ADVERTISEMENT

ಪರೀಕ್ಷೆಗಳ ವೆಬ್‌ಸ್ಟ್ರೀಮಿಂಗ್‌,ಒಂದೇ ದಿನದಲ್ಲಿ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್‌

ರಾಜೀವ್‌ ಗಾಂಧಿ ವಿಶ್ವವಿದ್ಯಾಲಯದಲ್ಲಿ ಪರೀಕ್ಷಾ ವ್ಯವಸ್ಥೆ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 20:15 IST
Last Updated 24 ಜನವರಿ 2019, 20:15 IST
   

ಬೆಂಗಳೂರು: ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಇನ್ನು ಮುಂದೆ ಎಲ್ಲ ಪರೀಕ್ಷೆಗಳನ್ನು ವೆಬ್‌ಸ್ಟ್ರೀಮಿಂಗ್‌ ಮಾಡುವುದರ ಜೊತೆಗೆ, ಒಂದೇ ದಿನದಲ್ಲಿ ಉತ್ತರ ಪತ್ರಿಕೆಗಳ ಡಿಜಿಟಲ್‌ ಮೌಲ್ಯಮಾಪನವನ್ನೂ ನಡೆಸಲಿದೆ.

ಇವೆರಡೂ ವ್ಯವಸ್ಥೆಗಳು ದೇಶದಲ್ಲೇ ಪ್ರಥಮವಾಗಿದ್ದು, ಇದರಿಂದ ಪರೀಕ್ಷಾ ವ್ಯವಸ್ಥೆಯಲ್ಲಿ ಅಕ್ರಮ ತಡೆಗಟ್ಟಲು ಸಾಧ್ಯವಿದೆ ಎಂದು ಕುಲಪತಿ ಡಾ.ಎಸ್‌.ಸಚ್ಚಿದಾನಂದ್ ಮಾಧ್ಯಮಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ವಿಶ್ವವಿದ್ಯಾಲಯ ನಡೆಸುವ ಪರೀಕ್ಷಾ ಪ್ರಕ್ರಿಯೆಯನ್ನು ವೆಬ್‌ಸ್ಟ್ರೀಮಿಂಗ್‌ ಮೂಲಕ ನೇರ ಪ್ರಸಾರ ಮಾಡಲಾಗುವುದು. ಪರೀಕ್ಷಾ ಹಾಲ್‌ನಲ್ಲಿ ಪ್ರಶ್ನೆ ಪತ್ರಿಕೆಯನ್ನು ಕಂಪ್ಯೂಟರ್‌ನಲ್ಲಿ ಡೌನ್‌ ಲೋಡ್‌ ಮಾಡಿ, ಅವುಗಳ ಪ್ರತಿಗಳನ್ನು ಮುದ್ರಿಸಿ ಅಭ್ಯರ್ಥಿಗಳಿಗೆ ಹಂಚುವುದರಿಂದ ಹಿಡಿದು ಉತ್ತರ ಪತ್ರಿಕೆ ಹಿಂದಿರುಗಿಸಿ ಮಾಲ್ಯಮಾಪನಕ್ಕೆ ಕಳುಹಿಸುವವರೆಗಿನ ಪ್ರಕ್ರಿಯೆ ವೆಬ್‌ಸ್ಟ್ರೀಮಿಂಗ್‌ ನಡೆಯಲಿದೆ. ವಿಶ್ವವಿದ್ಯಾಲಯದ ಕಂಟ್ರೋಲ್‌ ರೂಂನಲ್ಲಿ ಪರೀಕ್ಷಾ ಕೇಂದ್ರಗಳನ್ನು ನಿಗಾ ಇಡಲಾಗುವುದು. ರೆಕಾರ್ಡ್‌ ಮಾಡಿದ್ದನ್ನು ಸುರಕ್ಷಿತವಾಗಿ ಇಡಲಾಗುವುದು ಎಂದು ಸಚ್ಚಿದಾನಂದ್‌ ತಿಳಿಸಿದರು.

