ADVERTISEMENT

ರಾಜಾ ವೆಂಕಟಪ್ಪ ನಾಯಕ ಸಮಾಧಿ ಪತ್ತೆ

ಭೀಮರಾಯನಗುಡಿ ಸಂಶೋಧನಾ ಕೇಂದ್ರದಿಂದ ಶೋಧ

ಟಿ.ನಾಗೇಂದ್ರ
Published 25 ನವೆಂಬರ್ 2019, 2:24 IST
Last Updated 25 ನವೆಂಬರ್ 2019, 2:24 IST
ಸುರಪುರ ಸಂಸ್ಥಾನ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ
ಸುರಪುರ ಸಂಸ್ಥಾನ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ   

ಶಹಾಪುರ: 1857ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದ ನೇತೃತ್ವ ವಹಿಸಿದ್ದ ಸುರಪುರ ಸಂಸ್ಥಾನದ ರಾಜಾ ವೆಂಕಟಪ್ಪ ನಾಯಕ (1843-1858) ಅವರ ಸಮಾಧಿ ಸಿಕಂದರಬಾದ್‌ನಲ್ಲಿ ಸೈನಿಕರು ವಾಸಿಸುವ ಪ್ರದೇಶದಲ್ಲಿ ಇದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಭೀಮರಾಯನಗುಡಿಯ ಸುರಪುರ ಸಂಸ್ಥಾನ ಇತಿಹಾಸ ಸಂಶೋಧನಾ ಕೇಂದ್ರ ಇದನ್ನು ಪತ್ತೆ ಮಾಡಿದೆ.

ರಾಜಾ ವೆಂಕಟಪ್ಪ ನಾಯಕ ಸಾವಿನ ಬಗ್ಗೆ ಇತಿಹಾಸಕಾರರು ನಿಖರವಾಗಿ ನಮೂದಿಸಿಲ್ಲ. ರಾಜನದು ಕೊಲೆಯೋ, ಆತ್ಮಹತ್ಯೆಯೋ ಎಂಬುದು ಇಂದಿಗೂ ನಿಗೂಢವಾಗಿದೆ.

ADVERTISEMENT

‘ಅಂದಿನ ಬ್ರಿಟಿಷ್ ಅಧಿಕಾರಿ ಮೇಡೋಸ್ ಟೇಲರ್‌ ಆತ್ಮಕಥೆಯಲ್ಲಿ ರಾಜರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಮೂದಿಸಿದ್ದಾರೆ. ಆದರೆ, ಬ್ರಿಟಿಷರು ರಾಜನನ್ನು ಸಿಕಂದರಬಾದ್‌ನ ಅಂಬಾರಪೇಟದ ಅಜ್ಞಾತ ಸ್ಥಳದಲ್ಲಿ ಕೊಲೆ ಮಾಡಿ ಸಮಾಧಿ ಮಾಡಿದ್ದಾರೆ ಎಂಬ ಮಾಹಿತಿ ಇತ್ತು. ತೆಲಂಗಾಣದ ಇತಿಹಾಸಕಾರ ಡಾ.ದಯಾನಂದ ಅವರ ನೆರವಿನಿಂದ ಸಮಾಧಿ ಪತ್ತೆ ಹೆಚ್ಚಿದ್ದೇವೆ’ ಎನ್ನುತ್ತಾರೆ ಸಂಶೋಧನಾ ಕೇಂದ್ರದ ಸಂಚಾಲಕ ಭಾಸ್ಕರರಾವ ಮುಡಬೂಳ ಅವರು.

