ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಯಲ್ಲಾಪುರ ಬಿಜೆಪಿ ಶಾಸಕ ಅರಬೈಲ್ ಶಿವರಾಂ ಹೆಬ್ಬಾರ್ ಮತದಾನಕ್ಕೆ ಗೈರಾದರು. ಉಳಿದ 222 ಶಾಸಕರು ಮತ ಚಲಾಯಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆಯವರೆಗೂ ನಡೆಯಿತು. ಕಾಂಗ್ರೆಸ್‌ನ 134, ಬಿಜೆಪಿಯ 65, ಜೆಡಿಎಸ್‌ನ 19, ಇಬ್ಬರು ಪಕ್ಷೇತರರು, ಸರ್ವೋದಯ ಕರ್ನಾಟಕ ಪಕ್ಷ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ತಲಾ ಒಬ್ಬರು ಮತ ಚಲಾಯಿಸಿದರು.
ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅಡ್ಡ ಮತದಾನ ಮಾಡಿರುವುದನ್ನು ಬಿಜೆಪಿಯ ಚುನಾವಣಾ ಏಜೆಂಟರು ಖಚಿತಪಡಿಸಿದ್ದಾರೆ. ಶಿವರಾಂ ಹೆಬ್ಬಾರ್ ಮತದಾನದಿಂದ ದೂರ ಉಳಿದರು. ಇದರಿಂದಾಗಿ ಬಿಜೆಪಿಯ ಎರಡು ಮತಗಳು ಕೈತಪ್ಪಿವೆ.
ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಬಹುತೇಕ ಶಾಸಕರು ಮತ ಚಲಾಯಿಸಿದ್ದರು. ಶಿವರಾಂ ಹೆಬ್ಬಾರ್ ಮತ್ತು ಹನೂರು ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಆರ್. ಮಂಜುನಾಥ್ ಮತ ಚಲಾಯಿಸುವುದು ಬಾಕಿ ಇತ್ತು. ಮಂಜುನಾಥ್ ಕೊನೆಯವರಾಗಿ ಮತ ಚಲಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.