ಬೆಂಗಳೂರು: ‘ರಾಜಭವನವನ್ನು ಅತಿ ಹೆಚ್ಚು ಬಾರಿ ದುರುಪಯೋಗ ಮಾಡಿಕೊಂಡ ಶ್ರೇಯಸ್ಸು ಕಾಂಗ್ರೆಸ್ಸಿನದ್ದು. ದೇಶದ ಇತಿಹಾಸದಲ್ಲಿ 56 ಬಾರಿ ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರಗಳನ್ನು ಕಾಂಗ್ರೆಸ್ ಉರುಳಿಸಿದೆ’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಂಸರಾಜ್ ಭಾರದ್ವಾಜ್ ಅವರು ರಾಜ್ಯಪಾಲರಾಗಿದ್ದಾಗ ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ತನಿಖೆಗೆ ಆದೇಶಿಸಿದ್ದರು. ಆದರೆ ಈಗ ಆ ಪ್ರಕರಣ ಬಿದ್ದುಹೋಗಿದೆ. ಕಾಂಗ್ರೆಸ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳುತ್ತದೆಯೇ’ ಎಂದು ಪ್ರಶ್ನಿಸಿದರು.
ಯಾದಗಿರಿ ಪಿಎಸ್‌ಐ ಸಾವಿನ ಬಗ್ಗೆ ಕೇಳಿದ ಪ್ರಶ್ನೆಗೆ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೇ ವರ್ಗಾವಣೆ ದಂಧೆ ಆರಂಭವಾಗಿದೆ. ವರ್ಗಾವಣೆಯಲ್ಲಿಯೇ ದುಡ್ಡು ಮಾಡುವಂತೆ ಶಾಸಕರಿಗೆ ಸೂಚನೆ ನೀಡಲಾಗಿದೆ. ಭ್ರಷ್ಟಾಚಾರಕ್ಕೆ ಸಾಂಸ್ಥಿಕ ರೂಪ ನೀಡಲಾಗಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.