ಸಿಕಂದರಾಬಾದ್‌ನಲ್ಲಿ ಇರುವ ಸಿಮೆಟ್ರಿ–12ರ ಕೇಂದ್ರ ಸ್ಥಳ

‘ಸಿಕಂದರಬಾದ್‌ಗೆ ತೆರಳಿದಾಗ ಅಂದು ರಾಜನನ್ನು ಜೈಲಿನಲ್ಲಿ ಇರಿಸಿದ ಸ್ಥಳ ಮತ್ತು ಅವರ ದೇಹದ ಪೋಸ್ಟ್ ಮಾರ್ಟಮ್‌ (ಶವ ಪಂಚನಾಮೆ) ಮಾಡಿದ ಆಸ್ಪತ್ರೆ ಮತ್ತು ದೊಡ್ಡದಾದ ಸ್ಮಶಾನ ಭೂಮಿ ಅಕ್ಕಪಕ್ಕದಲ್ಲಿ ಇರುವುದು ಕಂಡುಬಂತು. ಸಿಕಂದರಬಾದ್‌ನಲ್ಲಿ ಅಂದು ಬ್ರಿಟಿಷ್‌ ಸೈನಿಕರು ಉಪಯೋಗಿಸುತ್ತಿದ್ದ 10 ಕಿ.ಮೀ ಪ್ರದೇಶವಿದೆ. ಅದು ಇಂದು ಕೂಡಾ ನಮ್ಮ ಸೈನಿಕರು ವಾಸಿಸುವ ಸ್ಥಳವಾಗಿದೆ’ ಎನ್ನುತ್ತಾರೆ ಅವರು.

‘ಇತಿಹಾಸಕಾರರು ಹೇಳುವ ಪ್ರಕಾರ ರಾಜನನ್ನು ಅಂಬಾರಪೇಟದಲ್ಲಿ ಕೊಲ್ಲಿಸಿದ ನಂತರ ಶವವನ್ನು ಪಂಚನಾಮೆ ಮಾಡಲು ಇಲ್ಲಿನ ಆಸ್ಪತ್ರೆಗೆ ತಂದಿದ್ದಾರೆ. ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿರುವ
ಸ್ಮಶಾನ (ಸಿಮೆಟ್ರಿ–12) ದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಅದರಲ್ಲಿ ವ್ಯಕ್ತಿಯ ಹೆಸರು, ವಿವರವಾದ ಮಾಹಿತಿಯನ್ನು ದಾಖಲಿಸಿದ್ದಾರೆ’ ಎಂದು ವಿವರಿಸಿದರು.

‘161 ವರ್ಷದ ಹಳೆಯ ದಾಖಲೆ ಇದಾಗಿದೆ. ಅಲ್ಲದೆ ದಾಖಲೆಯನ್ನು ಪಡೆಯಲು ಸೈನಿಕ ಅಧಿಕಾರಿಗಳ ಪರವಾನಗಿಬೇಕು. ಅದಕ್ಕಾಗಿ ದಾಖಲೆ ನೀಡುವಂತೆ ಅರ್ಜಿಯನ್ನು ಸಲ್ಲಿಸಿದ್ದೇವೆ’ ಎನ್ನುತ್ತಾರೆ ಭಾಸ್ಕರರಾವ ಮುಡಬೂಳ.

ರಾಜಾ ವೆಂಕಟಪ್ಪ ನಾಯಕ ಅವರ ಸಮಾಧಿ, ಪೋಸ್ಟ್‌ ಮಾರ್ಟಮ್‌ ವರದಿ ಬಳಿಕ ರಾಜನ ಸಾವಿನ ಗೊಂದಲ ನಿವಾರಣೆ ಆಗಲಿದೆ ಎನ್ನುವುದು ಅವರ ವಿಶ್ವಾಸ.

ಸಿಕಂದರಾಬಾದ್‌ನಲ್ಲಿರುವ ರಾಜರ ಸಮಾಧಿಯ ಸ್ಥಳ

ಇತಿಹಾಸದಲ್ಲಿ ಸುರಪುರ ಅಜರಾಮರ

ಸುರಪುರ ಸಂಸ್ಥಾನವು ಎರಡು ಕಾರಣಕ್ಕಾಗಿ ದೇಶದ ಭೂಪಟದಲ್ಲಿ ಗಮನ ಸೆಳೆದಿದೆ. ಮೊದನೆಯದು ದೆಹಲಿ ಸಾಮ್ರಾಟ್ ಔರಂಗಜೇಬನನ್ನು ಕ್ರಿ.ಶ 1705ರಲ್ಲಿ ಸುರಪುರದ ಮೇಲೆ ದಾಳಿ ಮಾಡಿದಾಗ ಅಂದಿನ ರಾಜಾ ಪಿತಂಬರಿ ಬಹರಿ ಪಿಡ್ಡ ನಾಯಕ ಯುದ್ಧದಲ್ಲಿ ಸೋಲಿಸಿದ್ದು. ಎರಡನೇಯದು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದ ನೇತೃತ್ವವನ್ನು ರಾಜಾ ವೆಂಕಟಪ್ಪ ನಾಯಕ ವಹಿಸಿ ಬ್ರಿಟಿಷರ ವಿರುದ್ಧ ತಾಯಿನಾಡಿಗಾಗಿ ಹೋರಾಟ ನಡೆಸಿದ್ದು.

