ADVERTISEMENT

ಕುಲಪತಿ ನೇಮಕ ಸಮಿತಿಗೆ ಎಂಜಿನಿಯರಿಂಗ್‌ ಹಿನ್ನೆಲೆಯ ವಿದ್ಯಾಶಂಕರ್‌: ಆಕ್ಷೇಪ

ರಾಜೀವಗಾಂಧಿ ವಿವಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 19:57 IST
Last Updated 20 ಸೆಪ್ಟೆಂಬರ್ 2021, 19:57 IST
ಪ್ರೊ.ಕೆ.ಎಸ್‌.ರಂಗಪ್ಪ
ಪ್ರೊ.ಕೆ.ಎಸ್‌.ರಂಗಪ್ಪ   

ಮೈಸೂರು: ‘ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕಾಗಿ ರಚಿಸಿರುವ ಶೋಧನಾ ಸಮಿತಿಯ ಮುಖ್ಯಸ್ಥರಾಗಿ ಎಂಜಿನಿಯರಿಂಗ್‌ ಮೂಲದವರಾದ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌ ಅವರನ್ನು ನಾಮನಿರ್ದೇಶನ ಮಾಡಿರುವ ರಾಜ್ಯ ಸರ್ಕಾರದ ನಡೆ ಸರಿಯಲ್ಲ’ ಎಂದು ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆಯ (ಎಫ್‌ವಿಸಿಕೆ) ಅಧ್ಯಕ್ಷ ಪ್ರೊ.ಕೆ.ಎಸ್‌.ರಂಗಪ್ಪ ಬೇಸರ ವ್ಯಕ್ತಪಡಿಸಿದರು.

‘ಪ್ರೊ.ಎಸ್‌.ವಿದ್ಯಾಶಂಕರ್‌ ಅವರನ್ನು ತಿರಸ್ಕರಿಸಿ, ಆರೋಗ್ಯ ವಿಜ್ಞಾನ ವಿಷಯದಲ್ಲಿ ಆಳವಾದ ಜ್ಞಾನ ಇರುವವರನ್ನು ಸೂಚಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ರಾಜ್ಯಪಾಲರಿಗೆ ವೇದಿಕೆಯು ಪತ್ರ ಬರೆದಿದೆ’ ಎಂದು ಸೋಮವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಶೋಧನಾ ಸಮಿತಿಯು ಉತ್ತಮ ಶಿಕ್ಷಣ ತಜ್ಞರನ್ನು ಒಳಗೊಂಡಿರಬೇಕು. ಪಾರದರ್ಶಕತೆಯ ದೃಷ್ಟಿಯಿಂದ, ಈಗಾಗಲೇ ವಿಶ್ವವಿದ್ಯಾಲಯವೊಂದರ ಕುಲಪತಿ ಆಗಿರುವವರನ್ನು ಸಮಿತಿಗೆ ನೇಮಿಸಬಾರದು. ಮುಖ್ಯಮಂತ್ರಿ ಅವರಿಗೂ ಈ ಕುರಿತು ಮರು ಪರಿಶೀಲಿಸುವಂತೆ ಪತ್ರ ಬರೆಯಲಾಗಿದೆ. ಶೋಧನಾ ಸಮಿತಿಯಲ್ಲಿ ಎಫ್‌ವಿಸಿಕೆ ಸದಸ್ಯರಿಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ’ ಎಂದರು.

ADVERTISEMENT

‘ರಾಷ್ಟ್ರೀಯ ಶಿಕ್ಷಣ ನೀತಿಯು ಪರಿಣಾಮಕಾರಿಯಾಗಿ ಜಾರಿಗೊಳ್ಳಲು ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಶೀಘ್ರ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ವೇದಿಕೆಯಲ್ಲಿ 70 ಮಂದಿ ವಿಶ್ರಾಂತ ಕುಲಪತಿಗಳಿದ್ದು, ಸರ್ಕಾರವು ಶಿಕ್ಷಣದ ಉನ್ನತೀಕರಣಕ್ಕಾಗಿ ಅವರನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.