತ್ತಿದೆ. ಜಲಾಶಯದ ಒಳಹರಿವಿನ ಪ್ರಮಾಣ 28,607 ಕ್ಯುಸೆಕ್‌ ಇದೆ.

ಬಳ್ಳಾರಿ ಜಿಲ್ಲೆ ತೆಕ್ಕಲಕೋಟೆ ಯಲ್ಲಿ ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದ ಭತ್ತದ ಬೆಳೆ ನೆಲಕಚ್ಚಿದೆ. ಸಿರುಗುಪ್ಪ ತಾಲೂಕಿನ ನಿಟ್ಟೂರು, ರುದ್ರಪಾದ, ನಡವಿ, ಉಡುಗೋಳ, ದೇವಿನಗರ, ಬಲಕುಂದಿ ಕರೂರು ಹೋಬಳಿಯ ಹಲವು ಪ್ರದೇಶಗಳಲ್ಲಿ ಬೆಳೆ ಗಾಳಿ ಮಳೆಗೆ ಭೂಮಿಗೆ ಒರಗಿವೆ. 

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ದಾಂಡೇಲಿ, ಹಳಿಯಾಳ, ಮುಂಡಗೋಡ ಭಾಗದಲ್ಲಿ ರಭಸದ
ಮಳೆ ಆಗಿದೆ. ಹಳಿಯಾಳ, ಮುಂಡಗೋಡ ಭಾಗದಲ್ಲಿ ಕಾಳು ಬಿಟ್ಟು ಕೊಯ್ಲು ಹಂತದಲ್ಲಿರುವ ಭತ್ತದ ಪೈರು ನೆಲಕ್ಕುರುಳಿವೆ. ನಿರಂತರ ಮಳೆಯಿಂದ ಗೋವಿನಜೋಳಕ್ಕೂ ಹಾನಿಯಾಗಿದೆ.

ಗದಗ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದ್ದು ಮುಂಡರಗಿ ಮತ್ತು ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ರಭಸದ ಮಳೆ ಸುರಿದಿದೆ. ಧಾರವಾಡ ನಗರ ಸೇರಿ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ.

ಬೆಳಗಾವಿ ನಗರ, ತಾಲ್ಲೂಕು, ಸವದತ್ತಿ, ಚಿಕ್ಕೋಡಿ, ಬೈಲಹೊಂಗಲ ಮುಂತಾದ ಕಡೆ ಧಾರಾಕಾರ ಮಳೆ ಮುಂದುವರಿಯಿತು.

ಕೊಪ್ಪಳ ವರದಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಸುರಿಯಿತು. ಬೆಳಿಗ್ಗೆಯಿಂದಲೇ ಜಿಟಿಜಿಟಿ ಮಳೆ ಸುರಿಯಿತು. ಇದರಿಂದಾಗಿ ಕೆಲಸಕ್ಕೆ ಹೋಗುವವರು ಪರದಾಡಿ ಜನಜೀವನ ಅಸ್ತವ್ಯಸ್ತ
ವಾಯಿತು. ಇತ್ತೀಚೆಗೆ ಸುರಿದ ನಿರಂತರ ಮಳೆಗೆ 350 ಹೆಕ್ಟೇರ್‌ ಬೆಳೆಗೆ ಹಾನಿಯಾಗಿದೆ.

ಉತ್ತಮ ಮಳೆ: ಕೆಆರ್‌ಎಸ್‌ ಮತ್ತೆ ಭರ್ತಿ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಐದಾರು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ, ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್‌.ಎಸ್‌. ಜಲಾಶಯ ಇದೇ ವರ್ಷದಲ್ಲಿ ಮೂರನೇ ಬಾರಿಗೆ ಭರ್ತಿಯಾಗಿದ್ದು, ಗರಿಷ್ಠ ನೀರಿನ ಮಟ್ಟ 124.80 ಅಡಿ ತಲುಪಿದೆ. 

ಜಲಾಶಯದಲ್ಲಿ ಪ್ರಸ್ತುತ 49.852 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ. ಒಳಹರಿವು 8,547 ಕ್ಯುಸೆಕ್‌, ಹೊರಹರಿವು 8,287 ಕ್ಯುಸೆಕ್‌ ಇದೆ.

‘ಈ ಬಾರಿ ವಾಡಿಕೆಯಷ್ಟು ಮಳೆಯಾಗಿದೆ. ಜಲಾಶಯ ಕೂಡ ಭರ್ತಿಯಾಗಿದೆ. ಬೇಸಿಗೆಯಲ್ಲಿ ನೀರಿನ ಕೊರತೆ ಕಾಡುವುದಿಲ್ಲ ಮತ್ತು ಬೇಸಿಗೆ ಬೆಳೆಗೂ ಸಮಸ್ಯೆಯಾಗುವುದಿಲ್ಲ’ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. 

ಜಲಾಶಯ ಭರ್ತಿಯಾಗಿದ್ದರಿಂದ, ಜುಲೈ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಾಗಿನ ಅರ್ಪಿಸಿದ್ದರು.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಿರೇಮೆಗಳಗೆರೆ ಕೆರೆ ಕೋಡಿಬಿದ್ದು ಹರಿಯುತ್ತಿರುವುದು  –ಪ್ರಜಾವಾಣಿ ಚಿತ್ರ
ವಿಜಯನಗರ ಜಿಲ್ಲೆ ಅರಸೀಕೆರೆ ಹೋಬಳಿಯ ಅರೆ ಬಸಾಪುರ ಗ್ರಾಮದ ಸುತ್ತಮುತ್ತ ನೂರು ಎಕರೆಯಲ್ಲಿ ಬೆಳೆದ ಭತ್ತದ ಬೆಳೆ ಮಳೆ ನೀರಿನಿಂದ ಹಾನಿಗೊಂಡಿರುವುದು   –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.