ಹೋರಾಟದ ರೋಚಕ ಕಥನದ ಭಾಗವಾಗಿ ಗತಕಾಲದ ನೆನಪಿನಲ್ಲಿ ವರ್ತಮಾನದ ರೂಪದಲ್ಲಿ ಭವಿಷ್ಯದ ಹೆಜ್ಜೆ ಇಡುವ ಉದ್ದೇಶದಿಂದ ದಶಕ ದಿಂದ ಭೀಮರಾಯನಗುಡಿಯ ಸುರಪುರ ಇತಿಹಾಸ ಸಂಶೋಧನಾ ಕೇಂದ್ರವು ‘ಸುರಪುರ ವಿಜಯೋತ್ಸವ ಕಾರ್ಯಕ್ರಮ’ ಹಮ್ಮಿಕೊಳ್ಳುತ್ತಾ ಬಂದಿದೆ.

ಸುರಪುರ ಸಂಸ್ಥಾನದಲ್ಲಿ 1656ರಿಂದ1858ರವರೆಗೆ ಅಂದರೆ 202ವರ್ಷಗಳ ಕಾಲ ಗೋಸಾಲ ವಂಶದ 13 ಮಹಾರಾಜರು ರಾಜ್ಯಭಾರ ಮಾಡಿದ್ದಾರೆ. ಸಂಸ್ಥಾನದ ಸಮಗ್ರ ಮಾಹಿತಿಯನ್ನು ಕಲೆ ಹಾಕುವ ಕಾರ್ಯವನ್ನುಭೀಮರಾಯನಗುಡಿಯ ಸುರಪುರ ಸಂಸ್ಥಾನ ಇತಿಹಾಸ ಸಂಶೋಧನಾ ಕೇಂದ್ರವು ನಿರಂತರವಾಗಿ ಮಾಡುತ್ತಿದೆ. ಸಂಸ್ಥಾನಕ್ಕೆ ಸಂಬಂಧಿಸಿದ ಹೊರಬಂದ ಕೃತಿಗಳನ್ನು ಸಂಗ್ರಹಿಸಿ ಇಡಲಾಗಿದೆ.

ಅವುಗಳಲ್ಲಿ ಮುಖ್ಯವಾಗಿ ಮೆಡೋಸ್ ಟೇಲರ್ ರಚಿಸಿದ ‘ಸ್ಟೋರಿ ಆಫ್ ಮೈ ಲೈಫ್’(1882), ವಿ.ಡಿ. ಸಾವರಕರ್ ಬರೆದ 1857 ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಜಾದುನಾಥ ಸರ್ಕಾರ ಬಿಡುಗಡೆ ಮಾಡಿದ ‘ಹಿಸ್ಟರಿ ಆಫ್ ಔರಂಗಜೇಬ’(1930), ವಿ.ಡಿ. ದೇವರಕರ್ ರಚಿಸಿದ ಸದರನ್ ಇಂಡಿಯಾ 1857(1993). ದೇಸಾಯಿ ಪಾಂಡುರಂಗ ಬರೆದ ‘ಮದಗಜ ಮಲ್ಲ’ (1948),

ಶಿವರಾಮ ಬರೆದ ಕನ್ನಡದ ಕಲಿಗಳು(1967), ರೇವಣಸಿದ್ದಯ್ಯ ರುದ್ರಸ್ವಾಮಿ ಮಠ ಅವರು ರಚಿಸಿದ ‘ಸುರಪುರದ ಸಂಗೊಳ್ಳಿ ರಾಯಣ್ಣ’ (1975), ಜಯತೀರ್ಥ ರಾಜಪುರೋಹಿತ ಬರೆದ ಸುರಪುರದ ಶೂರ ನಾಯಕರು, ಕಪಟರಾಳ ಕೃಷ್ಣರಾವ್ ಬರೆದ ‘ಸುರಪುರ ಸಂಸ್ಥಾನ’,ಭಾಸ್ಕರ ರಾವ್ ಬರೆದ ‘ಮರೆತುಹೋದ ಸುರಪುರದ ಇತಿಹಾಸ’, ಖ್ಯಾತ ನಾಟಕಕಾರ ಎಲ್‌ಬಿಕೆ ಆಲ್ದಾಳರು ಬರೆದ ‘ಸುರಪುರ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ ರಾಜಾ ವೆಂಕಟಪ್ಪ ನಾಯಕ’ ಹೀಗೆ ಹಲವಾರು ಮಹತ್ವ ಕೃತಿಗಳು ಸಂಗ್ರಹಿಸಲಾಗಿದೆ.