ADVERTISEMENT

ಈ ಪದ್ಧತಿ ಜಾರಿಗೆ ತರುವುದರಿಂದ ಆಯಾ ಕಾಲೇಜಿನ ವಿದ್ಯಾರ್ಥಿಗಳಿಗೆ ಅದೇ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ಪಿಟುಝಡ್‌ ಕ್ಯಾಮೆರಾ ಅಳವಡಿಸಲಾಗುವುದು ಎಂದರು.

ಪರೀಕ್ಷಾ ಕೇಂದ್ರಗಳಿಗೆ ವೆಬ್‌ಸ್ಟ್ರೀಮಿಂಗ್‌ ಉಪಕರಣಗಳಿಗೆ ತಗಲುವ ವೆಚ್ಚವನ್ನು ಕಾಲೇಜುಗಳ ಆಡಳಿತ ಮಂಡಳಿಗಳೇ ಭರಿಸಬೇಕಾಗುತ್ತದೆ ಎಂದು ಕುಲಪತಿ ತಿಳಿಸಿದರು.

‘ವೆಬ್‌ಸ್ಟ್ರೀಮಿಂಗ್‌ ಒಂದು ವಿಶಿಷ್ಟ ಪರಿಕಲ್ಪನೆ, ಪರೀಕ್ಷಾ ಕೇಂದ್ರಗಳ ಚಟುವಟಿಕೆಗಳ ನೇರ ಪ್ರಸಾರವನ್ನು ಸುರಕ್ಷಿತ ಅಂತರ್ಜಾಲ ಮತ್ತು ಇದಕ್ಕೆಂದೇ ಮೀಸಲಾದ ವೆಬ್‌ಸೈಟ್‌ ಮೂಲಕ ಮಾಡಲಾಗುವುದು’ ಎಂದು ಸಚ್ಚಿದಾನಂದ್‌ ಹೇಳಿದರು.

ಡಿಜಿಟಲ್‌ ಮೌಲ್ಯಮಾಪನ ಕೇಂದ್ರ: ಉತ್ತರ ಪತ್ರಿಕೆಗಳನ್ನು ತ್ವರಿತಗತಿಯಲ್ಲಿ ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟಿಸಲು ಸಹಾಯಕವಾಗಲು ಕಾಲೇಜುಗಳಲ್ಲಿ ಡಿಜಿಟಲ್‌ ಮೌಲ್ಯಮಾಪನ ಕೇಂದ್ರಗಳನ್ನು ಸ್ಥಾಪಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಕೇಂದ್ರಗಳಲ್ಲಿ ಡಿಜಿಟಲ್‌ ಮೌಲ್ಯಮಾಪನಕ್ಕಾಗಿ ಕಂಪ್ಯೂಟರ್‌ಗಳನ್ನು ಮತ್ತು ಇಂಟರ್‌ನೆಟ್‌ ಸಂಪರ್ಕ ಸೌಲಭ್ಯಗಳನ್ನು ವಿಶ್ವವಿದ್ಯಾಲಯವೇ ಒದಗಿಸಲಿದೆ ಎಂದರು.

ಪರೀಕ್ಷೆ ಮುಗಿದ ತಕ್ಷಣ ಸ್ಕ್ಯಾನಿಂಗ್‌: ಪರೀಕ್ಷೆ ಪೂರ್ಣಗೊಂಡ ಬಳಿಕ ಪರೀಕ್ಷಾ ಕೇಂದ್ರಗಳಲ್ಲಿಯೇ ಎಲ್ಲ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್‌ ಮಾಡುವ ಪದ್ಧತಿ ಇದೇ ವರ್ಷ ಜಾರಿಗೆ ತರಲಾಗುತ್ತಿದೆ ಎಂದು ಸಚ್ಚಿದಾನಂದ್ ತಿಳಿಸಿದರು.

