ADVERTISEMENT

ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ BJPಯಿಂದ ಜೂನ್ 6 ಕ್ಕೆ ರಾಜಭವನ ಚಲೋ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 16:00 IST
Last Updated 3 ಜೂನ್ 2024, 16:00 IST
ಸಚಿವ ಬಿ. ನಾಗೇಂದ್ರ
ಸಚಿವ ಬಿ. ನಾಗೇಂದ್ರ   

ಬೆಂಗಳೂರು: ಇದೇ 6ರೊಳಗೆ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಪಡೆಯದೇ ಇದ್ದರೆ, ಅದೇ ದಿನ  ರಾಜ್ಯಭವನಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ರಾಜ್ಯ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಹೇಳಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿರೋಧಪಕ್ಷದ ನಾಯಕ ಆರ್‌. ಅಶೋಕ ಅವರ ನೇತೃತ್ವದಲ್ಲಿ ಕಾಲ್ನಡಿಗೆ ನಡೆಯಲಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮುಖ್ಯಮಂತ್ರಿಯವರ ಮೂಗಿನಡಿಯೇ ಪರಿಶಿಷ್ಟ ಪಂಗಡದ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ. ಆರ್ಥಿಕ ಇಲಾಖೆಯ ಸಹಮತ ಇಲ್ಲದೇ ಇಷ್ಟು ದೊಡ್ಡ ಮೊತ್ತ ವರ್ಗಾವಣೆ ಆಗಲು ಸಾಧ್ಯವಿಲ್ಲ. ತೆಲಂಗಾಣದ ಚುನಾವಣೆಗಾಗಿ ಈ ಹಣವನ್ನು ವರ್ಗಾಯಿಸಲಾಗಿದೆ ಎಂಬ ಆರೋಪವಿದೆ. ಆದ್ದರಿಂದ ಸಚಿವ ನಾಗೇಂದ್ರ  ರಾಜೀನಾಮೆ ನೀಡಬೇಕು ಎಂದರು.

ADVERTISEMENT

ಖಜಾನೆ 2ರಿಂದ ಅನುದಾನ ನೇರವಾಗಿ ಫಲಾನುಭವಿಗಳ ಖಾತೆಗೆ ಹೋಗಬೇಕಿತ್ತು. ಅದು ಹೇಗೆ ನಿಗಮಕ್ಕೆ ವರ್ಗಾವಣೆ ಆಗಿದೆ. ಆರ್ಥಿಕ ಇಲಾಖೆ ಅಧಿಕಾರಿಗಳು ಹೇಗೆ ಶಾಮೀಲಾದರು?  ಆರ್ಥಿಕ ಇಲಾಖೆ ಅಧಿಕಾರಿಗಳು ಯಾರ ಸೂಚನೆ ಮೇರೆಗೆ ಈ ವರ್ಗಾವಣೆ ಮಾಡಿದ್ದಾರೆ? ಈ ವರ್ಗಾವಣೆಯ ಮಸಿ ಸಿದ್ದರಾಮಯ್ಯ ಅವರಿಗೂ ಅಂಟಿಕೊಂಡಿದೆ. ಚುನಾವಣೆಗೆ ಬಳಸಲೆಂದೇ ಈ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂದು ರಾಜೀವ್‌ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.