ADVERTISEMENT

ಠಾಣೆ ಮುಚ್ಚಲು ಶಾಮಿಯಾನ ಬಳಕೆ: ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 15:38 IST
Last Updated 13 ಜೂನ್ 2024, 15:38 IST
ಬಿಜೆಪಿ ಧ್ವಜ
ಬಿಜೆಪಿ ಧ್ವಜ   

ಬೆಂಗಳೂರು: ವಿಐಪಿ ಆರೋಪಿಯನ್ನು ಕರೆದುಕೊಂಡು ಬಂದ ತಕ್ಷಣ ಇಡೀ ಠಾಣೆಗೆ ಶಾಮಿಯಾನ ಹಾಕಿ ಮುಚ್ಚಿದ್ದು ಮತ್ತು ಮಾಧ್ಯಮದವರ ಮೇಲೆ ಹಲ್ಲೆ ಮಾಡಿ, ಠಾಣೆ ಆವರಣದಲ್ಲಿ ದಿಗ್ಭಂಧನ ಹಾಕಿರುವುದು ಖಂಡನೀಯ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಹೇಳಿದರು.

ಇದು ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಕೈಗನ್ನಡಿ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಪ್ರತಿಯೊಬ್ಬರ ಮಾನ– ಪ್ರಾಣಕ್ಕೂ ದೊಡ್ಡ ಘನತೆ ಇದೆ. ಅಮಾಯಕರ ಪ್ರಾಣಹಾನಿಗೆ ಕಾರಣ ಆದವರ ವಿರುದ್ಧ ಕಾನೂನಿನಡಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು. ಇನ್ನು ಮುಂದೆ ಅಮಾಯಕರ ಪ್ರಾಣಹಾನಿ ಆಗದಂತೆ ಗೃಹ ಸಚಿವರು ಮತ್ತು ಪೊಲೀಸ್‌ ಇಲಾಖೆ ಕರ್ತವ್ಯ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಪೊಲೀಸ್‌ ಠಾಣೆಗೆ 144ನೇ ಸೆಕ್ಷನ್‌ ಹಾಕುವುದು ಎಂದರೆ ಪೊಲೀಸ್ ಠಾಣೆ ರಕ್ಷಣೆಯ ಹೊಣೆಯನ್ನು ಖಾಸಗಿಯವರಿಗೆ ಕೊಟ್ಟಂತೆ. ಅಂದರೆ, ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಹೋಗಿದೆ ಎಂಬುದಕ್ಕೆ ಇದು ನಿದರ್ಶನ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜನರಿಗೆ ತನಿಖಾ ಸಂಸ್ಥೆ ಮತ್ತು ಪೊಲೀಸ್‌ ಇಲಾಖೆ ಬಗ್ಗೆ ವಿಶ್ವಾಸ ಕಡಿಮೆ ಆಗಬಾರದು. ಇದು ಪೊಲೀಸ್‌ ಇಲಾಖೆಯ ಗುರುತರ ಜವಾಬ್ದಾರಿ. ಆ ನಿಟ್ಟಿನಲ್ಲಿ ಎಸ್‌ಐಟಿ, ಪೊಲೀಸ್‌ ಠಾಣೆಗಳ ನಡವಳಿಕೆ ಜನರಲ್ಲಿ ವಿಶ್ವಾಸ ಮೂಡಿಸುವಂತೆ ಇರಬೇಕು ಎಂದು ರಾಜೀವ್‌ ಹೇಳಿದರು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಹೋಗಿದೆ. ಅಮಾಯಕರ ಕೊಲೆಗಳು ನಡೆಯುತ್ತಿವೆ. ಈಗಿನ ಸರ್ಕಾರದಲ್ಲಿ ಏನು ಮಾಡಿಯೂ ದಕ್ಕಿಸಿಕೊಳ್ಳಬಹುದು. ಬಚಾವ್‌ ಆಗಬಹುದು ಎಂಬ ಭಾವನೆಯಿಂದ ಕ್ಷುಲ್ಲಕ ಕಾರಣಕ್ಕೆ ಕೊಲೆಗಳು ನಡೆಯುತ್ತಿವೆ. ಸರ್ಕಾರ ಕಾನೂನು–ಸುವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಬೇಕು ಎಂದೂ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.