ಬೆಂಗಳೂರು: ಕೊರೊನಾ ಸೋಂಕಿತ ರೋಗಿಗಳನ್ನು ಸ್ಥಳಾಂತರ ಮಾಡಿದರೂಕೋವಿಡ್ ಆಸ್ಪತ್ರೆ ಎಂಬ ಹಣೆಪಟ್ಟಿ ದೊರೆತ ಪರಿಣಾಮ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಗೆ ಬರುವ ಸಾಮಾನ್ಯ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.
ಶ್ವಾಸಕೋಶದ ಕಾಯಿಲೆಗಳ ಚಿಕಿತ್ಸೆ ಹಾಗೂ ಎದೆಗೂಡಿನ ಶಸ್ತ್ರಚಿಕಿತ್ಸೆಗೆಸಂಸ್ಥೆ ಹೆಸರುವಾಸಿಯಾಗಿದ್ದು, ಇಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಹೊರರಾಜ್ಯಗಳಿಂದಲೂ ರೋಗಿಗಳು ಬರುತ್ತಾರೆ. ಸರ್ಕಾರ ಕೂಡ ಯಾವುದೇ ಹೊಸ ಸೋಂಕು ಕಾಣಿಸಿಕೊಂಡರೂ ಚಿಕಿತ್ಸೆಗೆ ಈ ಸಂಸ್ಥೆಯನ್ನೇ ಆಯ್ಕೆ ಮಾಡಿಕೊಳ್ಳುತ್ತದೆ. ಸಾರ್ಸ್, ಎಬೋಲಾ, ಎಚ್1ಎನ್1, ನಿಫಾ ಸೇರಿದಂತೆ ಹಲವು ರೋಗಗಳು ರಾಜ್ಯಕ್ಕೆ ಬಂದಾಗ ಈ ಸಂಸ್ಥೆಯಲ್ಲೇ ಚಿಕಿತ್ಸೆ ನೀಡಲಾಗಿದೆ. ಕೊರೊನಾ ಭೀತಿ ದೇಶವನ್ನು ಆವರಿಸುತ್ತಿದ್ದಂತೆ ಸಕಲ ರೀತಿಯಲ್ಲಿಯೂ ಸಜ್ಜಾಗುವಂತೆ ಸಂಸ್ಥೆಗೆ ಸರ್ಕಾರ ನಿರ್ದೇಶನ ನೀಡಿತ್ತು. ಪ್ರತ್ಯೇಕ ವಾರ್ಡ್‌ಗಳನ್ನು ನಿರ್ಮಿಸಿ, ಅಲ್ಲಿನ ವೈದ್ಯರು 12 ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.
ಕೊರೊನಾ ಸೋಂಕಿತರಿಗೆ ಒಂದೇ ಕಡೆ ಚಿಕಿತ್ಸೆ ಸಿಗಬೇಕೆಂಬ ಕೋವಿಡ್ ಟಾಸ್ಕ್‌ಫೋರ್ಸ್ ಸೂಚನೆ ಅನುಸಾರ ವಿಕ್ಟೋರಿಯಾ ಹಾಗೂ ಬೌರಿಂಗ್ ಆಸ್ಪತ್ರೆ
ಯನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗಿದೆ. ಇದರಿಂದಾಗಿ ರಾಜೀವ್‌ಗಾಂಧಿ ಎದೆರೋಗಗಳ ಸಂಸ್ಥೆ ಕೊರೊನಾ ಸೋಂಕಿತರಿಂದ ಮುಕ್ತವಾಗಿ ಒಂದು ತಿಂಗಳಾಗಿದೆ. ಪ್ರತ್ಯೇಕ ವಾರ್ಡ್‌ನಲ್ಲಿಸೋಂಕು ಶಂಕಿತರನ್ನು ಮಾತ್ರ ದಾಖಲಿಸಿಕೊಂಡು, ಚಿಕಿತ್ಸೆ ನೀಡಲಾಗುತ್ತಿದೆ. ಆದರೂ ಕೋವಿಡ್ ಆಸ್ಪತ್ರೆ ಎಂದು ಬಿಂಬಿಸಲ್ಪಟ್ಟ ಪರಿಣಾಮ ಹೊರರೋಗಿಗಳ ಸಂಖ್ಯೆ ಈಗ 50ಕ್ಕೆ ಇಳಿಕೆಯಾಗಿದೆ. ಮೊದಲು ನಿತ್ಯ 250ರಿಂದ 300 ರೋಗಿಗಳು ಬರುತ್ತಿದ್ದರು.
ತಪ್ಪು ಕಲ್ಪನೆ: ‘ಮೂರು ತಿಂಗಳು ಹಗಲು ರಾತ್ರಿ ಎನ್ನದೇ ಕೊರೊನಾ ಸೋಂಕಿತರು ಹಾಗೂ ಸೋಂಕು ಶಂಕಿತರಿಗೆ ಚಿಕಿತ್ಸೆ ನೀಡಿದ್ದೇವು. ಈಗ ಸೋಂಕು ಶಂಕಿತರನ್ನು ಮಾತ್ರ ದಾಖಲಿಸಿಕೊಳ್ಳಲಾಗುತ್ತದೆ. ಅವರಿಗಾಗಿಯೇ ಪ್ರತ್ಯೇಕ ವಾರ್ಡ್ ನಿರ್ಮಿಸಿದ್ದೇವೆ. ಪ್ರಯೋಗಾಲಯದ ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಲ್ಲಿ ಅವರನ್ನು ಕೂಡಲೇ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರ ಮಾಡುತ್ತೇವೆ. ನಮ್ಮಲ್ಲಿ ಈಗ ಯಾವುದೇ ಕೋವಿಡ್ ರೋಗಿಯಿಲ್ಲ. ಜನತೆ ನಿರ್ಭಿತಿಯಿಂದ ಚಿಕಿತ್ಸೆ ಬರಬಹುದು’ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸಿ. ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಾರ್ವಜನಿಕ ಸಾರಿಗೆ ಪ್ರಾರಂಭವಾದ ಬಳಿಕ ಮೊದಲಿನಂತೆ ರೋಗಿಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. ವೈದ್ಯರು ಈಗಲೂ ವೈಯಕ್ತಿಕ ಸುರಕ್ಷಾ ಸಾಧನ ಧರಿಸಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಆಸ್ಪತ್ರೆಗೆ ಹೋದಲ್ಲಿ ನಮಗೂ ಸೋಂಕು ತಗುಲುತ್ತದೆ ಎಂಬ ತಪ್ಪು ಕಲ್ಪನೆಯಿಂದ ಜನತೆ ಹೊರಬರಬೇಕು’ ಎಂದರು.
***
ಹೆಚ್ಚಾಗಿ ರೆಫರಲ್ ಪ್ರಕರಣಗಳು ಬರುತ್ತಿವೆ. ಎಲ್ಲ ರೋಗಿಗಳಿಗೂ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಹೊರ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.
-ಡಾ.ಸಿ. ನಾಗರಾಜ್, ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.