ADVERTISEMENT

ನಿಮ್ಮ ಸಮಸ್ಯೆಗಳಿಗೆ ನನ್ನನ್ನು ದೂಷಿಸಬೇಡಿ: ರಾಜೀವ್‌ ಚಂದ್ರಶೇಖರ್‌

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 11:17 IST
Last Updated 8 ಜುಲೈ 2019, 11:17 IST
   

ನವದೆಹಲಿ:ಅತೃಪ್ತ ಶಾಸಕರು ಬಿಜೆಪಿ ಸಂಸದ ರಾಜೀವ್‌ ಚಂದ್ರಶೇಖರ್‌ ಒಡೆತನದ ವಿಮಾನವನ್ನು ಬಳಸಿದ್ದನ್ನೇ ಆಧಾರವಾಗಿಟ್ಟುಕೊಂಡು ಬಿಜೆಪಿಯು ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಅವರ ಟ್ವೀಟ್‌ಗೆ ಸಂಸದ ರಾಜೀವ್‌ ತಿರುಗೇಟು ನೀಡಿದ್ದಾರೆ.

‘ನಿಮ್ಮಲ್ಲಿನ ಸಮಸ್ಯೆಗಳಿಗಾಗಿ ನನ್ನನ್ನು ದೂಷಿಸಬೇಡಿ,’ಎಂದು ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ವಿಧಾನಸಭೆ ಸದಸ್ಯತ್ವಕ್ಕೆ ಶನಿವಾರರಾಜೀನಾಮೆ ನೀಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಶಾಸಕರು ವಿಶೇಷ ವಿಮಾನದ ಮೂಲಕ ಮುಂಬೈಗೆ ಹಾರಿದ್ದರು. ಅವರು ಮುಂಬೈಗೆ ತೆರಳಲು ಬಳಸಿದ್ದು, ಬಿಜೆಪಿಯ ರಾಜ್ಯಸಭೆ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರ ಒಡೆತನದ ಜುಪಿಟರ್‌ ಕ್ಯಾಪಿಟಲ್‌ ಸಂಸ್ಥೆಯ ಲಘು ವಿಮಾನವನ್ನು. ಈ ಕುರಿತು ಮಾಧ್ಯಮಗಳು ವಿಸ್ತೃತ ವರದಿ ಪ್ರಕಟಿಸಿದ್ದವು.

ADVERTISEMENT

ಈ ವರದಿಗಳನ್ನೇ ಉಲ್ಲೇಖಿಸಿ ಇಂದು ಟ್ವೀಟ್‌ ಮಾಡಿದ್ದ ಪರಮೇಶ್ವರ್‌ ಅವರು, ‘ ರಾಜ್ಯದ ಮೈತ್ರಿ ಸರ್ಕಾರವನ್ನು ಬಿಜೆಪಿ ಅಸ್ಥಿರಗೊಳಿಸುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವೊಂದನ್ನು ಉರುಳಿಸಲು ಪ್ರಯತ್ನಿಸುವುದು ಮತ್ತು ರಾಜ್ಯ ತೀವ್ರ ಬರಗಾಲ ಎದುರಿಸುತ್ತಿರುವ ಈ ಸನ್ನಿವೇಶದಲ್ಲಿ ಹಿಂಬಾಗಿಲ ಮೂಲಕ ಸರ್ಕಾರ ರಚಿಸಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಕೃತ್ಯ,’ ಎಂದು ಅವರು ಬರೆದುಕೊಂಡಿದ್ದರು.

ಈ ಟ್ವೀಟ್‌ಗೆತಿರುಗೇಟು ನೀಡಿರುವರಾಜೀವ್‌ ಚಂದ್ರಶೇಖರ್‌, ‘ಪರಮೇಶ್ವರ ಅವರೇ ಇದು ವಾಣಿಜ್ಯ ಉದ್ದೇಶದ ಲಘು ವಿಮಾನ. ನಿಮ್ಮ ಸಚಿವರೂ ಸೇರಿದಂತೆ ಹಲವರು ಇದನ್ನು ಪ್ರಯಾಣದ ಉದ್ದೇಶಕ್ಕೆ ಬಳಸಿದ್ದಾರೆ.ಭ್ರಷ್ಟ ಮತ್ತು ಅವಕಾಶವಾದಿ ಮೈತ್ರಿಯಿಂದ ಉದ್ಭವಿಸಿದಸಮಸ್ಯೆಗಳಿಗಾಗಿ ವಿಮಾನವನ್ನಾಗಲಿ ಅಥವಾ ಬಿಜೆಪಿಯನ್ನಾಗಲಿ ಟೀಕಿಸಬೇಡಿ,’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.