ಇದನ್ನೂ ಓದಿ: ಸುರಪುರ ಸಂಸ್ಥಾನದ ಅಭಿವೃದ್ಧಿಗೆ ಶ್ರಮಿಸಿದಟೇಲರ್

‘ಇನ್ನೂ ಸಂಶೋಧನೆಯ ವಿವಿಧ ಮಗ್ಗಲುಗಳ ಶೋಧ ನಡೆದಿವೆ’ ಎನ್ನುತ್ತಾರೆ ಸಂಶೋಧನಾ ಕೇಂದ್ರ ಸಂಚಾಲಕ ಭಾಸ್ಕರರಾವ ಮುಡಬೂಳ.

ಆಸ್ಟ್ರೇಲಿಯಾದ ಪರ್ಥ್‌ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಪ್ರತಿಕ ಮುಖರ್ಜಿ ನೇತೃತ್ವದಲ್ಲಿ ಸುರಪುರ ಸಂಸ್ಥಾನ ಹಾಗೂ ಕಲೆ ಬಗ್ಗೆ ಎರಡು ಸಾಕ್ಷ್ಯಚಿತ್ರಗಳು ಬಂದಿವೆ. ಬ್ರಿಟಿಷ್ ಅಧಿಕಾರಿ ಮೆಡೋಸ್ ಟೇಲರ್ ಮರಿಮೊಮ್ಮಗ ಅಲ್ಬರ್ಟೋ ಟೇಲರ್ 2012ರಲ್ಲಿ ಸುರಪುರ ಸಂಸ್ಥಾನಕ್ಕೆ ಭೇಟಿ ನೀಡಿದ್ದರು.

ಸುರಪುರ ಸಂಸ್ಥಾನದ ಆಳ್ವಿಕೆಯಲ್ಲಿ ಜಾತಿ, ಧರ್ಮದ ಬಗ್ಗೆ ಕಿಂಚತ್ತು ಭೇದ ಭಾವ ಇರಲಿಲ್ಲ. 1857ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ್ ವಿರುದ್ಧ ಹಿಂದೂ– ಮುಸ್ಲಿಮರು ಜೊತೆಗೂಡಿ ಹೋರಾಟ ನಡೆಸಿ ಅಪ್ರತಿಮ ರಾಷ್ಟ್ರ ಪ್ರೇಮವನ್ನು ಮೆರೆದಿದ್ದಾರೆ.

ಇದಕ್ಕೆ ನಿದರ್ಶನ ಎನ್ನುವಂತೆ 300ವರ್ಷಗಳಿಂದ ಮುಸ್ಲಿಂ ಸಮುದಾ ಯದವರು ರಂಜಾನ್ ಹಾಗೂ ಬಕ್ರೀದ್ ಹಬ್ಬದಂದು ಪ್ರಾರ್ಥನೆ ಮಾಡಲು ದರ್ಗಾಕ್ಕೆ ತೆರಳುವಾಗ ಸಂಸ್ಥಾನದ ಅರಮನೆಯಿಂದ ಪಲ್ಲಕ್ಕಿಯಲ್ಲಿ ಪಟ್ಟಗತ್ತಿಯನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಿ ಬರುವ ಸಂಪ್ರದಾಯವಿದೆ. ಈ ಸಂಪ್ರದಾಯ ಹಿಂದೂ ಮುಸ್ಲಿಂರ ಭಾವೈಕ್ಯದ ಸಂಕೇತ ಎನ್ನುತ್ತಾರೆ ಸಂಶೋಧನಾ ಕೇಂದ್ರದ ಭಾಸ್ಕರರಾವ ಮುಡಬೂಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.