ಈಗ ಕೊರಿಯರ್‌ ಮೂಲಕ ವಿಶ್ವವಿದ್ಯಾಲಯಕ್ಕೆ ಉತ್ತರ ಪತ್ರಿಕೆಗಳನ್ನು ಕಳುಹಿಸುವ ವ್ಯವಸ್ಥೆ ಇದೆ. ಅಲ್ಲಿ ಉತ್ತರ ಪತ್ರಿಕೆಗಳನ್ನು ಸ್ಕ್ಯಾನಿಂಗ್‌ ಮಾಡಲಾಗುತ್ತದೆ. ಬಳಿಕ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪಕರಿಗೆ ಕಳುಹಿಸಲಾಗುತ್ತಿತ್ತು. ಈ ಪ್ರಕ್ರಿಯೆಗೆ ಒಂದು ತಿಂಗಳು ಬೇಕಾಗುತ್ತದೆ. ಹೊಸ ವ್ಯವಸ್ಥೆಯಿಂದ ಪ್ರತಿ ಪರೀಕ್ಷಾ ಕೇಂದ್ರದಲ್ಲೂ 500–600 ಉತ್ತರ ಪತ್ರಿಕೆಗಳನ್ನು ಎರಡರಿಂದ ಮೂರು ಗಂಟೆಗಳಲ್ಲಿ ಸ್ಕ್ಯಾನಿಂಗ್‌ ಮಾಡಬಹುದು. ಮೌಲ್ಯಮಾಪಕರಿಗೆ ಬೇಗನೆ ಉತ್ತರ ಪತ್ರಿಕೆ ಕಳುಹಿಸಬಹುದಾಗಿದೆ. ಮೌಲ್ಯಮಾಪನ ಮಾಡಿದ ಮಾರನೇ ದಿನವೇ ಫಲಿತಾಂಶ ಸಿಗುತ್ತದೆ ಎಂದರು.

ಕಾಲೇಜುಗಳಲ್ಲಿ ಸಂಶೋಧನೆ ಒತ್ತು

ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ ಮೂಲ ಸಂಶೋಧನೆ, ಸಹಯೋಗದ ಸಂಶೋಧನೆ ಮತ್ತು ಥೀಮ್‌ ಆಧಾರಿತ ಸಂಶೋಧನೆ ಒತ್ತು ನೀಡಲಿದೆ, ಇದಕ್ಕಾಗಿ ವರ್ಷಕ್ಕೆ ₹20 ಕೋಟಿ ಹಣ ನಿಗದಿ ಮಾಡಲಾಗಿದೆ ಎಂದು ಸಚ್ಚಿದಾನಂದ ತಿಳಿಸಿದರು.

ಕಾಲೇಜು ಮಟ್ಟದಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ವೈದ್ಯಕೀಯ ಕಾಲೇಜುಗಳು ತಲಾ ₹1 ಕೋಟಿ, ದಂತ ಮತ್ತು ಆಯುಷ್‌ ಕಾಲೇಜುಗಳು ತಲಾ ₹ 50 ಲಕ್ಷ, ಫಾರ್ಮಸಿ ಹಾಗೂ ಅಲೈಡ್‌ ಹೆಲ್ತ್ ಸೈನ್ಸ್‌ ಕಾಲೇಜುಗಳು ತಲಾ ₹ 10 ಲಕ್ಷ ಮೀಸಲಿಡಬೇಕು ಎಂದು ಸೂಚಿಸಲಾಗಿದೆ ಎಂದರು.

* ರಾಮನಗರದಲ್ಲಿ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಜಮೀನು ಹಸ್ತಾಂತರ ಆದ ತಕ್ಷಣವೇ ಕಟ್ಟಡ ನಿರ್ಮಾಣ ಆರಂಭ
- ಪ್ರೊ.ಸಚ್ಚಿದಾನಂದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.